ಕಾವೇರಿ ಎಸ್‌.ಎಸ್‌.

ಬೆಂಗಳೂರು :  ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಸೂಕ್ತ ಸಮಯದಲ್ಲಿ ಪಠ್ಯ ಪುಸ್ತಕ ಪೂರೈಕೆಯಾಗದಿದ್ದರೆ ಶಾಲೆಗಳಲ್ಲಿ ಹಾಜರಾತಿ ಇಳಿಕೆ ಆಗುವುದಿಲ್ಲವೇ? ಮಕ್ಕಳು ಶಾಲೆಗಳಲ್ಲಿ ಸುಮ್ಮನೆ ಕುಳಿತು ಬರುವ ಪರಿಸ್ಥಿತಿ ನಿರ್ಮಿಸುವುದು ಸರಿಯೇ?

ಹೀಗೆಂದು ರಾಜ್ಯದಲ್ಲಿನ ಉರ್ದು ಶಾಲೆಯ ಮಕ್ಕಳ ಪೋಷಕರು ಪ್ರಶ್ನಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆ ಆರಂಭವಾಗಿ ತಿಂಗಳು ಪೂರ್ಣಗೊಳ್ಳುತ್ತಿದೆ. ಆದರೆ, ಇದುವರೆಗೂ ರಾಜ್ಯಾದ್ಯಂತ ಸರ್ಕಾರಿ ಉರ್ದು ಶಾಲೆಗಳಿಗೆ ಪಠ್ಯ ಪುಸ್ತಕಗಳು ಪೂರೈಕೆ ಆಗದೆ, ಲಕ್ಷಾಂತರ ವಿದ್ಯಾರ್ಥಿಗಳು ಕಲಿಕೆ ಇಲ್ಲದೆ ಆತಂಕದಲ್ಲಿ ಮುಳುಗಿದ್ದಾರೆ. 2018-19ನೇ ಶೈಕ್ಷಣಿಕ ಸಾಲಿನಲ್ಲಿ 1 ರಿಂದ 7ನೇ ತರಗತಿವರೆಗೆ ಹಲವು ವಿದ್ಯಾರ್ಥಿಗಳಿಗೆ ಹೊಸ ಪಠ್ಯ ಪುಸ್ತಕ ಪೂರೈಕೆ ಆಗದ ಕಾರಣ, ಶಾಲೆಗಳಲ್ಲಿ ಸುಮ್ಮನೆ ಕುಳಿತು ಮನೆಗೆ ಮರಳುವಂತಾಗಿದೆ.

ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಆದರೆ, ಹೊಸ ಪಠ್ಯ ಪುಸ್ತಕ ಪೂರೈಕೆ ಆಗದ ಕಾರಣ, ಶಾಲೆಗಳಲ್ಲಿ ಸುಮ್ಮನೆ ಕುಳಿತು ಮನೆಗೆ ಮರಳುತ್ತಿರುವ ಆರೋಪ ಕೇಳಿ ಬಂದಿದೆ. ಕೆಲ ಶಾಲೆಗಳಲ್ಲಿ ಕಳೆದ ವರ್ಷದ ಪುಸ್ತಕಗಳನ್ನು ಬಳಸಿಕೊಂಡು ಮಕ್ಕಳಿಗೆ ಕಲಿಸಲಾಗುತ್ತಿದೆ. ಆದರೆ, ಮಕ್ಕಳಿಗೆ ಮಾತ್ರ ಪುಸ್ತಕಗಳು ದೊರೆಯುವ ಭಾಗ್ಯವಿಲ್ಲ.

ಈ ಬೆಳವಣಿಗೆಯಿಂದ ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಪೋಷಕರು ಗರಂ ಆಗಿದ್ದಾರೆ. ಉರ್ದು ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಹಿಂದೇಟು ಹಾಕುತ್ತಾರೆ. ಶಾಲೆಗಳಲ್ಲಿ ಮೂಲಸೌಕರ್ಯ ಹೋಗಲಿ, ಸೂಕ್ತ ಸಮಯಕ್ಕೆ ಮಕ್ಕಳಿಗೆ ಪಠ್ಯಪುಸ್ತಕಗಳೇ ಪೂರೈಕೆ ಆಗದಿದ್ದರೆ ಕಲಿಕೆ ಹೇಗೆ? ಖಾಸಗಿ ಶಾಲೆಗಳ ಹಾವಳಿ ಹೆಚ್ಚಿರುವಾಗ, ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟಹೆಚ್ಚಿಸಲು ಗಮನ ನೀಡಬೇಕು ಎಂಬುದು ಪೋಷಕರ ಅಭಿಪ್ರಾಯ.

ನಾಲ್ಕು ಸಾವಿರ ಶಾಲೆಗಳಿಗೆ ಪೂರೈಕೆ ಇಲ್ಲ:

ಬೆಂಗಳೂರು ವ್ಯಾಪ್ತಿಯಲ್ಲಿ 350, ತುಮಕೂರು 166, ಕೋಲಾರ 85, ರಾಮನಗರ 65 ಸೇರಿದಂತೆ ರಾಜ್ಯದಲ್ಲಿ 4 ಸಾವಿರಕ್ಕೂ ಅಧಿಕ ಉರ್ದು ಶಾಲೆಗಳಿವೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿಯೇ ಪಠ್ಯ ಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸುವುದಾಗಿ ಮತ್ತು ಶಾಲೆ ಆರಂಭದ ದಿನವೇ ಅವುಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ತಿಳಿಸಿತ್ತು. ಆದರೆ, ಇದುವರೆಗೂ ಕನ್ನಡ (ದ್ವಿತೀಯ ಭಾಷೆ) ಪುಸ್ತಕ ಸ್ವಲ್ಪ ಸಂಖ್ಯೆಯಲ್ಲಿ ವಿತರಣೆಯಾಗಿದ್ದು, ಇತರೆ ಯಾವ ವಿಷಯದ ಪಠ್ಯ ಪುಸ್ತಕಗಳು ಪೂರೈಕೆ ಆಗಿಲ್ಲ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ವಿಳಂಬದಿಂದ ಮಕ್ಕಳಿಗೆ ಮನೆಯಲ್ಲಿ ಅಭ್ಯಾಸ ನಡೆಸಲು ಪಠ್ಯ ಪುಸ್ತಕಗಳು ಇಲ್ಲದಂತಾಗಿದೆ. ಅಷ್ಟೇ ಅಲ್ಲದೆ, ಪೋಷಕರು ಮನೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವುದಕ್ಕೂ ಪಠ್ಯ ಪುಸ್ತಕಗಳಿಲ್ಲದೆ ಸಮಸ್ಯೆ ಎದುರಾಗಿದೆ. ಇನ್ನೊಂದೆಡೆ ಶಾಲಾ ಶಿಕ್ಷಕರು ತಮ್ಮ ಕೆಲಸ ಕಾರ್ಯ ಬಿಟ್ಟು ಪುಸ್ತಕ ವಿತರಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ದಿನವೂ ಅಲೆದಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಪ್ರತಿ ವರ್ಷವೂ ಸರ್ಕಾರಿ ಉರ್ದು ಶಾಲೆಗಳಿಗೆ ಇದೇ ಸಮಸ್ಯೆ ಎದುರಾಗುತ್ತದೆ. ಹಲವು ಬಾರಿ ಮನವಿ ನೀಡಿದರೂ ಇಲಾಖೆಯಿಂದ ಯಾವುದೇ ರೀತಿಯಲ್ಲಿ ಸ್ಪಂದನೆ ದೊರೆಯುವುದಿಲ್ಲ. ಈ ಬಾರಿ 6 ತಿಂಗಳ ಹಿಂದೆಯೇ ಸರ್ಕಾರಿ ಮುದ್ರಣಾಲಯಕ್ಕೆ ಪಠ್ಯಪುಸ್ತಕಗಳ ಮುದ್ರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇಲಾಖಾ ಅಧಿಕಾರಿಗಳು ಶಾಲೆಯ ರಜೆಯ ದಿನಗಳಲ್ಲೇ ಪುಸ್ತಕಗಳನ್ನು ನೀಡುತ್ತೇವೆ ಎನ್ನುತ್ತಾರೆ. ಆದರೆ, ಶಾಲೆ ಪ್ರಾರಂಭವಾದರೂ ಪಠ್ಯಪುಸ್ತಕಗಳು ಕೈಸೇರುವುದಿಲ್ಲ. ಈ ಬಗ್ಗೆ ಶಿಕ್ಷಣಾಧಿಕಾರಿಗಳನ್ನು ಪ್ರಶ್ನಿಸಿದರೆ, ಪುಸ್ತಕಗಳ ದಾಸ್ತಾನಿಲ್ಲ ಎಂಬ ಉತ್ತರ ಬರುತ್ತದೆ. ಕಳೆದ 10 ವರ್ಷದಿಂದ ಇದೇ ಪರಿಸ್ಥಿತಿಯನ್ನು ಉರ್ದು ಶಾಲೆಗಳು ಎದುರಿಸುತ್ತಿವೆ.

- ಜುನೇರಿ, ಸಹಾಯಕ ಶಿಕ್ಷಕರು ಹಾಗೂ ಉರ್ದು ಟೀಟ​ರ್‍ಸ್ ಕೌನ್ಸಿಲ್‌ ಅಧ್ಯಕ್ಷರು.

ವಾರದೊಳಗೆ ವಿತರಣೆ

ಎಲ್ಲಾ ಭಾಷೆಗಳ ಪಠ್ಯ ಪುಸ್ತಕಗಳನ್ನು ಸೂಕ್ತ ಸಮಯಕ್ಕೆ ಮುದ್ರಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳಿಗೆ ಕಳುಹಿಸಲಾಗಿದೆ. ಕೆಲವು ಕಡೆಗಳಲ್ಲಿ ಮಳೆ ಅಡ್ಡಿಯಾಗಿದೆ. ಕೆಲ ಶಾಲೆಗಳಲ್ಲಿ ಹಳೆಯ ಪಠ್ಯ ಪುಸ್ತಕಗಳನ್ನು ಬಳಸಿಕೊಂಡು ಬೋಧಿಸಲಾಗುತ್ತಿದೆ. ಯಾವ ಶಾಲೆಗಳಿಗೆ ಪುಸ್ತಕಗಳು ತಲುಪಿಲ್ಲ, ಅದರ ಬಗ್ಗೆ ಪರಿಶೀಲಿಸಲಾಗುತ್ತಿದೆ. ಹಾಗೇನಾದರೂ ಪುಸ್ತಕ ವಿತರಣೆಯಾಗದಿದ್ದಲ್ಲಿ ಒಂದು ವಾರದೊಳಗೆ ಪೂರೈಸಲಾಗುವುದು.

- ನರಸಿಂಹಯ್ಯ, ವ್ಯವಸ್ಥಾಪಕ ನಿರ್ದೇಶಕರು, ಪಠ್ಯಪುಸ್ತಕ ಮಾರಾಟ ಸಂಘ.