ಬೆಂಗಳೂರು (ಫೆ. 22):  ಹಲವು ದಿನಗಳಿಂದ ಅಕ್ರಮ ಆಸ್ತಿ ಸಂಪಾದನೆ, ತೆರಿಗೆ ವಂಚನೆ ಆರೋಪದ ಸುಳಿಯಲ್ಲಿ ಸಿಲುಕಿರುವ ರಾಜ್ಯದ ಸಮ್ಮಿಶ್ರ ಸರ್ಕಾರದ ‘ಟ್ರಬಲ್‌ ಶೂಟರ್‌’ ಖ್ಯಾತಿಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೀಗ ಸೆಬಿ(ಭಾರತೀಯ ಷೇರು ನಿಯಂತ್ರಣ ಮಂಡಳಿ) ಮತ್ತು ಕೇಂದ್ರ ಚುನಾವಣಾ ಆಯೋಗದ ರೂಪದಲ್ಲಿ ‘ಡಬಲ್‌ ಟ್ರಬಲ್‌’ ಸುತ್ತಿಕೊಳ್ಳುವ ಭೀತಿ ಎದುರಾಗಿದೆ.

ಕಾನೂನು ಉಲ್ಲಂಘಿಸಿ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ಶೋಭಾ ಡೆವಲಪ​ರ್‍ಸ್ನಲ್ಲಿ ತಮ್ಮ ಮತ್ತು ಕುಟುಂಬದ ಸದಸ್ಯರ ಹೆಸರಲ್ಲಿ ಡಿ.ಕೆ.ಶಿವಕುಮಾರ್‌ ಕೋಟ್ಯಂತರ ರುಪಾಯಿ ಮೊತ್ತದ ಭೂ ವ್ಯವಹಾರ ನಡೆಸಿದ್ದಾರೆ. ಅಲ್ಲದೆ, ಐದು ವರ್ಷಕ್ಕೊಮ್ಮೆ ಅವರ ಆದಾಯ ಶೇ.230ರಷ್ಟುಏರಿಕೆಯಾಗಿದೆ.

ಆದರೆ ಈ ಆರ್ಥಿಕ ವ್ಯವಹಾರ ಕುರಿತು ಸಚಿವರು ಸೂಕ್ತ ದಾಖಲೆಯನ್ನೇ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಸಾರ್ವಜನಿಕರ ಹಣ ದುರುಪಯೋಗ ಮತ್ತು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವ ಶಿವಕುಮಾರ್‌ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಇದೇ ತಿಂಗಳ 15 ರಂದು ಸೆಬಿ ಹಾಗೂ ಕೇಂದ್ರ ಚುನಾವಣಾ ಆಯೋಗದ ಆಯುಕ್ತರಿಗೆ ಆದಾಯ ತೆರಿಗೆ ಇಲಾಖೆ ಪತ್ರ ಬರೆದಿದೆ.

ಶೋಭಾ ಡೆವಲಪರ್ಸ್‌ಗೂ ಸಂಕಟ: ಈಗಾಗಲೇ ಅಕ್ರಮ ಆಸ್ತಿ ಮತ್ತು ತೆರಿಗೆ ವಂಚನೆ ಪ್ರಕರಣಗಳ ಕುರಿತು ಕೇಂದ್ರ ತನಿಖಾ ಸಂಸ್ಥೆಗಳ ತನಿಖೆಯಿಂದ ಮೆತ್ತಗಾಗಿರುವ ಶಿವಕುಮಾರ್‌ ಅವರಿಗೆ, ಈ ಐಟಿ ಶಿಫಾರಸು ಮತ್ತಷ್ಟುಸಂಕಷ್ಟತಂದೊಡ್ಡಿದೆ.

ಅಲ್ಲದೆ, ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ ಆರೋಪದ ಮೇರೆಗೆ ಚುನಾವಣಾ ಸ್ಪರ್ಧೆಯಿಂದ ಅನರ್ಹತೆಗೊಳ್ಳುವ ತೂಗುಗತ್ತಿ ಅವರ ಮೇಲೆ ಬಿದ್ದಿದೆ. ಜೊತೆಗೆ ಷೇರುದಾರರಿಗೆ ತಪ್ಪು ಲೆಕ್ಕ ನೀಡಿದ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಇದು ಶೋಭಾ ಡೆವಲಪರ್ಸ್‌ ಸಂಸ್ಥೆಗೂ ಸಂಕಷ್ಟಉಂಟು ಮಾಡುವ ಸಂಭವವಿದೆ.

ಶೋಭಾ ಡೆವಲಪರ್ಸ್‌ ಸೆಬಿ ಲಿಸ್ಟೆಡ್‌ ಆಗಿರುವ ಪ್ರತಿಷ್ಠಿತ ಕಂಪನಿ. ಸಾರ್ವಜನಿಕರಿಂದ ಷೇರು ಸಂಗ್ರಹಿಸಿ ಹೂಡಿಕೆ ಮಾಡಿದೆ. ಹೀಗಿರುವಾಗ ಸಾರ್ವಜನಿಕ ಹಣ ಬಳಕೆಗೆ ಕರಾರುವಕ್ಕಾದ ಲೆಕ್ಕ ಇಡಬೇಕಾಗುತ್ತದೆ. ಆದರೆ, ಇಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಅಕ್ರಮವಾಗಿ ಸಚಿವ ಶಿವಕುಮಾರ್‌ ಕುಟುಂಬಕ್ಕೆ ಸಾಗಣೆ ಅಥವಾ ಬಳಕೆ ಮಾಡಿದ ಗಂಭೀರ ಆಪಾದನೆ ಕೇಳಿಬಂದಿದೆ.

ದಶಕದಿಂದ ಶೋಭಾ ಡೆಪಲಪರ್ಸ್ ಜತೆ ಪಾಲುದಾರಿಕೆಯಲ್ಲಿ ಸಚಿವರು ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದಾರೆ. ಈ ಅವಧಿಯಲ್ಲಿ ಅವರ ಕುಟುಂಬ ಸದಸ್ಯರಿಗೆ ಠೇವಣಿ ಹಾಗೂ ಮುಂಗಡ (ಆಸ್ತಿ ಖರೀದಿ) ಹಣದ ರೂಪದಲ್ಲಿ ಕೋಟ್ಯಂತರ ಮೊತ್ತವು ಆ ಸಂಸ್ಥೆಯಿಂದ ಸಂದಾಯವಾಗಿದೆ. ಅದರ ಲೆಕ್ಕ ನಿರ್ವಹಣೆಯಲ್ಲಿ ಏರುಪೇರಾಗಿರುವುದು ಕಂಡು ಬಂದಿದೆ.

ಬೆಂಗಳೂರಿನ ಸದಾಶಿವನಗರ ಮನೆ ನಿರ್ಮಾಣ ಹಾಗೂ ಹೊಸಕೆರೆ ಹಳ್ಳಿಯಲ್ಲಿ ನಿವೇಶನ ಖರೀದಿ ಸೇರಿ ಹಲವು ಹಣಕಾಸು ವಹಿವಾಟನ್ನು ತಮ್ಮ ತಾಯಿ ಹೆಸರಿನಲ್ಲಿ ಅವರು ನಡೆಸಿದ್ದಾರೆ. ಇತ್ತೀಚಿಗೆ ಆದಾಯ ತೆರಿಗೆ ವಂಚನೆ ಸಂಬಂಧ ವಿಚಾರಣೆ ವೇಳೆ ಗೌರಮ್ಮ ಅವರು, ತಾವು ಕೃಷಿ ಮಾಡಿಗಳಿಸಿದ ಆದಾಯವನ್ನು ಇತರೆ ಕ್ಷೇತ್ರಗಳಲ್ಲಿ ತೊಡಗಿಸಿರುವುದಾಗಿ ಹೇಳಿದ್ದರು. ಆದರೆ ದಾಖಲೆಗಳನ್ನು ಪರಿಶೀಲಿಸಿದಾಗ ಅವರ ಹೇಳಿಕೆಗೂ ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸ ಬಂತು. ಅದೇ ರೀತಿ, ಶೋಭಾ ಡೆವಲಪ​ರ್‍ಸ್ ಸಂಸ್ಥೆ ಕೂಡ ಸೂಕ್ತ ಉತ್ತರ ನೀಡಿಲ್ಲ.

ಇದರಿಂದ ಸಚಿವರೇ ಗೌರಮ್ಮ ಹೆಸರಿನಲ್ಲಿ ರಿಯಲ್‌ ಎಸ್ಟೇಟ್‌ ನಡೆಸಿರುವುದು ಗೊತ್ತಾಗಿದೆ. ಇದಕ್ಕೂ ಪೂರಕವಾದ ದಾಖಲೆಗಳು ಲಭ್ಯವಾಗಿವೆ. ಇನ್ನು ತನ್ನ ಷೇರುದಾರರ ಹಣವನ್ನು ಖಾಸಗಿ ವ್ಯಕ್ತಿ(ಶಿವಕುಮಾರ್‌) ಅನುಕೂಲಕ್ಕೆ ಶೋಭಾ ಡೆವಲಪ​ರ್‍ಸ್ ಸಂಸ್ಥೆ ಪೋಲು ಮಾಡಿದೆ. ಹಾಗೆ ಈ ಭೂ ವ್ಯವಹಾರದ ಕುರಿತು 2018ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ಶಿವಕುಮಾರ್‌ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ ಮರೆ ಮಾಚಲಾಗಿದೆ.

ಹೀಗಾಗಿ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡ ಸಚಿವರ ವಿರುದ್ಧ ಸೆಬಿ ಮತ್ತು ತಪ್ಪು ಮಾಹಿತಿ ನೀಡಿದ ಆರೋಪದ ಮೇರೆಗೆ ಪ್ರಜಾಪ್ರತಿನಿಧಿ ಕಾಯ್ದೆಯಡಿ ಕ್ರಮ ಜರುಗಿಸುವಂತೆ ಫೆ.15ರಂದು ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ನಿರ್ದೇಶಕದ (ಬೆಂಗಳೂರು ವಲಯ) ಬಿ.ಬಾಲಕೃಷ್ಣ ಶಿಫಾರಸು ಮಾಡಿದ್ದಾರೆ.

ಏನೇನು ಆರೋಪಗಳು?

- ದಶಕದಿಂದ ಶೋಭಾ ಡೆವಲಪ​ರ್ಸ್  ಸಂಸ್ಥೆ ಜತೆ ಪಾಲುದಾರಿಕೆಯಲ್ಲಿ ಸಚಿವರು, ತಮ್ಮ ಮತ್ತು ತಮ್ಮ ಕುಟುಂಬದ ಸದಸ್ಯರ (ತಾಯಿ ಸೇರಿದಂತೆ) ಹೆಸರಿನಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸಿದ್ದಾರೆ. ಈ ವೇಳೆ ಹಲವು ಬಾರಿ ಹಣದ ವಹಿವಾಟು ನಡೆದಿದೆ. ಸದಾಶಿವನಗರದ 18ನೇ ಕ್ರಾಸ್‌ನಲ್ಲಿ .8.48 ಕೋಟಿ ಮೌಲ್ಯದ ಮನೆ ನಿರ್ಮಿಸಿರುವುದಾಗಿ 2018ರ ವಿಧಾನಸಭಾ ಚುನಾವಣಾ ಆಯೋಗಕ್ಕೆ ಸಚಿವರು ಅಫಿಡೆವಿಟ್‌ ಸಲ್ಲಿಸಿದ್ದಾರೆ.

ಆದರೆ ದಾಖಲೆಗಳನ್ನು ಪರಿಶೀಲಿಸಿದಾಗ ಸಚಿವರ ನಿವಾಸದ ಮೌಲ್ಯ .15.17 ಕೋಟಿ. ಅಲ್ಲದೆ ಈ ಮನೆಯನ್ನು ನಿರ್ಮಿಸಿದ ಶೋಭಾ ಡೆವಲಪ​ರ್ಸ್, ನಿರ್ಮಾಣ ವೆಚ್ಚವಾಗಿ .10.33 ಕೋಟಿ ಬಿಲ್‌ ನೀಡಿದೆ. ಹೀಗಾಗಿ ಮನೆ ಕಟ್ಟಲು ವೆಚ್ಚವಾದ .4.84 ಕೋಟಿಗೆ ಯಾವುದೇ ಮಾಹಿತಿ ನೀಡಿಲ್ಲ. ಇನ್ನು ಈವರೆಗೆ ಶೋಭಾ ಡೆವಲಪ​ರ್ಸ್ ಸಚಿವರು ಕೇವಲ .1.85 ಕೋಟಿ ಮಾತ್ರ ನೀಡಿದ್ದಾರೆ. ಮನೆಯನ್ನು 2015ರಲ್ಲೇ ಸಚಿವರಿಗೆ ಆ ಸಂಸ್ಥೆ ಹಸ್ತಾಂತರಿಸಿದರೂ ಹಣ ಪಡೆದಿಲ್ಲ.

2006ರಿಂದ ಷೇರು ಮಾರಾಟದ ಮೂಲಕ ಬಂಡವಾಳ ಸಂಗ್ರಹಿಸುವ ಶೋಭಾ ಡೆವಲಪ​ರ್ಸ್, ಸಾರ್ವಜನಿಕರ ಹಣವನ್ನು ಖಾಸಗಿ ವ್ಯಕ್ತಿಗೆ (ಸಚಿವರಿಗೆ) ಬಳಸಿದೆ.

- ಸಚಿವ ಶಿವಕುಮಾರ್‌ ಅವರು ಶೋಭಾ ಡೆವಲಪ​ರ್‍ಸ್ ಪಾಲುದಾರಿಕೆಯಲ್ಲಿ ವಾಣಿಜ್ಯ ಹಾಗೂ ವಸತಿ ಸಮುಚ್ಚಯಗಳನ್ನು ನಿರ್ಮಿಸಿದ್ದಾರೆ. ಈ ಎರಡು ಯೋಜನೆಗಳಿಗೆ ವ್ಯಾಟ್‌ ಮತ್ತು ಜಿಎಸ್‌ಟಿ ಸೇರಿ .56.62 ಕೋಟಿ ವೆಚ್ಚವಾಗಲಿದೆ. ಆದರೆ ಆ ಯೋಜನೆಗಳಿಗೆ ಕೇವಲ .13 ಕೋಟಿ ಲೆಕ್ಕ ತೋರಿಸಲಾಗಿದೆ.

- ಶೋಭಾ ಡೆವಲಪರ್ಸ್ ತನ್ನ ಆರ್ಥಿಕ ವ್ಯವಹಾರ ಕುರಿತು 2018ರ ಸಾಲಿನ ಲೆಕ್ಕಪರಿಶೋಧನೆ (ಅಡಿಟಿಂಗ್‌) ಅನ್ನು ಡಿ.31ಕ್ಕೆ ಮುಕ್ತಾಯಗೊಳಿಸಲು ನಿಗದಿಪಡಿಸಿತ್ತು. ಆದರೆ 2019ರ ಫೆಬ್ರವರಿ 5 ವರೆಗೆ ಆಡಿಟಿಂಗ್‌ ನಡೆಸಿತು. ಅಲ್ಲದೆ, ಶಿವಕುಮಾರ್‌ ಅವರಿಂದ .13.32 ಕೋಟಿ ಬಾಕಿ ಬಾಬ್ತು ಬರಬೇಕಿದೆ ಎಂದು ಆ ಸಂಸ್ಥೆ ಹೇಳಿದೆ. ದಾಖಲೆಗಳನ್ನು ಪರಿಶೀಲಿಸಿದಾಗ ಶೋಭಾ ಡೆವಲರಪ​ರ್ಸ್‌ಗೆ  ಮೂರು ವರ್ಷಗಳಿಂದ ಹಣ ಕಟ್ಟದೆ ಬಾಕಿ ಉಳಿಸಿಕೊಂಡಿರುವ ಏಕೈಕ ಗ್ರಾಹಕ ಸಚಿವ ಶಿವಕುಮಾರ್‌ ಮಾತ್ರ.

- ಶೋಭಾ ಡೆವಲಪ​ರ್ಸ್‌ನಲ್ಲಿ ಸಚಿವರು ಹಾಗೂ ಅವರ ಕುಟುಂಬದ ಸದಸ್ಯರು ಒಟ್ಟು .98.70 ಕೋಟಿ ಸಾಲ ಕಟ್ಟಬೇಕಿರುವ ಕುರಿತು ದಾಖಲೆಗಳು ಲಭ್ಯವಾಗಿವೆ. ಸಚಿವ ತಾಯಿ ಗೌರಮ್ಮ ಅವರು 2007ರಲ್ಲಿ ಶೋಭಾ ಸಂಸ್ಥೆಯಿಂದ ಹಿಂತಿರುಗಿಸಬಹುದಾದ ಠೇವಣಿ ರೂಪದಲ್ಲಿ .4 ಕೋಟಿ ಪಡೆದಿದ್ದರು. ಆದರೆ 2011ರಲ್ಲಿ ಶೋಭಾ ಸಂಸ್ಥೆ ಜತೆ ಸಚಿವರ ಜೆಡಿಎ(ಜಂಟಿ ಪಾಲುದಾರಿಕೆಯಲ್ಲಿ ಒಪ್ಪಂದ) ಆಗಿದೆ. ಹಾಗಾಗಿ 2007ರಲ್ಲಿ ಪಡೆದ ಹಣ ಯಾವುದು ಎಂಬುದಕ್ಕೆ ಆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜೆ.ಸಿ.ಶರ್ಮಾ ಸ್ಪಷ್ಟಉತ್ತರ ನೀಡಿಲ್ಲ.

- ಶೋಭಾ ಸಂಸ್ಥೆಯು 6.19 ಎಕರೆ ಖರೀದಿ ಸಲುವಾಗಿ ಸಚಿವರ ತಾಯಿ ಗೌರಮ್ಮ ಮತ್ತು ಸೋದರ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್‌ ಅವರಿಗೆ .19 ಕೋಟಿ ಮರು ಪಾವತಿ ಠೇವಣಿ ರೂಪದಲ್ಲಿ ಹಣ ನೀಡಿದೆ. ಆದರೆ ಈ ಭೂ ವ್ಯವಹಾರದ ಒಪ್ಪಂದವು 2016ರಲ್ಲಿ ಆಗಿದೆ. ಆದರೆ ವಾಸ್ತವವಾಗಿ ಆ ಜಮೀನು 4.9 ಎಕರೆ ಆಗಿದ್ದು, ಅದರ ಮೌಲ್ಯ .11 ಕೋಟಿ ಆಗಲಿದೆ. ಈ ವ್ಯವಹಾರದ ಕುರಿತು ಸಹ ಶೋಭಾ ಡೆವಲಪರ್ಸ್  ವ್ಯವಸ್ಥಾಪಕ ಸಮರ್ಪಕ ಮಾಹಿತಿ ಒದಗಿಸಿಲ್ಲ.

- ಹೊಸಕೆರೆ ಹಳ್ಳಿಯ ಭೂಮಿ ಖರೀದಿ ನೆಪದಲ್ಲಿ ಸಚಿವರ ಕುಟುಂಬದ ಭಾಗ್ಯಲಕ್ಷ್ಮೇ ಅವರಿಗೆ .1.5 ಕೋಟಿ ಹಾಗೂ ಅವರ ಆಪ್ತ ವಿನಯ್‌ ಕಾರ್ತಿಕ್‌ ಅವರಿಗೆ .4.25 ಕೋಟಿ ಹಣವು ಶೋಭಾ ಡೆವಲಪ​ರ್‍ಸ್ನಿಂದ ಸಂದಾಯವಾಗಿದೆ. ಈ ಭೂ ವ್ಯವಹಾರ 2006-07 ರಿಂದ 2010-11 ವರೆಗೆ ನಡೆದಿರುವುದಾಗಿ ಆ ಸಂಸ್ಥೆ ಹೇಳಿದೆ. ಆದರೆ ಈವರೆಗೆ ಆ ಭೂಮಿ ಖರೀದಿ ನಡೆದಿಲ್ಲ. ಇದಕ್ಕೆ ಭೂ ಮಾಲೀಕರಿಗೆ ಮುಂಗಡವಾಗಿ ಹಣ ಪಾವತಿಸಿರುವುದಾಗಿ ಆ ಸಂಸ್ಥೆ ಉಪಾಧ್ಯಕ್ಷ ಅಶೋಕ್‌ ಸ್ಪಷ್ಟೀಕರಣ ನೀಡಿದ್ದಾರೆ.

- ಈ ದಾಖಲೆಗಳನ್ನು ಪರಿಶೀಲಿಸಿದಾಗ ಕಾನೂನುಬಾಹಿರವಾಗಿ ಸಾರ್ವಜನಿಕರ ಹಣವನ್ನು ಶೋಭಾ ಡೆವಲಪ​ರ್‍ಸ್ ಸಂಸ್ಥೆಯು ಸಚಿವರು ಮತ್ತು ಅವರ ಕುಟುಂಬದ ಸದಸ್ಯರಿಗೆ ಠೇವಣಿ, ಮುಂಗಡ ಹಣ ಎಂದೂ ಪಾವತಿಸಿರುವುದು ಖಚಿತವಾಗಿದೆ.

- 2018ರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ .840 ಕೋಟಿ ಆಸ್ತಿ ಹೊಂದಿರುವುದಾಗಿ ಸಚಿವರು ಘೋಷಿಸಿಕೊಂಡಿದ್ದರು. ಅದೇ ರೀತಿ 2013ರಲ್ಲಿ .251 ಕೋಟಿ ಹಾಗೂ 2008ರಲ್ಲಿ .75 ಕೋಟಿ ಆಸ್ತಿ ಹೊಂದಿರುವುದಾಗಿ ಹೇಳಿದ್ದರು. ಹೀಗಾಗಿ ಸಚಿವರ ಆದಾಯವು ಐದು ವರ್ಷಕ್ಕೊಮ್ಮೆ ಶೇ.230 ರಷ್ಟುಹೆಚ್ಚಾಗಿದೆ. ಆದರೆ ಇದಕ್ಕೆ ಸೂಕ್ತವಾದ ದಾಖಲೆಗಳನ್ನು ಅವರು ಸಲ್ಲಿಸಿಲ್ಲ ಎಂದು ಐಟಿ ಪತ್ರದಲ್ಲಿ ವಿವರಿಸಿದೆ.

ತಾಯಿ ಹೆಸರಲ್ಲಿ ಖರೀದಿ; ಪತ್ನಿ-ಪುತ್ರಿಗೆ ವರ್ಗಾವಣೆ

ತಮ್ಮ ತಾಯಿ ಗೌರಮ್ಮ ಹೆಸರಿನಲ್ಲಿ ಆಸ್ತಿ ಖರೀದಿಸಿ ಬಳಿಕ ಪತ್ನಿ ಉಷಾ ಶಿವಕುಮಾರ್‌ ಮತ್ತು ಪುತ್ರಿ ಐಶ್ವರ್ಯ ಅವರಿಗೆ ಸಚಿವರು ವರ್ಗಾಯಿಸಿದ್ದಾರೆ. ಈ ಆಸ್ತಿ ಖರೀದಿಗೆ ಪಡೆದಿರುವ ಬ್ಯಾಂಕ್‌ ಸಾಲಆವು ಸಹ ಸಚಿವರ ಮತ್ತು ಅವರ ಪತ್ನಿ ಹೆಸರಿನಲ್ಲಿ ಪಡೆಯಲಾಗಿದೆ. ಅಲ್ಲದೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ .87 ಕೋಟಿ ಸಾಲ ಇರುವುದಾಗಿ ಹೇಳಿದ್ದಾರೆ. ಈ ಪೈಕಿ .22 ಕೋಟಿ ಸಾಲವು ಗೌರಮ್ಮ ಅವರಿಂದ ಪಡೆಯಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖವಾಗಿದೆ.

ಅರಮನೆ ರಸ್ತೆಯ ವಿಜಯಾ ಬ್ಯಾಂಕ್‌ ಶಾಖೆಯಲ್ಲಿ ಗೌರಮ್ಮ ಅವರ ಹೆಸರಿನಲ್ಲಿ ಖಾತೆ ತೆರೆಯಲಾಗಿದೆ. ಈ ಖಾತೆಯಲ್ಲಿ 2006-19ವರೆಗೆ ಶೋಭಾ ಡೆವಲಪ​ರ್‍ಸ್ ಸಂಸ್ಥೆಯಿಂದ ಹಲವು ಬಾರಿ ದೊಡ್ಡ ಮೊತ್ತದ ಹಣ ವಹಿವಾಟು ನಡೆದಿದೆ. ಆದರೆ ಈ ವ್ಯವಹಾರ ಕುರಿತು ವಿಚಾರಿಸಿದಾಗ ಗೌರಮ್ಮ ಅವರು ಸೂಕ್ತ ಉತ್ತರ ನೀಡಿಲ್ಲ. ಹೀಗಾಗಿ ಈ ಖಾತೆಯನ್ನು ಶಿವಕುಮಾರ್‌ ಅವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿರುವುದು ಖಚಿತವಾಗಿದೆ.

ಗೌರಮ್ಮ ಅವರು ತಾವು ಕೃಷಿ ಮಾಡಿ ಸಂಪಾದಿಸಿದ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡದೆ ಮನೆಯಲ್ಲೇ ಇಟ್ಟಿಕೊಂಡಿರುವುದಾಗಿ ಹೇಳಿದ್ದಾರೆ. ಆದರೆ 1995ರಿಂದ ಅವರ ಹೆಸರಿನಲ್ಲಿರುವ ಬ್ಯಾಂಕ್‌ ಖಾತೆಗಳು ಹಣಕಾಸು ವಹಿವಾಟ ನಡೆಸಿವೆ. ಅಲ್ಲದೆ, ಅವರು ಆದಾಯ ತೆರಿಗೆ ಪಾವತಿದಾರರು ಸಹ ಅಲ್ಲ. ಹೀಗಿದ್ದರೂ ಹೇಗೆ ಕೋಟ್ಯಂತರ ಹಣ ವ್ಯವಹಾರ ನಡೆಯಲು ಸಾಧ್ಯ ಎಂದು ಐಟಿ ಅಧಿಕಾರಿಗಳ ಪ್ರಶ್ನೆಯಾಗಿದೆ.