Asianet Suvarna News Asianet Suvarna News

ಮತಪಟ್ಟಿಗೆ ಹೆಸರು ಸೇರಿಸಲು ಎಲ್ಲಿಯವರೆಗೆ ಅವಕಾಶ..?

ಮತದಾರರ ಪಟ್ಟಿಯಲ್ಲಿ ಹೊಸದಾಗಿ ನೋಂದಣಿ ಮಾಡಿಕೊಳ್ಳಲು ಹಾಗೂ ಬದಲಾವಣೆಗಳಿದ್ದರೆ ಮಾಡಿಕೊಳ್ಳಲು ಏ.14ಕ್ಕೆ ಕೊನೆಯ ದಿನಾಂಕವಾಗಿದ್ದು, ಏ.8ರಂದು ‘ಮಿಂಚಿನ ನೋಂದಣಿ’ ಹೆಸರಲ್ಲಿ ನೋಂದಣಿ ಮತ್ತು ತಿದ್ದುಪಡಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Deadline for enrolling new voters extended

ಬೆಂಗಳೂರು : ಮತದಾರರ ಪಟ್ಟಿಯಲ್ಲಿ ಹೊಸದಾಗಿ ನೋಂದಣಿ ಮಾಡಿಕೊಳ್ಳಲು ಹಾಗೂ ಬದಲಾವಣೆಗಳಿದ್ದರೆ ಮಾಡಿಕೊಳ್ಳಲು ಏ.14ಕ್ಕೆ ಕೊನೆಯ ದಿನಾಂಕವಾಗಿದ್ದು, ಏ.8ರಂದು ‘ಮಿಂಚಿನ ನೋಂದಣಿ’ ಹೆಸರಲ್ಲಿ ನೋಂದಣಿ ಮತ್ತು ತಿದ್ದುಪಡಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್‌ಕುಮಾರ್‌, ಫೆ.28ಕ್ಕೆ 4.96 ಕೋಟಿ ಮಂದಿ ಮತದಾರರಿದ್ದರು. ಮಾ.1ರ ನಂತರವೂ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿ ಕಾರ್ಯ ಮುಂದುವರಿದಿದ್ದು, ಈವರೆಗೆ 1,74,313 ಹೊಸದಾಗಿ ಅರ್ಜಿಗಳು ಬಂದಿವೆ. ಅಲ್ಲದೇ, 1582 ಅರ್ಜಿಗಳು ವರ್ಗಾವಣೆಗಾಗಿ ಬಂದಿದ್ದು, 81,412 ಮತದಾರರನ್ನು ಕೈಬಿಡಲು ಅರ್ಜಿಗಳು ಬಂದಿವೆ. ಹೊಸದಾಗಿ ನೋಂದಣಿ ಮತ್ತು ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಏ.14ರಂದು ಕೊನೆಯ ದಿನಾಂಕವಾಗಿದೆ. ಯಾವುದೇ ಕಾರಣಕ್ಕೂ ಮತ್ತೆ ದಿನಾಂಕವನ್ನು ವಿಸ್ತರಣೆ ಮಾಡುವುದಿಲ್ಲ. ನಂತರ ಬರುವ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಏ.8ರಂದು ಭಾನುವಾರ ‘ಮಿಂಚಿನ ನೋಂದಣಿ’ ಹೆಸರಲ್ಲಿ ಆಯೋಗವು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈವರೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದಿರುವವರು ಭಾನುವಾರ ತಮ್ಮ ವ್ಯಾಪ್ತಿಯ ಮತ ಕೇಂದ್ರಗಳಿಗೆ ತೆರಳಿ ಹೆಸರು ನೋಂದಣಿ ಹಾಗೂ ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದಾಗಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ. ಮತ ಕೇಂದ್ರಗಳ ಮಾಹಿತಿಯನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ. ಅಲ್ಲದೇ, ಚುನಾವಣೆಗೂ ಮೊದಲೇ ಮತದಾರರು ತಮ್ಮ ಮತಕೇಂದ್ರಗಳ ಮಾಹಿತಿಗಳನ್ನು ಪಡೆದುಕೊಳ್ಳಬೇಕು. ಯಾವುದಾದರೂ ಸಮಸ್ಯೆಗಳಿದ್ದರೆ ಬೂತ್‌ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು ಎಂದರು.

ಮುಂದಿನ ವಾರದಲ್ಲಿ ವಿತರಣೆ:

ಮತದಾರರ ಗುರುತಿನ ಚೀಟಿಯ ಅರ್ಜಿ ಪರಿಶೀಲನೆ ಕಾರ್ಯ ನಡೆಯುತ್ತಿದ್ದು, 3,69,345 ಮತದಾರರ ಗುರುತಿನ ಚೀಟಿಗಳನ್ನು ವಿತರಣೆ ಮಾಡಬೇಕಿದೆ. ಅವುಗಳನ್ನು ಮುಂದಿನ ವಾರದೊಳಗೆ ವಿತರಣೆ ಮಾಡಲಾಗುವುದು. ಬೂತ್‌ಮಟ್ಟದ ಕಚೇರಿಗಳಲ್ಲಿ ಮಾತ್ರವಲ್ಲದೇ, ಮನೆ ಮನೆಗೆ ತೆರಳಿ ಗುರುತಿನ ಚೀಟಿಗಳನ್ನು ವಿತರಣೆ ಮಾಡಲಾಗುತ್ತಿದೆ. ಚುನಾವಣಾ ಕಾರ್ಯಕ್ಕಾಗಿ ಬಳಕೆ ಮಾಡಲು 10 ಲಕ್ಷ ಹಾಲೋಗ್ರಾಂಗಳನ್ನು ತರಿಸಿಕೊಳ್ಳಲಾಗಿದೆ ಎಂದು ಹೇಳಿದರು.

1.71 ಕೋಟಿ ನಗದು ವಶ:

ರಾಜ್ಯದ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ನೇತೃತ್ವದ ತಂಡಗಳು ನೀತಿ ಸಂಹಿತೆ ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಜರುಗಿಸುತ್ತಿವೆ. ಈವರೆಗೆ 1.71 ಕೋಟಿ ರು. ನಗದು, 49.17 ಲಕ್ಷ ರು.ಮೌಲ್ಯದ ಮದ್ಯ, 558 ಸೀರೆಗಳು ಮತ್ತು 2.464 ಕೆಜಿ ಚಿನ್ನ, 160 ಲ್ಯಾಪ್‌ಟಾಪ್‌ಗಳು ಮತ್ತು 8 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೇ, 12,537 ಗೋಡೆಬರಹಗಳು, 17693 ಪೋಸ್ಟರ್‌ಗಳು ಮತ್ತು 7,711 ಬ್ಯಾನರ್‌ಗಳನ್ನು ಸಾರ್ವಜನಿಕ ಸ್ಥಳಗಳಿಂದ ತೆಗೆದು ಹಾಕಲಾಗಿದೆ. ಖಾಸಗಿ ಜಾಗದಲ್ಲಿ 6,866 ಗೋಡೆ ಬರಹ, 7,949 ಪೋಸ್ಟರ್‌ಗಳು ಮತ್ತು 2,543 ಬ್ಯಾನರ್‌ಗಳನ್ನು ತೆಗೆಯಲಾಗಿದೆ ಎಂದು ತಿಳಿಸಿದರು.

ಧ್ವನಿವರ್ಧಕದ ಉಲ್ಲಂಘನೆಯ ಎರಡು ಪ್ರಕರಣದಲ್ಲಿ, ಪರವಾನಿಗೆ ಇಲ್ಲದೆ ಅನಧಿಕೃತ ಸಭೆಗಳನ್ನು ನಡೆಸಿದ 5 ಪ್ರಕರಣಗಳಲ್ಲಿ ಮತ್ತು ಮತದಾರರಿಗೆ ಆಮಿಷ ಒಡ್ಡಿದ 16 ಪ್ರಕರಣಗಳಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. 158 ಪ್ರಕರಣಗಳಲ್ಲಿ 2675.30 ಲೀ.ನಷ್ಟುಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಮದ್ಯ ಪರವಾನಗಿ ಉಲ್ಲಂಘಿಸಿದ 201 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.

31,992 ಪರವಾನಗಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಲಾಗಿದೆ. ಒಂದು ಶಸ್ತ್ರಾಸ್ತ್ರದ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. 2369 ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 994 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ ಮತ್ತು 4092 ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸಲಾಗಿದೆ ಎಂದು ವಿವರಿಸಿದರು.

Follow Us:
Download App:
  • android
  • ios