ಜಿಲ್ಲೆಯ ಕಾಂಗ್ರೆಸ್ ನಾಯಕತ್ವದಲ್ಲಿನ ಕಿತ್ತಾಟ ಹಾಗೂ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ಚನ್ನಪಟ್ಟಣ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ನನ್ನ ಹಲವು ಕೆಲಸ ಕಾರ್ಯಗಳಿಗೆ ಪ್ರೋತ್ಸಾಹ ಸಿಗಲಿಲ್ಲ. ನೀರಾವರಿ ಯೋಜನೆಗಳಿಗೆ ನಯಾ ಪೈಸೆ ನೀಡಲಿಲ್ಲ. ನಾಲ್ಕು ವರ್ಷಗಳಿಂದ ಕ್ಷೇತ್ರ ಅಭಿವೃದ್ಧಿಯಲ್ಲಿ ಕುಂಠಿತಗೊಂಡಿದೆ.

ಬೆಂಗಳೂರು(ಅ.14): ಆಡಳಿತಾರೂಢ ಕಾಂಗ್ರೆಸ್‌ಗೆ ಒಂದರ ಮೇಲೊಂದರಂತೆ ಪೆಟ್ಟು ಬೀಳ್ತಾನೇ ಇದೆ. ಇದೀಗ ಚನ್ನಪಟ್ಟಣ ಶಾಸಕ ಸಿ ಪಿ ಯೋಗಿಶ್ವರ್ ಕಾಂಗ್ರೆಸ್ ತೊರೆಯುವ ಮೂಲಕ ಕೈಗೆ ಭಾರೀ ಪೆಟ್ಟು ನೀಡಿದ್ದಾರೆ.

ನಿರೀಕ್ಷೆಯಂತೆ ಚನ್ನಪಟ್ಟಣ ಶಾಸಕ ಸಿ ಪಿ ಯೋಗೀಶ್ವರ್ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತೊರೆಯುವ ನಿರ್ಧಾರವನ್ನ ಪ್ರಕಟಿಸಿದ್ದಾರೆ.

ಡಿಕೆಶಿ ವಿರುದ್ಧ ವಾಗ್ದಾಳಿ

ಇದೇ ವೇಳೆ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದ ಯೋಗೇಶ್ವರ್, ಚನ್ನಪಟ್ಟಣದಲ್ಲಿ ಅ.22ರಂದು ಕರೆದಿರುವ ಬೆಂಬಲಿಗರು, ಹಿತೈಷಿಗಳ ಸಭೆಯಲ್ಲಿ ಚರ್ಚಿಸಿ ಮುಂದಿನ ರಾಜಕೀಯ ನಡೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.

ಜಿಲ್ಲೆಯ ಕಾಂಗ್ರೆಸ್ ನಾಯಕತ್ವದಲ್ಲಿನ ಕಿತ್ತಾಟ ಹಾಗೂ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ಚನ್ನಪಟ್ಟಣ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ನನ್ನ ಹಲವು ಕೆಲಸ ಕಾರ್ಯಗಳಿಗೆ ಪ್ರೋತ್ಸಾಹ ಸಿಗಲಿಲ್ಲ. ನೀರಾವರಿ ಯೋಜನೆಗಳಿಗೆ ನಯಾ ಪೈಸೆ ನೀಡಲಿಲ್ಲ. ನಾಲ್ಕು ವರ್ಷಗಳಿಂದ ಕ್ಷೇತ್ರ ಅಭಿವೃದ್ಧಿಯಲ್ಲಿ ಕುಂಠಿತಗೊಂಡಿದೆ.

ನನ್ನನ್ನು ನಂಬಿದ ಪಕ್ಷದ ಮುಖಂಡರಿಗೆ ಸೂಕ್ತ ಸ್ಥಾನಮಾನ ದೊರಕಿಸಲು ಸಾಧ್ಯವಾಗಲಿಲ್ಲ. ನನಗೆ ಅಧಿಕಾರ ಸಿಕ್ಕಿದಾಗ ಮತ್ತು ಸಿಗದಿದ್ದಾಗ ಏನೆಲ್ಲಾ ತೊಂದರೆಗಳಾದವು ಎಂಬುದನ್ನು ಮನಗಂಡಿದ್ದೇನೆ. ಈ ಎಲ್ಲಾ ಕಾರಣಗಳಿಂದಾಗಿ ಕಾಂಗ್ರೆಸ್ ತೊರೆದು ಹೊರ ಬರುತ್ತಿರುವುದಾಗಿ ಯೋಗೇಶ್ವರ್ ಹೇಳಿದರು.

ಬೆಂಬಲಿಗರ ಜೊತೆ ಸ್ಪರ್ಧಿಸಿ ಮುಂದಿನ ನಡೆ

ಅನ್ಯ ಪಕ್ಷಗಳ ನಾಯಕರಿಂದ ಪಕ್ಷ ಸೇರುವಂತೆ ಆಹ್ವಾನ ಬಂದಿದೆ. ಆದರೆ, ಈವರೆಗೂ ನಾನು ಬೇರೆ ರಾಜಕೀಯ ಪಕ್ಷಗಳ ಯಾವ ನಾಯಕರನ್ನೂ ಸಂಪರ್ಕಿಸಿಲ್ಲ. ಇಂದಿನಿಂದ ಸ್ವತಂತ್ರನಾಗಿದ್ದೇನೆ. ನಾಳೆಯಿಂದಲೇ ಬೇರೆ ಪಕ್ಷದ ನಾಯಕರನ್ನು ಸಂಪರ್ಕಿಸುತ್ತೇನೆ ಎಂದರು. ನನ್ನ ಸಾಮರ್ಥ್ಯದ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ನಾನು ಅಧಿಕಾರದಲ್ಲಿದ್ದಾಗ ಕ್ಷೇತ್ರದಲ್ಲಿ ನೀರಾವರಿ ಸೇರಿದಂತೆ ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇದು ನಾನು ಯಾವುದೇ ಕ್ಷೇತ್ರದಲ್ಲಿ ಯಾವುದೇ ಚಿಹ್ನೆಯಿಂದ ಸ್ಪರ್ಧಿಸಿದರೂ ಗೆಲುವು ತಂದುಕೊಡಲಿವೆ ಎಂದು ತಿಳಿಸಿದರು.

ಚನ್ನಪಟ್ಟಣದಲ್ಲಿ ಬೆಂಬಲಿಗರ ಸಭೆ

ನಾನು ರಾಜಕೀಯವಾಗಿ ಯಾವುದೇ ವೈಯಕ್ತಿಕ ನಿರ್ಧಾರ ಕೈಗೊಳ್ಳುವುದಿಲ್ಲ. ನನ್ನ ರಾಜಕೀಯ ಬದುಕನ್ನು ಕ್ಷೇತ್ರದ ಜನರ ಕೈಗೆ ನೀಡಿದ್ದೇನೆ. ಅವರು ಕೈ ಹಿಡಿದು ನಡೆಸಿದಂತೆ ನಡೆಯುತ್ತೇನೆ. ಚನ್ನಪಟ್ಟಣದಲ್ಲಿ ಅ.೨೨ರಂದು ಬೆಂಬಲಿಗರು, ಹಿತೈಷಿಗಳ ಸಭೆ ಕರೆದಿದ್ದೇನೆ. ಪ್ರತಿಯೊಂದು ಗ್ರಾಮದಿಂದಲೂ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಅಲ್ಲಿ ನನ್ನ ಮುಂದಿನ ರಾಜಕೀಯದ ನಡೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಯೋಗೇಶ್ವರ್ ಹೇಳಿದರು.