Asianet Suvarna News Asianet Suvarna News

ಮಕ್ಕಳ ವ್ಹೀಲಿಂಗ್: ಅಪ್ಪಂದಿರ ಮೇಲೆ ಕ್ರಿಮಿನಲ್ ಮೊಕದ್ದಮೆ

ನಗರದ ರಸ್ತೆಗಳಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದವರ ವಿರುದ್ಧ ಬಾಣಸವಾಡಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ವ್ಹೀಲಿಂಗ್ ಗೀಳಿಗೆ ಇಳಿದಿದ್ದ 9 ಬಾಲಪರಾಧಿಗಳನ್ನು ಪತ್ತೆ ಹಚ್ಚಿದ್ದಾರೆ.

Criminal Case Against Fathers of Juvenile Wheeling

ಬೆಂಗಳೂರು: ನಗರದ ರಸ್ತೆಗಳಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದವರ ವಿರುದ್ಧ ಬಾಣಸವಾಡಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ವ್ಹೀಲಿಂಗ್ ಗೀಳಿಗೆ ಇಳಿದಿದ್ದ 9 ಬಾಲಪರಾಧಿಗಳನ್ನು ಪತ್ತೆ ಹಚ್ಚಿದ್ದಾರೆ.

ಬಾಲರೋಪಿಗಳಿಗೆ ಬೈಕ್ ನೀಡಿದ ತಪ್ಪಿಗೆ ಬೈಕ್ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ಹೇಳಿದರು.

ಬಾಲಕರು ವ್ಹೀಲಿಂಗ್ ಮಾಡಲು ಬಳಸುತ್ತಿದ್ದ 9 ಬೈಕ್ ಹಾಗೂ 17 ಸೈಲೆನ್ಸರ್ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಬಾಣಸವಾಡಿ, ಇಂದಿರಾನಗರ, ದೊಮ್ಮಲೂರು ಸೇರಿದಂತೆ ನಗರದ ಪೂರ್ವ ವಿಭಾಗದ ಹೊರ ವರ್ತುಲ ರಸ್ತೆಗಳಲ್ಲಿ ಹಗಲು ವೇಳೆ ಗುಂಪೊಂದು ಬೈಕ್ ವ್ಹೀಲಿಂಗ್ ಗೀಳಿಗೆ ಇಳಿದಿತ್ತು. ವ್ಹೀಲಿಂಗ್ ಮಾಡುವುದರಿಂದ ಸವಾರರಿಗೆ ಮಾತ್ರವಲ್ಲದೆ, ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೂ ತೊಂದರೆ ನೀಡುತ್ತಿದ್ದರು. ಈ ಬಗ್ಗೆ ಹಲವು ದೂರುಗಳು ಬಂದಿತ್ತು. ಹೀಗಾಗಿ ಬೈಕ್ ವ್ಹೀಲಿಂಗ್ ಮಾಡುವವರ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.

ಸೆ.28ರಂದು ಕಲ್ಯಾಣನಗರ ಹೊರ ವರ್ತುಲ ರಸ್ತೆಯಲ್ಲಿ ವಯಸ್ಕರ ಗುಂಪೊಂದು ಬೈಕ್ ವ್ಹೀಲಿಂಗ್ ಮಾಡುತ್ತಿದ್ದರೆಂಬ ಮಾಹಿತಿ ಆಧರಿಸಿ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು.

ಬಂಧಿತರು ನೀಡಿದ ಮಾಹಿತಿ ಮೇರೆಗೆ ಉಳಿದವರನ್ನು ಬಂಧಿಸಲಾಯಿತು. ಬಾಲಕರಿಗೆ ಬೈಕ್ ನೀಡಿದ ಮಾಲೀಕರ ವಿರುದ್ಧ ಕೂಡ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ.

ಬಂಧಿತರೆಲ್ಲ 15 ರಿಂದ 17 ವರ್ಷದೊಳಗಿನರಾಗಿದ್ದು, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ರಾಗಿದ್ದಾರೆ. ವಿಶೇಷ ಬಾಲ ಪೊಲೀಸ್ ಘಟಕದವರ ಬಳಿ ಸಮಾಲೋಚನೆ ನಡೆಸಿ, ಬಾಲಾಪರಾಧಿಗಳನ್ನು ಅವರ ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.

Follow Us:
Download App:
  • android
  • ios