ನವದೆಹಲಿ(ಅ.12): ದೇಶ ವಿರೋಧಿ ಘೋಷಣೆ ಕೂಗಿದ ಅರೋಪ ಸಂಬಂಧ ಜವಾಹಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಮುಖಂಡ ಕನ್ಹಯ್ಯಾ ಕುಮಾರ್ ಹಾಗೂ ಆತನ ಸಂಗಡಿಗರಾದ 15 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ ಜೆಎನ್‌'ಯು ಕ್ರಮವನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ. ಈ ಮೂಲಕ ಕನ್ಹಯ್ಯಾ ಕುಮಾರ್'ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ದೇಶ ವಿರೋಧಿ ಘೋಷಣೆ ಕೂಗಿದ ಆರೋಪಕ್ಕೆ ಗುರಿಯಾದ ವಿದ್ಯಾರ್ಥಿಗಳಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ಅವಕಾಶವನ್ನೇ ನೀಡದೇ ಅಮಾನತು ಶಿಕ್ಷೆ ವಿಧಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ದಾಖಲೆಗಳನ್ನು ಪರಿಶೀಲಿಸಲು ಅವಕಾಶ ನೀಡಬೇಕು ಮತ್ತು ಅವರನ್ನು ವಿಚಾರಣೆ ನಡೆಸಿದ ಬಳಿಕ ಹೊಸದಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಕೋರ್ಟ್ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿದೆ.

ಸಂಸತ್ ದಾಳಿಯ ಉಗ್ರ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ವಿರೋಧಿಸಿ ಕಳೆದ ವರ್ಷ ಫೆ.9ರಂದು ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಕನ್ಹಯ್ಯಾ ಕುಮಾರ್ ಹಾಗೂ ಆತನ ಸಂಗಡಿಗರು ದೇಶ ವಿರೋಧಿ ಘೋಷಣೆ ಕೂಗಿದ್ದಾರೆ ಎಂಬ ಆರೋಪದಡಿ ಆತನ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕನ್ಹಯ್ಯಾ ಸಹಪಾಠಿಗಳಾದ ಉಮರ್ ಖಾಲಿದ್‌'ನನ್ನು ಡಿಸೆಂಬರ್'ವರೆಗೆ ಅಮಾನತು ಮಾಡಲಾಗಿತ್ತು. ಇನ್ನು ಅನಿರ್ಬನ್ ಭಟ್ಟಾಚಾರ್ಯನನ್ನು 5 ವರ್ಷಗಳ ಕಾಲ ಡಿಬಾರ್ ಮಾಡಲಾಗಿತ್ತು.

ಫೆ.9ರ ಆ ಘಟನೆಯ ನಂತರ ದೇಶ ದ್ರೋಹ ಆರೋಪದಡಿ ಕನ್ಹಯ್ಯಾ, ಖಾಲಿದ್ ಹಾಗೂ ಭಟ್ಟಚಾರ್ಯ ಅವರನ್ನು ಬಂಧಿಸಲಾಗಿತ್ತು. ಆ ಬಳಿಕ ಅವರ ಮೇಲೆ ಆರೋಪ ಪಟ್ಟಿ ಸಲ್ಲಿಸದ ಕಾರಣ ಅವರು ಜಾಮೀನಿನ ಮೇಲೆ ಹೊರಬಂದಿದ್ದರು.