ಮುಂಬೈ [ನ.05]:   ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆ ಆಗಿ 11 ದಿನಗಳಿಂದ ನೆನೆಗುದಿಗೆ ಬಿದ್ದಿರುವ ಮಹಾರಾಷ್ಟ್ರ ಸರ್ಕಾರ ರಚನೆ ಪ್ರಕ್ರಿಯೆಯ ಸ್ಥಿತಿ  ಹಾಗೆಯೇ ಮುಂದುವರೆದಿದೆ. ಎನ್‌ಸಿಪಿ, ಶಿವಸೇನೆ ಹಾಗೂ ಬಿಜೆಪಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದು, ಯಾರು ಸರ್ಕಾರ ಮಾಡಲಿದ್ದಾರೆ ಎಂಬ ಕುತೂಹಲ ಸೃಷ್ಟಿಯಾಗಿದೆ.

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಒಂದು ಕಡೆ ದಿಲ್ಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಿ, ‘ಶೀಘ್ರವೇ ಸರ್ಕಾರ ರಚನೆ ಆಗುವ ಅಗತ್ಯವಿದೆ. ಸರ್ಕಾರ ರಚನೆ ಆಗುವ ವಿಶ್ವಾಸವಿದೆ’ ಎಂದು ಹೇಳಿದರು. ಸುದ್ದಿವಾಹಿನಿಯೊಂದರ ವರದಿಗಳ ಪ್ರಕಾರ ನ.8ರೊಳಗೆ ಫಡ್ನವೀಸ್‌ ಪ್ರಮಾಣವಚನ ಸ್ವೀಕಾರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಇನ್ನೊಂದು ಕಡೆ ಸಂಜಯ ರಾವುತ್‌ ನೇತೃತ್ವದ ಶಿವಸೇನೆ ನಿಯೋಗವು ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರನ್ನು ಭೇಟಿ ಮಾಡಿತು. ‘ಯಾರು ಬಹುಮತ ಹೊಂದಿದ್ದಾರೋ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಿ ರಾಜ್ಯಪಾಲರಿಗೆ ಕೋರಿದ್ದೇವೆ. ಸರ್ಕಾರ ರಚನೆ ವಿಳಂಬಕ್ಕೆ ನಾವು ಕಾರಣರಲ್ಲ. ನಾವು ಯಾವುದೇ ಅಡ್ಡಿ ಮಾಡುತ್ತಿಲ್ಲ ಹಾಗೂ ರಚನೆಗೆ ಹಿಂದೇಟು ಹಾಕುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ’ ಎಂದು ಭೇಟಿ ಬಳಿಕ ರಾವುತ್‌ ಸುದ್ದಿಗಾರರಿಗೆ ತಿಳಿಸಿದರು.

ಬಳಿಕ ದಿಲ್ಲಿಯಲ್ಲಿ ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆ ಕುರಿತಂತೆ ಚರ್ಚಿಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ಮುಖ್ಯಮಂತ್ರಿ ಆಗುವ ಉದ್ದೇಶ ಹೊಂದಿಲ್ಲ. ಅಲ್ಲದೆ, ಶಿವಸೇನೆಯು ಈಗ ಸರ್ಕಾರ ರಚನೆಗೆ ನಮ್ಮನ್ನು ಸಂಪರ್ಕಿಸಿಲ್ಲ. ನಮಗೆ ಜನಾದೇಶ ಇಲ್ಲದ ಕಾರಣ ಪ್ರತಿಪಕ್ಷದಲ್ಲೇ ಕೂಡಲಿದ್ದೇವೆ. ಆದರೆ ಭವಿಷ್ಯದ ಬಗ್ಗೆ ಏನೂ ಹೇಳಲಾಗದು’ ಎನ್ನುವ ಮೂಲಕ ಶಿವಸೇನೆ ಜತೆ ಮೈತ್ರಿ ಮಾಡಿಕೊಳ್ಳುವ ಬಾಗಿಲನ್ನು ಮುಕ್ತವಾಗಿರಿಸಿದ್ದಾರೆ. ‘ಸರ್ಕಾರ ರಚನೆ ಜವಾಬ್ದಾರಿ ಬಿಜೆಪಿ ಮೇಲಿದೆ’ ಎಂದು ಅವರು ಒಂದು ಹಂತದಲ್ಲಿ ಹೇಳಿದರು.

ಶಿವಸೇನೆ ವಿಭಜನೆ- ಶಾಸಕ ಸುಳಿವು:

ಒಂದು ವೇಳೆ ಬಿಜೆಪಿ ಜತೆ ಸರ್ಕಾರ ರಚನೆಗೆ ಶಿವಸೇನೆ ಮುಂದಾಗದೇ ಹೋದಲ್ಲಿ ಪಕ್ಷವು ಇಬ್ಭಾಗವಾಗಲಿದೆ. ಶಿವಸೇನೆಯ 25 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಪಕ್ಷೇತರ ಶಾಸಕ ರವಿ ರಾಣಾ ಹೇಳಿದ್ದಾರೆ. ರಾಣಾ ಈಗಾಗಲೇ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ.

ರಾವುತ್‌ ಬೇತಾಳ- ಮರಾಠಿ ಪತ್ರಿಕೆ:

ಈ ನಡುವೆ, ‘ಸರ್ಕಾರ ರಚನೆಗೆ ಸಂಬಂಧಿಸಿದಂತೆ ಶಿವಸೇನೆಯು ಬಿಗಿಪಟ್ಟು ಹಿಡಿಯಲು ಅದರ ಮುಖಂಡ ಸಂಜಯ ರಾವುತ್‌ ಅವರೇ ಕಾರಣ. ಅವರು ಬಿಜೆಪಿ-ಶಿವಸೇನೆ ಸರ್ಕಾರ ರಚನೆಯಾಗಲು ಬಿಡದೇ ಬೇತಾಳನಂತೆ ವರ್ತಿಸುತ್ತಿದ್ದಾರೆ’ ಎಂದು ಮರಾಠಿ ಪತ್ರಿಕೆ ‘ತರುಣ ಭಾರತ’ದಲ್ಲಿ ಟೀಕಿಸಲಾಗಿದೆ.