ಬೆಂಗಳೂರು : ಸಾರ್ವಜನಿಕ ಜೀವನದಲ್ಲಿ ಸುದೀರ್ಘ ಕಾಲ ಯಾವುದೇ ಗುರುತರ ಆರೋಪವಿಲ್ಲದೆ ದುಡಿದಿರುವ ಮಲ್ಲಿಕಾರ್ಜುನ ಖರ್ಗೆ ಅವರು ಹಿಂದೆಯೇ ಮುಖ್ಯಮಂತ್ರಿ ಆಗಬೇಕಾಗಿತ್ತು. ಆದರೆ, ಕೆಲವೊಂದು ವಿಚಾರಗಳಿಂದಾಗಿ ಅವರು ಮುಖ್ಯಮಂತ್ರಿ ಆಗಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು. ಶುಕ್ರವಾರ ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸತತವಾಗಿ 11 ಬಾರಿ ಗೆಲ್ಲುವುದು ತಮಾಷೆಯ ಮಾತಲ್ಲ. ಜನರು ಅವರನ್ನು ಎಷ್ಟರ ಮಟ್ಟಿಗೆ ಒಪ್ಪಿಕೊಂಡಿದ್ದಾರೆ ಎಂಬುದನ್ನು ಅದು ತೋರುತ್ತದೆ. ರಾಜ್ಯಾದ್ಯಂತ ಕೇವಲ ದಲಿತ ನಾಯಕರಾಗಿ ಉಳಿಯದೆ ಎಲ್ಲಾ ಸಮುದಾಯಗಳ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದರು ಎಂದು ಹೇಳಿದರು. 

ನಮ್ಮ ಕುಟುಂಬದ ಸದಸ್ಯ: ನಮ್ಮ ತಂದೆಯ ಜತೆ ಆತ್ಮೀಯ ಸಂಬಂಧ ಹೊಂದಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ತಂದೆಯ ಹಿರಿಯ ಮಗನಂತಿದ್ದರು. ನಮ್ಮ ತಂದೆ ಸ್ಥಾಪಿಸಿರುವ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳಿಗೆ ಸತತ 18 ವರ್ಷ ಕಾಲ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿದ್ದರು. ಈ ಮೂಲಕ ಅವರು ನಮ್ಮ ಕುಟುಂಬದ ಸದಸ್ಯರಾಗಿದ್ದರು. ಅವರು ಎಂದೆಂದಿಗೂ ನನ್ನ ಮಾರ್ಗದರ್ಶಕರು ಹಾಗೂ ನಾಯಕರು ಎಂದು ತಿಳಿಸಿದರು.