Asianet Suvarna News Asianet Suvarna News

ಸಾವಿರ ಕೋಟಿಗೆ ಲೆಕ್ಕ ತೋರಿಸದ ಸಿದ್ದರಾಮಯ್ಯ ಸರಕಾರ!

ಕಳೆದ ಕರ್ನಾಟಕ ಸರಕಾರ ಒಂದು ಸಾವಿರ ಕೋಟಿ ರು. ವೆಚ್ಚದ ಲೆಕ್ಕ ತೋರಿಸದೆ ಇರುವುದು ಮಹಾಲೆಕ್ಕ ಪರಿಶೋಧಕರ (ಸಿಎಜಿ) ವರದಿಯಲ್ಲಿ ಬಹಿರಂಗವಾಗಿದೆ. ಇಷ್ಟು ಮೊತ್ತದ ಹಣವನ್ನು ಸರಕಾರ ಏನು ಮಾಡಿತು?

Crores of rupees was not utilized by the last government

ಬೆಂಗಳೂರು: ರಾಜ್ಯ ಸರ್ಕಾರ ಕಳೆದ  2016-17ನೇ ಆರ್ಥಿಕ ಸಾಲಿನಲ್ಲಿ 13 ಸಾವಿರ ಕೋಟಿ ರು. ಬಳಕೆ ಮಾಡದೆ
ಬಾಕಿ ಉಳಿಸಿಕೊಂಡಿರುವುದು ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಿದ ಮಹಾಲೆಕ್ಕ ಪರಿಶೋಧಕರ (ಸಿಎಜಿ) ವರದಿಯಲ್ಲಿ ಬಹಿರಂಗವಾಗಿದೆ. ಜತೆಗೆ, ಒಂದು ಸಾವಿರ ಕೋಟಿ ರು. ವೆಚ್ಚದ ಲೆಕ್ಕ ತೋರಿಸದೆ ಇರುವುದು ಸಹ ಪತ್ತೆಯಾಗಿದೆ.

ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ (ಸಿಎಜಿ) ವರದಿಯಲ್ಲಿ ಕಳೆದ ಸರ್ಕಾರದ ಅವಧಿಯಲ್ಲಿ ಬಳಕೆ ಮಾಡದೇ ಬಾಕಿ ಉಳಿದಿರುವ 13 ಸಾವಿರ ಕೋಟಿ ರು.ಗಳನ್ನು ಈ ಸಾಲಿಗೆ ಬಳಸಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ. ಉಳಿದಂತೆ ಒಂದು ಸಾವಿರ ಕೋಟಿ ರು. ವೆಚ್ಚ ಮಾಡಿರುವುದಕ್ಕೆ ಲೆಕ್ಕ ನೀಡದಿರುವುದು ಸಹ ಪತ್ತೆಯಾಗಿದೆ.

ಜತೆಗೆ ಪೊಲೀಸ್ ಠಾಣೆಯಲ್ಲಿ ಮೂಲ ಸೌಕರ್ಯಗಳ ಕೊರತೆ, ಬೆಂಗಳೂರು ಜಲಮಂಡಳಿ ವತಿಯಿಂದ ಆರ್ಥಿಕವಾಗಿ ಹಿಂದುಳಿದವರಿಗೆ ನೀರಿನ ಶುಲ್ಕ ಮನ್ನಾ ವೇಳೆ ಅನರ್ಹರಿಗೆ ಮನ್ನಾ ಮಾಡಿ ರುವ ದೋಷಗಳನ್ನು ಸಿಎಜಿ ಪತ್ತೆ ಮಾಡಿದೆ.

ಅನಧಿಕೃತವಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ!
ಕರ್ನಾಟಕ ಹಿಂದುಳಿದ ವರ್ಗಗಳ ಇಲಾಖೆಯ ಕಟ್ಟಡ ನಿರ್ಮಾಣ ಸೊಸೈಟಿಯ ಕಾರ್ಯನಿರ್ವಾಹಕ ನಿರ್ದೇಶಕರು 10.50 ಕೋಟಿ ರು. ಸೊಸೈಟಿಯ ಹಣವನ್ನು ಅನಧಿಕೃತವಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರಿಂದ 1.79 ಕೋಟಿ ರು. ನಷ್ಟವಾಗಿದೆ. ಸೊಸೈಟಿಯ ಮ್ಯೂಚುಯಲ್ ಫಂಡ್ ಖಾತೆಯಲ್ಲಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರವು ಹೂಡಿಕೆ ಮಾಡಿದ ಹೆಚ್ಚುವರಿ 2.13 ಕೋಟಿ ರು.ಯನ್ನು ಈ ಲೆಕ್ಕಕ್ಕೆ ಜಮೆ ಮಾಡಿ 0.23 ಕೋಟಿ ರು. ಲಾಭ ಗಳಿಸಿರುವುದಾಗಿ ಸುಳ್ಳು ಲೆಕ್ಕ ತೋರಿಸುವ ಮೂಲಕ ಮೋಸ ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ನಿಯಮ ಉಲ್ಲಂಘಿಸಿ ಟೆಂಡರ್: 
ಲೋಕೋಪಯೋಗಿ ಇಲಾಖೆಯ ನಿಯಮ ಉಲ್ಲಂಘಿಸಿ ಭೂಮಿಯ ಲಭ್ಯತೆ ಖಚಿತಪಡಿಸಿಕೊಳ್ಳದೆ ಬಿಡಿಎ ಸಿಗ್ನಲ್ ಮುಕ್ತ ಕಾರಿಡಾರ್‌ಗೆ ಗುತ್ತಿಗೆ ನೀಡಿದೆ. ಈ ಒಪ್ಪಂದ ರದ್ದಾಗಿದ್ದರಿಂದ ಪ್ರಕರಣ ಇತ್ಯರ್ಥಪಡಿಸಲು 99.33 ಲಕ್ಷ ರು. ವೆಚ್ಚ ಮಾಡಲಾಗಿದೆ.

ನಿಯಮ ಉಲ್ಲಂಘಿಸಿ ಟೆಂಡರ್ ನೀಡಿದ್ದಲ್ಲದೆ ವಿನಾಕಾರಣ ಸುಮಾರು 1 ಕೋಟಿ ರು. ಖರ್ಚು ಮಾಡಲಾಗಿದೆ. ಉಳಿದಂತೆ ಸಮವಸ್ತ್ರಗಳ ಅಧಿಕ ವಿತರಣೆಯಲ್ಲೂ ಲೋಪಗಳು ಉಂಟಾಗಿವೆ. 2015-16 ಹಾಗೂ 16-17ನೇ ಅವಧಿಯಲ್ಲಿ 1.72 ಕೋಟಿ ರು. ಮೌಲ್ಯದ ಹೆಚ್ಚುವರಿ ಸಮವಸ್ತ್ರ ವಿತರಣೆ ಮಾಡಲಾಗಿದೆ ಎಂದು ಎರಡು ಭಾಗದಲ್ಲಿ ಮಂಡಿಸಿರುವ ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ.
 

Follow Us:
Download App:
  • android
  • ios