ನಾಲ್ಕು ವರ್ಷಗಳಿಂದ ಖಾಕಿ ಬಲೆಗೆ ಬೀಳದೆ ಛದ್ಮವೇಷಧಾರಿಯಾಗಿ ಸುತ್ತಾಡುತ್ತಿದ್ದ ಸಜಾ ಕೈದಿಯೊಬ್ಬನನ್ನು ಮಾಜಿ ಕೈದಿ ನೀಡಿದ ಮಾಹಿತಿ ಆಧರಿಸಿ ಸಿನಿಮೀಯ ಶೈಲಿಯಲ್ಲಿ ಜೈಲು ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.

ಬೆಂಗಳೂರು(ಮೇ.21): ನಾಲ್ಕು ವರ್ಷಗಳಿಂದ ಖಾಕಿ ಬಲೆಗೆ ಬೀಳದೆ ಛದ್ಮವೇಷಧಾರಿಯಾಗಿ ಸುತ್ತಾಡುತ್ತಿದ್ದ ಸಜಾ ಕೈದಿಯೊಬ್ಬನನ್ನು ಮಾಜಿ ಕೈದಿ ನೀಡಿದ ಮಾಹಿತಿ ಆಧರಿಸಿ ಸಿನಿಮೀಯ ಶೈಲಿಯಲ್ಲಿ ಜೈಲು ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.

ವಿಜಯನಗರದ ನಿವಾಸಿ, ಸಿವಿಲ್‌ ಎಂಜಿನಿಯರ್‌ ಶಂಕರ್‌ (42) ಬಂಧಿತ ಕೈದಿ. 2011ರಲ್ಲಿ ಅನಾರೋಗ್ಯದ ನೆಪದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದಾಗ ಪೊಲೀಸರಿಂದ ಶಂಕರ್‌ ತಪ್ಪಿಸಿಕೊಂಡಿದ್ದ. ಅಂದಿನಿಂದ ಪೊಲೀಸರಿಗೆ ಸಿಗದೆ ಅಜ್ಞಾತವಾಗಿದ್ದ ಶಂಕರ್‌, ಮೈಸೂರು ರಸ್ತೆಯಲ್ಲಿ ಗುರುವಾರ ಮಾಜಿ ಕೈದಿಯೊಬ್ಬನ ಕಣ್ಣಿಗೆ ಬಿದ್ದಿದ್ದ. ಕೂಡಲೇ ಆ ಮಾಜಿ ಕೈದಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ಮಾಹಿತಿ ರವಾನಿಸಿದ. ಈ ವಿಷಯ ತಿಳಿದು ಜೈಲು ಅಧಿಕಾರಿಗಳು ಪೊಲೀಸರ ನೆರವಿನಿಂದ ಶಂಕರನನ್ನು ಬಂಧಿಸಿದ್ದಾರೆ.

2001ರಲ್ಲಿ ಉದ್ಯಮಿ ಪುತ್ರನ ಅಪಹರಣ ಪ್ರಕರಣ ಸಂಬಂಧ ಶಂಕರನನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಆತನಿಗೆ 2004ರಲ್ಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸಜಾ ಕೈದಿಯಾಗಿ ಜೈಲಿನಲ್ಲಿದ್ದ ಶಂಕರ್‌, 2011ರಲ್ಲಿ ಪರೋಲ್‌ ಪಡೆದು ಹೊರಬಂದವನು ಮತ್ತೆ ಜೈಲಿಗೆ ಮರಳದೆ ತಪ್ಪಿಸಿಕೊಂಡಿದ್ದ. ಆಗ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ಶಂಕರನನ್ನು ಸೆರೆ ಹಿಡಿದು ಪುನಾ ಸೆರೆಮನೆಗೆ ಅಟ್ಟಿದ್ದರು. ಅಂದಿನಿಂದ ಸೆಂಟ್ರಲ್‌ ಜೈಲ್‌ನ ಅಭೇದ್ಯ ಭದ್ರತಾ ಕೋಟೆ ನುಸುಳಿ ಹೊರ ಹೋಗಲು ಸಂಚು ರೂಪಿಸುತ್ತಿದ್ದ. ಹೀಗಿರುವಾಗ 2011ರ ಜನವರಿಯಲ್ಲಿ ಅನಾರೋಗ್ಯ ಹಿನ್ನೆಲೆಯಲ್ಲಿ ಶಂಕರ್‌ ಸೇರಿದಂತೆ 20 ಮಂದಿ ಕೈದಿಗಳನ್ನು ಚಿಕಿತ್ಸೆ ಸಲುವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಪೊಲೀಸ್‌ ಬಿಗಿ ಭದ್ರತೆಯಲ್ಲಿ ಚಿಕಿತ್ಸೆಗೆ ಕರೆ ತರಲಾಗಿತ್ತು. ಆಗ ಪೊಲೀಸರಿಗೆ ‘ಶೌಚ ಹೋಗಿ ಬರುವುದಾಗಿ' ಹೇಳಿದ ಶಂಕರ್‌, ಶೌಚಾಲಯದಿಂದಲೇ ತಪ್ಪಿಸಿಕೊಂಡಿದ್ದ. ಈ ನಾಪತ್ತೆ ಸಂಬಂಧ ಆತನ ವಿರುದ್ಧ ವಿವಿ ಪುರ ಪೊಲೀಸ್‌ ಠಾಣೆಯಲ್ಲಿ ಜೈಲು ಸಿಬ್ಬಂದಿ ದೂರು ದಾಖಲಿಸಿದ್ದರು.

ಸನ್ನಡತೆ ಕೈದಿ ನೀಡಿದ ಸುಳಿವು:

ತಪ್ಪಿಸಿಕೊಂಡ ಶಂಕರನ ಪತ್ತೆ ಕಾರ್ಯಾಚರಣೆ ಕೈಗೆತ್ತಿಕೊಂಡ ಪೊಲೀಸರು, ಆತನಿಗೆ ಅವನ ಕುಟುಂಬದವರು, ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳ ಹುಡುಕಾಡಿದರೂ ಸುಳಿವು ಸಿಗಲಿಲ್ಲ. ಕೊನೆಗೆ ಪತ್ತೆಯಾಗದ ಪ್ರಕರಣ ಎಂದು ಹೇಳಿ ಶಂಕರ್‌ ವಿರುದ್ಧ ನ್ಯಾಯಾಲಯಕ್ಕೆ ಅಂತಿಮವಾಗಿ ಪೊಲೀಸರು ವರದಿ ಸಲ್ಲಿಸಿದ್ದರು. ಹೀಗಿರುವಾಗ ಕಳೆದ ಜನವರಿ 26ರಂದು ಗಣರಾಜ್ಯೋತ್ಸವ ಸಂದರ್ಭದಲ್ಲಿ ಸನ್ನಡತೆ ಆಧಾರದ ಮೇರೆಗೆ ಉತ್ತಮ ಚಾರಿತ್ರ್ಯ ಹೊಂದಿದ್ದ ಕೈದಿಯೊಬ್ಬರು ಬಂಧಮುಕ್ತರಾಗಿದ್ದರು. ಗುರುವಾರ ಮಧ್ಯಾಹ್ನ ಸ್ನೇಹಿತರ ಜತೆ ಗೋಪಾಲನ್‌ ಅರ್ಕೆಡ್‌ಗೆ ಈ ಮಾಜಿ ಕೈದಿ ತೆರಳಿದ್ದರು. ಆ ವೇಳೆ ಅಲ್ಲಿನ ಮ್ಯಾಕ್‌ ಡೋನಾಲ್ಡ್‌ ಮಳಿಗೆಯಲ್ಲಿ ಶಂಕರ ಕಣ್ಣಿಗೆ ಬಿದ್ದಿದ್ದಾನೆ. ಜೈಲಿನಲ್ಲಿ ಅವರಿಬ್ಬರು ಅಕ್ಕಪಕ್ಕ ಸೆಲ್‌ನಲ್ಲಿದ್ದರು ಎನ್ನಲಾಗಿದೆ. ಹಾಗಾಗಿ ಶಂಕರನನ್ನು ನೋಡಿದ ಕೂಡಲೇ ಮಾಜಿ ಕೈದಿಗೆ ಗೊತ್ತಾಗಿದೆ. ಕೂಡಲೇ ಕೇಂದ್ರ ಕಾರಾಗೃಹದ ಅಧೀಕ್ಷಕ ಕೃಷ್ಣಕುಮಾರ್‌ ಅವರಿಗೆ ಮಾಜಿ ಕೈದಿ ವಿಷಯ ಮುಟ್ಟಿಸಿದಲ್ಲದೆ, ಅಧಿಕಾರಿ ಸೂಚನೆ ಮೇರೆಗೆ ತಮ್ಮ ಮೊಬೈಲ್‌ನಲ್ಲಿ ಆತನ ಎರಡು ಭಾವಚಿತ್ರಗಳನ್ನ ತೆಗೆದು ವ್ಯಾಟ್ಸ್‌ ಆ್ಯಪ್‌ನಲ್ಲಿ ಕಳುಹಿಸಿದ್ದ. ಬಳಿಕ ಈ ಭಾವಚಿತ್ರಗಳು ಹಾಗೂ ಜೈಲಿನ ಕಡತಗಳಲ್ಲಿದ್ದ ಶಂಕರನ ಹಳೆಯ ಭಾವಚಿತ್ರಕ್ಕೆ ಹೋಲಿಕೆ ಮಾಡಿದಾಗ ಮಾಲ್‌ನಲ್ಲಿ ಸಿಕ್ಕಿರುವುದು ಶಂಕರನೇ ಎಂಬುದು ಖಚಿತವಾಗಿದೆ. ಈ ಮಾಹಿತಿ ಪಡೆದ ಜೈಲು ಅಧಿಕಾರಿಗಳು, ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿ ಕೈದಿ ಪತ್ತೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಮೈಸೂರು ರಸ್ತೆಯ ಮಾಲ್‌ಗೆ ತೆರಳಿದ ಸ್ಥಳೀಯ ಪೊಲೀಸರು, ಆ ವೇಳೆ ಬರ್ಗರ್‌ ಸವಿಯುತ್ತಿದ್ದ ಶಂಕರ್‌ನನ್ನು ಬಂಧಿಸಿದ್ದಾರೆ.

ಮ್ಯಾಕ್‌ ಡೋನಾಲ್ಡ್‌ ಮಳಿಗೆಯಲ್ಲಿ ಬರ್ಗರ್‌ ಸವಿಯುತ್ತಿದ್ದ ಶಂಕರನನ್ನು ಪೊಲೀಸರು ‘ಶಂಕರ್‌' ಎಂದೂ ಕರೆದರೂ ಮಾತನಾಡಿಲ್ಲ. ಆಗ ಪೊಲೀಸರು ಸುತ್ತುವರೆಯುತ್ತಿದ್ದಂತೆ ತಪ್ಪಿಸಿಕೊಳ್ಳಲು ಅವನು ಯತ್ನಿಸಿದ್ದಾನೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿದ್ದ ಸಿಬ್ಬಂದಿ, ಅವನು ಬಂಧಿಸಿ ಕರೆ ತಂದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ದಿನಕ್ಕೊಂದು ವೇಷ, ತಮಿಳುನಾಡಲ್ಲಿ ವಾಸ

ಪೊಲೀಸರಿಂದ ತಪ್ಪಿಸಿಕೊಂಡ ಬಳಿಕ ಶಂಕರ್‌, ತಮಿಳುನಾಡಿನಲ್ಲಿ ಆಶ್ರಯ ಪಡೆದಿದ್ದ. ತನ್ನ ಕುಟುಂಬದವರ ಕಾಣಲು ಅವನು ಬಂದಿರಲಿಲ್ಲ. ಇನ್ನು ಸಾರ್ವಜನಿಕವಾಗಿ ತನ್ನ ಗುರುತು ಸಿಗದೆ ಮಾರುವೇಷದಲ್ಲಿ ಓಡಾಡುತ್ತಿದ್ದ. ಕಣ್ಣಿಗೆ ಕಪ್ಪು ಕನ್ನಡಕ, ತಲೆಗೆ ಸ್ಕಾಪ್‌ರ್‍, ವಾರಕ್ಕೊಮ್ಮೆ ಗಡ್ದ ಬೇರೆ ರೀತಿಯಲ್ಲಿ ಬಿಟ್ಟು ಓಡಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸಿವಿಲ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದ ಅವನು, ತನ್ನ ಪದವಿ ಬಳಸಿಕೊಂಡು ಜೀವನ ಸಾಗಿಸಿದ್ದಾನೆ. ತಮಿಳುನಾಡಿನಲ್ಲಿ ಸಿವಿಲ್‌ ಗುತ್ತಿಗೆ ಪಡೆದು ಬದುಕು ನಡೆಸುತ್ತಿದ್ದೆ. ಕೈ ತುಂಬ ಸಂಬಳ ಬರುತ್ತಿತ್ತು. ಹಾಯಾದ ಜೀವನ ನಡೆಸಿದ್ದೆ. ನಸೀಬು ಚೆನ್ನಾಗಿರಲಿಲ್ಲ. ಗುರುವಾರ ಬೆಂಗಳೂರು ನೋಡಲು ಬಂದು ಸಿಕ್ಕಿ ಬಿದ್ದೆ ಎಂದು ಶಂಕರ್‌ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾಗಿ ಮೂಲಗಳು ಹೇಳಿವೆ.