ಡಾರ್ಜಿಲಿಂಗ್ ಟಾಯ್‌ಟ್ರೈನ್‌ಗೆ ಯುನೆಸ್ಕೋ ಪಾರಂಪರಿಕ ಪಟ್ಟ ಕಳೆದುಕೊಳ್ಳುವ ಭೀತಿ!
ಡಾರ್ಜಿಲಿಂಗ್ ಟಾಯ್‌ಟ್ರೈನ್‌ಗೆ ಯುನೆಸ್ಕೋ ಪಾರಂಪರಿಕ ಪಟ್ಟ ಕಳೆದುಕೊಳ್ಳುವ ಭೀತಿ| 140 ವರ್ಷಗಳಷ್ಟುಹಳೆಯದಾದ ಟಾಯ್‌ಟ್ರೈನ್
ಡಾರ್ಜಿಲಿಂಗ್[ಜು.15]: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿರುವ ವಿಶ್ವಪ್ರಸಿದ್ಧ ಟಾಯ್‌ಟ್ರೈನ್ ಇದೀಗ, ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಿಂದ ಹೊರಬೀಳುವ ಭೀತಿ ಎದುರಿಸುವಂತಾಗಿದೆ. ಸತತ ಸೂಚನೆಗಳ ಹೊರತಾಗಿಯೂ, 140 ವರ್ಷಗಳಷ್ಟುಹಳೆಯದಾದ ಟಾಯ್‌ಟ್ರೈನ್ ಮತ್ತು ಅದಕ್ಕೆ ಸಂಬಂಧಿಸಿದ ಕೆಲ ವಿಷಯಗಳನ್ನು ರಕ್ಷಿಸಲು ಭಾರತೀಯ ರೈಲ್ವೆ ವಿಫಲವಾಗಿದೆ ಎಂದು ದೂರಿರುವ ಯುನೆಸ್ಕೋ, ಅಂತಿಮ ಯತ್ನವಾಗಿ ತನ್ನ ತಂಡವೊಂದನ್ನು ಡಾರ್ಜಿಲಿಂಗ್‌ಗೆ ಕಳುಹಿಸಲು ನಿರ್ಧರಿಸಿದೆ.
ಪಾರಂಪರಿಕ ಪಟ್ಟನೀಡಿದಾಗಿನಿಂದಲೂ ನೀಡಿದ ಕೆಲ ಮಾರ್ಗಸೂಚಿಗಳನ್ನು ಪಾಲಿಸಲು ಟಾಯ್‌ಟ್ರೈನ್ ನೋಡಿಕೊಳ್ಳುವ ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ ವಿಫಲವಾಗಿದೆ ಎಂದಿರುವ ಯುನೆಸ್ಕೋ, ರೈಲು, ರೈಲಿನ ಹಳಿ, ಕಟ್ಟಡ, ಸೇತುವೆಗಳು ಪತನದ ಅಪಾಯ ಎದುರಿಸುತ್ತಿವೆ. ಇವುಗಳನ್ನು ಸಂರಕ್ಷಿಸಲು 2017-19ರ ಅವಧಿಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ರೈಲ್ವೆ ವರದಿಯನ್ನೂ ಕೊಟ್ಟಿಲ್ಲ.
ಹೀಗಾಗಿ ಯುನೆಸ್ಕೋ ಇದೀಗ ಸ್ವತಃ ತಾನೇ ಒಂದು ತಜ್ಞರ ತಂಡವನ್ನು ಡಾರ್ಜಿಲಿಂಗ್‌ಗೆ ರವಾನಿಸಲಿದ್ದು, ಅಲ್ಲಿನ ಸ್ಥಿತಿಗತಿ ಅಧ್ಯಯನ ಮಾಡಲಿದೆ. ಅಲ್ಲದೆ ಈ ಪ್ರಸಿದ್ಧ ಸ್ಥಳವನ್ನು ಮುಂದಿನ ಪೀಳಿಗೆಗೂ ಉಳಿಸಿಕೊಡುವ ನಿಟ್ಟಿನಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಬೇಕು, ಅದರಲ್ಲಿ ಯಾವುದೆ ಆಧ್ಯತೆಯ ವಿಷಯವಾಗಬೇಕು ಎಂಬುದರ ಕುರಿತು ಒಂದಿಷ್ಟುಶಿಫಾರಸುಗಳನ್ನು ಮಾಡಲಿದೆ.