ಕವರ್ ಸ್ಟೋರಿ ತಂಡವನ್ನು ಬೆಚ್ಚಿಬೀಳಿಸಿದ್ದು ದೂಪದ ಮಾಫಿಯಾ. ದೇವರ ಪೂಜೆಗೆ ಬಳಕೆಯಾಗೋ ಈ ದೂಪದ ಅಂಟು ಒಂದು ಅಪರೂಪದ ಮರದಿಂದ ಹೊರಹೊಮ್ಮುತ್ತೆ. ಅತ್ಯಂತ ಬೆಲೆ ಬಾಳೋ ಈ ಅಂಟಿನ ಗಂಟಿಗಾಗಿ ಮಾಫಿಯಾ ಮಂದಿ ಮುಗಿಬಿದ್ದು ಮರಗಳ ಮಾರಣ ಹೋಮ ಮಾಡುತ್ತಿದ್ದಾರೆ.

ಬೆಂಗಳೂರು(ನ.18): ಪಶ್ವಿಮ ಘಟ್ಟದ ದಟ್ಟಾರಣ್ಯದೊಳಗೆ ಲೂಟಿಕೋರರ ತಂಡಗಳು ನೆಲದ ಕಾನೂನನ್ನು ಕಾಲ ಕಸ ಮಾಡಿ, ಕ್ರೌರ್ಯ ಮೆರೆದು ನಮ್ಮ ನಾಡಿನ ಅಪರೂಪದ ಸಂಪತ್ತನ್ನ ದರೋಡೆ ಮಾಡ್ತಿವೆ ಅನ್ನೋ ಮಾಹಿತಿ ಕವರ್​ ಸ್ಟೋರಿ ತಂಡಕ್ಕೆ ಸಿಕ್ತು. ಆ ಭಯಾನಕ ಮಾಫಿಯಾ ಯಾವುದು? ಆ ಮಾಫಿಯಾ ಮಾಡ್ತಿರೋ ದುಷ್ಕೃತ್ಯವಾದರೂ ಏನು? ಅನ್ನೋದರ ಬಗ್ಗೆ ಹೊರ ಜಗತ್ತಿಗೆ ತಿಳಿಸಲೇಬೇಕು. ಅಷ್ಟೇ ಅಲ್ಲ ಈ ಮಾಫಿಯಾಕ್ಕೆ ಕುಮ್ಮಕ್ಕು ಕೊಡುತ್ತಿರೋ ಸರ್ಕಾರದ ಕಣ್ಣು ತೆರೆಸಲೇಬೇಕು ಅಂತ ನಿರ್ಧರಿಸಿ, ಭಾರೀ ರಿಸ್ಕ್​ ತಗೊಂಡು ಕಾಡಿನ ಬೇಟೆಗೆ ಕವರ್ ಸ್ಟೋರಿ ತಂಡ ಕಾರ್ಯಾಚರಣೆಗಿಳಿಯಿತು.

ದಟ್ಟಾರಣ್ಯದೊಳಗೆ ನುಗ್ಗಿದ ಕವರ್ ಸ್ಟೋರಿ ತಂಡಕ್ಕೆ ನಿಜಕ್ಕೂ ಅಚ್ಚರಿಯೇ ಕಾದಿತ್ತು. ಅಲ್ಲಿ ಕಂಡ ಒಂದೊಂದು ದೃಶ್ಯ ನಮ್ಮನ್ನ ಬೆಚ್ಚಿ ಬೀಳಿಸಿತು. ಹೌದು ಕವರ್ ಸ್ಟೋರಿ ತಂಡವನ್ನು ಬೆಚ್ಚಿಬೀಳಿಸಿದ್ದು ದೂಪದ ಮಾಫಿಯಾ. ದೇವರ ಪೂಜೆಗೆ ಬಳಕೆಯಾಗೋ ಈ ದೂಪದ ಅಂಟು ಒಂದು ಅಪರೂಪದ ಮರದಿಂದ ಹೊರಹೊಮ್ಮುತ್ತೆ. ಅತ್ಯಂತ ಬೆಲೆ ಬಾಳೋ ಈ ಅಂಟಿನ ಗಂಟಿಗಾಗಿ ಮಾಫಿಯಾ ಮಂದಿ ಮುಗಿಬಿದ್ದು ಮರಗಳ ಮಾರಣ ಹೋಮ ಮಾಡುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮೀಸಲು ಅರಣ್ಯ ಪ್ರದೇಶದೊಳಗೆ ಸುತ್ತಾಡಿದ ನಮಗೆ ಸಾವಿರಾರು ದೂಪದ ಮರಗಳ ಮಾರಣ ಹೋಮದ ದೃಶ್ಯಗಳು ಕಾಣ ಸಿಕ್ಕವು. ಅಷ್ಟೇ ಅಲ್ಲ ನಾವು ಈ ಮಾಫಿಯಾದ ಅಡ್ಡಕ್ಕೂ ನುಗ್ಗಿದೆವು. ಆಗ ನಮಗೆ ಟಾಪ್​ ಸೀಕ್ರೆಟ್'​ಗಳು ಗೊತ್ತಾದವು. ಈ ವೇಳೆ ನಮ್ಮನ್ನ ಚೇಸ್​ ಮಾಡಲಾಯಿತು, ಬೆದರಿಸಲಾಯಿತು.

ಇನ್ನೊಂದು ಪ್ರಮುಖ ವಿಚಾರ ಅಂದರೆ, ಮಾಫಿಯಾ ಮಂದಿ ನೆಪಕ್ಕೆ ಸರ್ಕಾರದಿಂದ ಟೆಂಡರ್ ಪಡೀತಾರೆ. ಆ ಬಳಿಕ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಕಮಿಷನ್​ ಕೊಟ್ಟು ನಾಡಿನ ಅಪರೂಪದ ದೂಪ ಸಂಪತ್ತನ್ನ ಮನಸೋ ಇಚ್ಛೆ ದೋಚುತ್ತಿದ್ದಾರೆ. ಹೆಚ್ಚು ಹೆಚ್ಚು ಅಂಟು ಸಂಗ್ರಹಿಸೋ ಸಲುವಾಗಿ ಮರವನ್ನ ಮನಬಂದಂತೆ ಕುಯ್ಯುತ್ತಿದ್ದಾರೆ.

ಸರ್ಕಾರದಿಂದ ಟೆಂಡರು ಪಡೆದ ದೂಪ ಸಂಗ್ರಹಕಾರರು ಅಂಟು ಸಂಗ್ರಹದ ಮಾಹಿತಿಯನ್ನ ಅರಣ್ಯ ಇಲಾಖೆ ಸಿಬ್ಬಂದಿಗೆ ಪ್ರತಿ ನಿತ್ಯ ಕೊಡಬೇಕು. ಮಾರುಕಟ್ಟೆಯಲ್ಲಿ ಕೆ.ಜಿಗೆ ಐನ್ನೂರು ರೂಪಾಯಿಗೂ ಹೆಚ್ಚು ಬೆಲೆ ಬಾಳೋ ದೂಪದ ಬಗ್ಗೆ ಅರಣ್ಯ ಇಲಾಖೆಗೆ ರಾಮನ ಲೆಕ್ಕ ಕೃಷ್ಣನ ಲೆಕ್ಕ ಕೊಟ್ಟು ಭರ್ಜರಿ ಲೂಟಿ ಹೊಡಿತ್ತಿದ್ದಾರೆ.

ಇದನ್ನೇ ಬಂಡವಾಳ ಮಾಡಿಕೊಳ್ಳೋ ಟೆಂಡರುದಾರರು ತಮಗಿಷ್ಟ ಬಂದಂತೆ ಮೀಸಲು ಅರಣ್ಯ ಕ್ಷೇತ್ರದಲ್ಲಿ ವರ್ತಿಸಿ ಮರಗಳ ಮಾರಣ ಹೋಮ ಮಾಡ್ತಿದ್ದಾರೆ. ಇದನ್ನ ತಡೀಬೇಕಾದ ಅರಣ್ಯ ಇಲಾಖೆ ಸಿಬ್ಬಂದಿಯೇ ಲೂಟಿಕೋರರಿಗೆ ಸಾಥ್​ ಕೊಡುತ್ತಿದ್ದಾರೆ. ಇನ್ನು ಸಚಿವರೋ ರಾಜಧಾನಿಯಲ್ಲಿ ಹುಣಿ ಕುಣಿಯೋದರಲ್ಲಿ ಬ್ಯುಸಿಯಾಗಿದ್ದಾರೆ. ಈಗಲಾದ್ರೂ ಅರಣ್ಯ ಸಚಿವರು ಎಚ್ಚೆತ್ತುಕೊಂಡು ಕಾಡಿನ ಲೂಟಿಕೋರರ ಲೂಟಿಗೆ ಬ್ರೇಕ್​ ಹಾಕಲಿ ಎನ್ನುವುದು ಕವರ್ ಸ್ಟೋರಿ ಕಳಕಳಿಯಾಗಿದೆ.

ವರದಿ: ವಿಜಯಲಕ್ಷ್ಮಿ ಶಿಬರೂರು, ಕವರ್ ಸ್ಟೋರಿ