ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾರ್ಧಾ ಚಂಡಮಾರುತ ತಮಿಳುನಾಡು ಮತ್ತು ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಲಿದೆ. ಹೀಗಾಗಿ ಚೆನ್ನೈ ಹಾಗೂ ನೆಲ್ಲೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ.

ಚೆನ್ನೈ(ಡಿ.12): ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾರ್ಧಾ ಚಂಡಮಾರುತ ತಮಿಳುನಾಡು ಮತ್ತು ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಲಿದೆ. ಹೀಗಾಗಿ ಚೆನ್ನೈ ಹಾಗೂ ನೆಲ್ಲೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ.

ಈಗಾಗಲೇ ಚೆನ್ನೈ, ಕೃಷ್ಣಗಿರಿ ಮತ್ತು ಪುದುಚೇರಿಗಳಲ್ಲಿ ಮಳೆ ಶುರುವಾಗಿದೆ. ‘ವಾರ್ಧಾ' ಚಂಡಮಾರುತ ಸುಮಾರು 100 ಕಿ.ಮೀ ವೇಗದಲ್ಲಿ ಬೀಸುತ್ತಿದ್ದು, ಚೆನ್ನೈ, ಕಾಂಚಿಪುರಂ ಹಾಗೂ ತಿರುವಳ್ಳೂರಿನಲ್ಲೂ ಜಡಿಮಳೆ ಶುರುವಾಗಿದೆ. ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಚಂಡಮಾರುತದ ಹಿನ್ನೆಲೆಯಲ್ಲಿ ಚೆನ್ನೈ, ಕಾಂಚಿಪುರ, ತಿರುವಳ್ಳೂರು ಹಾಗೂ ಪುದುಚೇರಿಯಲ್ಲಿ ಇಂದು ಶಾಲಾ ಕಾಲೇಜ್​ಗಳಿಗೆ ರಜೆ ಘೋಷಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕರಾವಳಿಯಲ್ಲಿ ಎನ್ ಡಿಆರ್​ಎಫ್​​ ಸಿಬ್ಬಂದಿ ನಿಯೋಜಿಸಲಾಗಿದೆ. ಆಂಧ್ರದಲ್ಲೂ ನೆಲ್ಲೂರು, ಮಚಲಿಪಟ್ಟಣದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ಅಗತ್ಯ ತುರ್ತು ಕ್ರಮಗಳಿಗೆ ಸಿಎಂ ಚಂದ್ರಬಾಬು ನಾಯ್ಡು ಸೂಚಿಸಿದ್ದಾರೆ.

ಇಷ್ಟೇ ಅಲ್ಲದೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೂ ಸೂಚಿಸಲಾಗಿದೆ. ವಾರ್ಧಾ ಚಂಡಮಾರುತದ ಪರಿಣಾಮ ಮಧ್ಯಾಹ್ನದ ಬಳಿಕ ಬೆಂಗಳೂರಲ್ಲೂ ಮಳೆಯಾಗುವ ಸಾಧ್ಯತೆಯಿದೆ.