ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವ ಬೆನ್ನಲ್ಲೇ, ದೆಹಲಿ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಜಯ್‌ ಮಾಕನ್‌ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಅನಾರೋಗ್ಯ ಸಮಸ್ಯೆಯಿಂದಾಗಿ ತಾವು ದೆಹಲಿ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಮಾಕನ್‌ ತಮ್ಮ ರಾಜೀನಾಮೆ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಶುಕ್ರವಾರ ಮಾತನಾಡಿದ ಮಾಕನ್‌, ‘ನನ್ನ ರಾಜೀನಾಮೆಯನ್ನು ಪಕ್ಷ ಅಂಗೀಕರಿಸಿದೆ. ಆದಾಗ್ಯೂ, 2019ರ ಲೋಕಸಭಾ ಚುನಾವಣೆಗೆ ಪಕ್ಷಕ್ಕಾಗಿ ದುಡಿಯುತ್ತೇನೆ,’ ಎಂದಿದ್ದಾರೆ.

‘ಕಳೆದ ವರ್ಷದ ಸೆಪ್ಟೆಂಬರ್‌ನಲ್ಲೇ ರಾಜೀನಾಮೆ ಸಲ್ಲಿಸಿದ್ದೆ. ಆದರೆ, ಅದು ಅಂಗೀಕಾರವಾಗಿರಲಿಲ್ಲ. ಇದೀಗ ಮತ್ತೊಮ್ಮೆ ರಾಹುಲ್‌ ಅವರನ್ನು ಭೇಟಿ ಮಾಡಿ, ರಾಜೀನಾಮೆ ಅಂಗೀಕರಿಸುವಂತೆ ಮನವಿ ಮಾಡಿದ್ದೆ,’ ಎಂದು ಹೇಳಿದ್ದಾರೆ.