ನವದೆಹಲಿ(ಆ.02): ದಶಕಗಳಿಂದ ಕಗ್ಗಂಟಾಗಿಯೇ ಉಳಿದಿರುವ ಅಯೋಧ್ಯೆ ವಿವಾದ ಬಗೆಹರಿಸುವಲ್ಲಿ ಸುಪ್ರೀಂಕೋರ್ಟ್ ನೇಮಿಸಿದ್ದ ಸಂಧಾನಕಾರರ ಸಮಿತಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಆ.06ರಿಂದ ಪ್ರಕರಣದ ವಿಚಾರಣೆಯನ್ನು ಪ್ರತಿದಿನ ನಡೆಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ. 

55 ದಿನಗಳ ಕಾಲ ಸಂಧಾನ ಪ್ರಯತ್ನ ನಡೆಸಿದ ಬಳಿಕ ಎರಡೂ ಪಕ್ಷಗಳ ತೀವ್ರ ವಿರೋಧದಿಂದ ತನ್ನ ಪ್ರಯತ್ನಗಳನ್ನು ಕೈಬಿಟ್ಟಿರುವುದಾಗಿ, ಸುಪ್ರೀಂಕೋರ್ಟ್ ನೇಮಿಸಿದ್ದ ತ್ರಿಸದಸ್ಯ ಸಂಧಾನ ಸಮಿತಿ ಸರ್ವೋಚ್ಛ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ನ್ಯಾ. ಎಸ್‌.ಎ ಬೊಬ್ಡೆ, ಡಿ.ವೈ ಚಂದ್ರಚೂಡ್, ಅಶೋಕ್‌ ಭೂಷಣ್ ಮತ್ತು ಎಸ್‌. ಅಬ್ದುಲ್ ನಜೀರ್‌ ಅವರನ್ನೊಳಗೊಂಡ ನ್ಯಾಯಪೀಠ, ಅಯೋಧ್ಯೆಯ ಮೂಲ ದಾವೆಯ ವಿಚಾರಣೆಯನ್ನು ಆ.06ರಿಂದ ಪ್ರತಿದಿನ ನಡೆಸಲು ತೀರ್ಮಾನಿಸಿದೆ. 

ನಿವೇಶನವನ್ನು ರಾಮಲಲ್ಲಾ, ನಿರ್ಮೋಹಿ ಆಖಾಡ ಮತ್ತು ಸುನ್ನಿ ವಕ್ಫ್‌ ಮಂಡಳಿಗೆ ಮೂರು ಸಮಾನ ಭಾಗಗಳಾಗಿ ಹಂಚಿದ್ದ 2010ರ ಸೆಪ್ಟೆಂಬರ್ 30ರಂದು ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿದ ಹಲವು ಅರ್ಜಿಗಳನ್ನು ಒಟ್ಟಾಗಿ ಸುಪ್ರೀಂ ಕೋರ್ಟ್ ವಿಚಾರಣೆಗೆ ಎತ್ತಿಕೊಳ್ಳಲಿದೆ.