ಭೂಗತ ಪಾತಕಿ, ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂನ ಸಹೋದರ ಕಾಸ್ಕರ್ ಅಂದರ್ ಆಗಿದ್ದಾನೆ. ಮಹತ್ವದ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರದ ಥಾಣೆ ಪೊಲೀಸರು, ಸುಲಿಗೆ ದಂಧೆ ಪ್ರಕರಣದಲ್ಲಿ ದಾವುದ್ ಸಹೋದರ ಇಕ್ಬಾಲ್‌ ಕಾಸ್ಕರ್‌ನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂಬೈ(ಸೆ.19): ಮೋಸ್ಟ್ ವಾಂಟೆಡ್ ಉಗ್ರ, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರ ನಿನ್ನೆ ರಾತ್ರಿ ಖಾಕಿ ಬಲೆಗೆ ಬಿದ್ದಿದ್ದಾನೆ. ಉದ್ಯಮಿಯೊಬ್ಬರು ನೀಡಿದ ದೂರಿನ ಮೇರೆಗೆ, ದಾವೂದ್​ನ ಕಿರಿಯ ಸಹೋದರ ಇಕ್ಬಾಲ್‌ ಕಸ್ಕರ್‌ನನ್ನ, ಮಹಾರಾಷ್ಟ್ರದ ಎನ್​ಕೌಂಟರ್​ ಸ್ಪೆಷಲಿಸ್ಟ್​ ಪ್ರದೀಪ್ ಶರ್ಮಾ ನೇತೃತ್ವದಲ್ಲಿ ಥಾಣೆಯ ಆಂಟಿ-ಎಕ್​ಸ್ಟಾರ್ಶನ್ ಸೆಲ್ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

‌ಮುಂಬೈನ ನಗ್ಪದಾ ಪ್ರದೇಶದಲ್ಲಿ ಅಡಗಿದ್ದ ಇಕ್ಬಾಲ್‌ ಕಸ್ಕರ್

ಇನ್ನು ದಾವೂದ್ ಸಹೋದರ ಇಕ್ಬಾಲ್ ಕಸ್ಕರ್ ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಮುಂಬೈನ ನಗ್ಪದಾ ಪ್ರದೇಶದಲ್ಲಿ ವಾಸವಾಗಿದ್ದ ಇಕ್ಬಾಲ್ ಕಾಸ್ಕರ್, ದೊಡ್ಡ-ದೊಡ್ಡ ಉದ್ಯಮಿಗಳನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ. ಥಾಣೆ, ಉಲ್ಲಾಸ್​ನಗರ್, ದೊಂಬಿವ್ಲಿ ಪ್ರದೇಶಗಳಲ್ಲಿ ಉದ್ಯಮಿಗಳು ಹಾಗೂ ಬಿಲ್ಡರ್​ಗಳನ್ನ ಹೆದರಿಸಿ, ಅವರಿಂದ ಕೋಟ್ಯಾಂತರ ರೂಪಾಯಿ ಹಣ ದೋಚಿದ್ದ. ಉದ್ಯಮಿಯೊಬ್ಬರು ನೀಡಿದ ದೂರಿನ ಬೆನ್ನಲ್ಲೇ ಇಕ್ಬಾಲ್ ಬಂಧನಕ್ಕೆ ಮಹಾರಾಷ್ಟ್ರ ಪೊಲೀಸರು ಬಲೆ ಬೀಸಿದ್ದರು. ಅಂತಿಮವಾಗಿ ಆರೋಪಿ ಇಕ್ಬಾಲ್ ಕಸ್ಕರ್ ನಿನ್ನೆ ರಾತ್ರಿ ಖಾಕಿ ಖೆಡ್ಡಾ ಕ್ಕೆ ಬಿದ್ದಿದ್ದಾನೆ

ಸಾರಾ- ಸಹರಾ ಪ್ರಕರಣದಲ್ಲೂ ಆರೋಪಿಯಾಗಿದ್ದ ಇಕ್ಬಾಲ್

2003ರಲ್ಲಿ ಯುಎಇ ನಿಂದ ಗಡಿಪಾರಾಗಿದ್ದ ಇಕ್ಬಾಲ್ ಕಸ್ಕರ್ ಸದ್ಯ ಮಹಾರಾಷ್ಟ್ರದ ಮುಂಬೈನಲ್ಲೇ ವಾಸವಾಗಿದ್ದ. ಈ ಹಿಂದೆ ಸುಲಿಗೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರ ಬಂದಿದ್ದ. ಕೊಲೆ ಪ್ರಕರಣವೊಂದರಲ್ಲೂ ಪೊಲೀಸರಿಗೆ ಬೇಕಾಗಿದ್ದ. 2007 ರ ಅವಳಿ ಶಾಪಿಂಗ್ ಮಾಲ್​ಗಳಾದ ಸಾರಾ - ಸಹರಾದ ಅನಧಿಕೃತ ಪ್ರಕರಣದಲ್ಲೂ ಸಹ ಇಕ್ಬಾಲ್ ಕಸ್ಕರ್​ನ ಪಾತ್ರವಿದೆ ಅಂತ ಅಂದಿನ ಬಾಂಬೆ ಹೈಕೋರ್ಟ್​ ಹೇಳಿತ್ತು.

ಒಟ್ನಲ್ಲಿ ಸುಲಿಗೆ, ಕೊಲೆ ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಆರೋಪಿಯಾಗಿದ್ದ ಇಕ್ಬಾಲ್ ಕಸ್ಕರ್, ಮಹಾರಾಷ್ಟ್ರ ಪೊಲೀಸರ ಚಾಣಾಕ್ಷ ಕಾರ್ಯಾಚರಣೆಯಿಂದಾಗಿ ಅರೆಸ್ಟ್ ಆಗಿದ್ದಾನೆ. ಸದ್ಯ ದಾವೂದ್ ಸೋದರ ಬಂಧನವಾಗಿದ್ದು ಮುಂದಿನ ಟಾರ್ಗೆಟ್ ದಾವೂದ್ ಅಂತಾನೇ ಹೇಳಾಲಾಗ್ತಿದೆ.