ಬಾಬಾ ರಾಮ್ ರಹೀಮ್​ಗೆ ಆತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಯಾಗೋದು ಖಚಿತ. ಆದ್ರೆ ಶಿಕ್ಷೆಯ ಪ್ರಮಾಣವೇನು? ಮುಂದೇನು ಎನ್ನುವ ಪ್ರಶ್ನೆ ಇದ್ದೇ ಇದೆ. ಸದ್ಯದ ಮಟ್ಟಿಗೆ ನೋಡುವುದಾದರೆ ಬಾಬಾ ದೋಷಿ ಆಗಿದ್ದು ನಿಜ, ಶಿಕ್ಷೆ ಪ್ರಕಟವಾಗೋದು ನಿಜ. ಹಾಗೇ ಜಾಮೀನು ಪಡೆದು ಹೊರ ಬರೋ ಸಾಧ್ಯತೆಯೂ ದಟ್ಟವಾಗಿದೆ ಅಂತಾನೇ ಹೇಳಲಾಗುತ್ತಿದೆ.

ಹರ್ಯಾಣ(ಆ.28): ಸ್ವಯಂ ಘೋಷಿತ ದೇವಮಾನವ, ಹರ್ಯಾಣದ ಬಾಬಾ ರಾಮ್ ರಹೀಮ್ ಈಗ ಅಪರಾಧಿ. ಆತ್ಯಾಚಾರ ಪ್ರಕರಣದಲ್ಲಿ ಸಾಕ್ಷಿ ಆಧಾರಗಳು ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ರಹೀಮ್ ಬಾಬಾನಿಗೆ ಹರಿಯಾಣದ ಸಿಬಿಐ ವಿಶೇಷ ನ್ಯಾಯಾಲಯ ದೋಷಿ ಎಂದಿದೆ. ಈ ತೀರ್ಪಿನ ನಂತರ ಐದು ರಾಜ್ಯಗಳಲ್ಲಿ ಹಿಂಸಾಚಾರ ಏರ್ಪಟ್ಟು 32 ಮಂದಿ ಅಮಾಯಕರು ಪ್ರಾಣಬಿಟ್ಟಿದ್ದಾರೆ. ಇವತ್ತು ಮತ್ತೊಂದು ಮಹತ್ವದ ದಿನ. ರೇಪಿಸ್ಟ್ ಬಾಬಾ ಇವತ್ತು ಶಿಕ್ಷೆ ಪ್ರಮಾಣವನ್ನು ಕೋರ್ಟ್ ಪ್ರಕಟಿಸಲಿದೆ.

ಇಡೀ ದೇಶದ ಗಮನ ಸೆಳೆದಿರುವ ಬಾಬಾ ರಾಮ್ ರಹೀಮ್ ಆತ್ಯಾಚಾರ ಪ್ರಕರಣದಲ್ಲಿ ನ್ಯಾಯಾಲಯ ಯಾವ ಕಾನೂನಿನಡಿ ತೀರ್ಪು ನೀಡುತ್ತೆ ಅನ್ನುವ ಕೂತೂಹಲ ಕೆರಳಿಸಿದೆ. ಯಾಕಂದ್ರೆ, ಬಾಬಾ ರಾಮ್ ರಹೀಮ್, ಮೇಲಿನ ಪ್ರಕರಣ ನಡೆದದ್ದು 2002 ರಲ್ಲಿ. ಆ ಬಳಿಕ 2013ರಲ್ಲಿ ದೆಹಲಿಯ ನಿರ್ಭಯಾ ಪ್ರಕರಣದ ಬಳಿಕ ಆತ್ಯಾಚಾರ ಪ್ರಕರಣಗಳ ಶಿಕ್ಷೆಯ ಪ್ರಮಾಣದಲ್ಲಿ ಬದಲಾವಣೆ ಮಾಡಿದೆ. ತೀವ್ರತರದ ಆತ್ಯಾಚಾರದ ಪ್ರಕರಣಗಳಿಗೆ, ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆಯೂ ನಿರ್ಭಯಾ ಕಾನೂನಿನಲ್ಲಿದೆ. ಹೀಗಾಗಿ, ಯಾವ ಕಾನೂನಿನ ಅನ್ವಯ ಬಾಬಾ ರಾಮ್ ರಹೀಮ್ ಬಾಬಾಗೆ ಶಿಕ್ಷೆ ಪ್ರಕಟವಾಗುತ್ತೆ ಅನ್ನುವ ಕೂತೂಹಲವಿದೆ.

2002ರಲ್ಲಿ ಆತ್ಯಾಚಾರ ಪ್ರಕರಣ ದಾಖಲಾಗಿದ್ದರಿಂದ, ಹಳೇ ಕಾನೂನಿನ್ವಯ ಬಾಬಾ ರಾಮ್​ ರಹೀಮ್​ ಗೆ ಹೆಚ್ಚೆಂದರೆ ಏಳು ವರ್ಷ ಸಜೆ ಹಾಗೂ ದಂಡ ವಿಧಿಸಬಹುದು. 2013ರ ನಿರ್ಬಯಾ ಕಾನೂನನ್ನ ಈ ಪ್ರಕರಣಕ್ಕೆ ಅನ್ವಯಿಸಿಕೊಂಡರೆ, ಏಳು ವರ್ಷ ಮೇಲ್ಪಟ್ಟು ಅಥವಾ, ಹತ್ತು ವರ್ಷ ಅಥವಾ ಜೀವಾವಧಿಯ ಶಿಕ್ಷೆ ಕೂಡಾ ಪ್ರಕಟವಾಗುವ ಸಾಧ್ಯತೆಯಿದೆ.

ಬಾಬಾಗೆ ಸಿಗುತ್ತಾ ಜಾಮೀನು?: ಹೈಕೋರ್ಟ್​ ನೀಡುತ್ತಾ ಜಾಮೀನು?

ಶಿಕ್ಷೆ ಜೊತೆ ಜಾಮೀನು ಸಿಗುವ ಸಾಧ್ಯ ಸಾಧ್ಯತೆ ಬಗ್ಗೆಯೂ ಭಾರೀ ಚರ್ಚೆ ನಡೀತಿದೆ. ಸಿಬಿಐ ಶಿಕ್ಷೆಯನ್ನು ಪ್ರಶ್ನಿಸಿ ಬಾಬಾ ಹೈಕೋರ್ಟ್​ ಮೆಟ್ಟಿಲೇರಬಹುದು. ಅಲ್ಲಿ ಶಿಕ್ಷೆಗೆ ತಡೆ ನೀಡಿ ಬಾಬಾಗೆ ಜಾಮೀನು ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಬಾಬಾ ಜಾಮೀನು ಪಡೆದು ಮತ್ತೆ ಆಶ್ರಮಕ್ಕೆ ಮರಳುತ್ತಾರಾ ಅನ್ನೋ ಸಾಧ್ಯತೆಯೂ ಇದೆ.

ಒಟ್ಟಿನಲ್ಲಿ ನ್ಯಾಯಾಲಯ ಇವತ್ತು ಪ್ರಕಟಿಸಲಿರುವ ತೀರ್ಪಿನತ್ತ, ಇಡೀ ದೇಶದ ಚಿತ್ತ ನೆಟ್ಟಿದೆ. ರೇಪಿಸ್ಟ್​ ಬಾಬಾ ಜೈಲಾಗುತ್ತೋ ಇಲ್ಲ ಮತ್ತೆ ಜಾಮೀನು ಪಡೆದು ಆಶ್ರಮ ಸೇರುತ್ತಾನೋ ಅನ್ನೋದು ಕೂಡಾ ಕುತೂಹಲ ಕೆರಳಿಸಿದೆ.