ನವದೆಹಲಿ[ಸೆ. 13]  ಟ್ರಬಲ್ ಶೂಟರ್ ಡಿಕೆ ಶಿವಕುಮಾರ್​ಗೆ ಕೊನೆಗೂ ರಿಲೀಫ್ ಸಿಗಲೇ ಇಲ್ಲ. ಇಂದು ಜಾಮೀನು ಸಿಗಬಹದು ಅನ್ನೋ ನಿರೀಕ್ಷೆಯಲ್ಲಿದ್ದ ಡಿಕೆಶಿ ಹಾಗೂ ಅವರ ಬೆಂಬಲಿಗರಿಗೆ ಮತ್ತೆ ನಿರಾಸೆಯಾಗಿದೆ. ಕೋರ್ಟ್​ನಲ್ಲಿ ಪರಿ ಪರಿಯಾಗಿ ಆರೋಗ್ಯ ಸಮಸ್ಯೆ ಬಿಚ್ಚಿಟ್ಟು ಅವಲತ್ತು ಕೊಂಡರೂ ಡಿಕೆಶಿಗೆ ಜಾಮೀನು ಕೊಡಲು ದೆಹಲಿಯ ರೋಸ್ ಅವೆನ್ಯೂ  ವಿಶೇಷ  ಕೋರ್ಟ್​ ನಿರಾಕಿರಿಸಿದೆ. ಮತ್ತೆ ನಾಲ್ಕು ದಿನಗಳ ಕಾಲ ಇಡಿ ವಶಕ್ಕೆ ನೀಡಿದೆ.

ಇದಕ್ಕೂ ಮುನ್ನ ಕೋರ್ಟ್​ನಲ್ಲಿ ಡಿಕೆಶಿ ಹಾಗೂ ಇಡಿ ಪರ ವಕೀಲರು ಪ್ರಬಲವಾಗೇ ವಾದ ಮಂಡಿಸಿದ್ದರು.. ಕಟಕಟೆಯಲ್ಲಿನ ವಾದ-ಪ್ರತಿವಾದ ನಡೆಯಿತು.

ಇ.ಡಿ. ಪರ ವಕೀಲರು: ಡಿ.ಕೆ.ಶಿವಕುಮಾರ್​ ವಿಚಾರಣೆಗೆ ಸಹಕರಿಸದೇ ಸಮಯ ವ್ಯರ್ಥ ಮಾಡಿದ್ದಾರೆ. 20 ಬ್ಯಾಂಕ್ ಖಾತೆಗಳಲ್ಲಿ ಭಾರೀ ಹಣ ವರ್ಗಾವಣೆಯಾಗಿದೆ. ಡಿಕೆಶಿ ಮತ್ತು ಆಪ್ತರು 317 ಬ್ಯಾಂಕ್​ ಖಾತೆಗಳಲ್ಲಿ ಹಣ ಡಿಪಾಸಿಟ್​ ಮಾಡಿದ್ದಾರೆ.. 800 ಕೋಟಿ ರೂಪಾಯಿ ಬೇನಾಮಿ ಆಸ್ತಿ ಹೊಂದಿದ್ದಾರೆ.. ಅದರ ವಿಚಾರಣೆ ಅಗತ್ಯವಿದೆ.

ಡಿಕೆಶಿ ಪರ ವಕೀಲರು: 3 ಮನೆಗಳಲ್ಲಿ 8.59 ಕೋಟಿ ಸಿಕ್ಕಿದೆ ಎಂದು ಆರೋಪಿಸಿ ಡಿಕೆಶಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಅಲ್ಲಿ ಸಿಕ್ಕಿದ್ದು ಕೇವಲ 41 ಲಕ್ಷ ರೂ. ಮಾತ್ರ. ಉಳಿದೆಲ್ಲ ಆರೋಪಿಗಳು ಸ್ವತಂತ್ರವಾಗಿ ವ್ಯವಹಾರ ನಡೆಸಿದ್ದಾರೆ.

ಸೆಲ್ಫಿಗೆ ಬಂದ ಫ್ಯಾನ್ ಮೊಬೈಲ್ ಪೀಸ್ ಪೀಸ್.. ಇದು ಡಿಕೆ ಸುರೇಶ್! ವಿಡಿಯೋ

ಇ.ಡಿ. ಪರ ವಕೀಲರು: ಕುಟುಂಬ ಸದಸ್ಯರ ಬ್ಯಾಂಕ್ ಖಾತೆ ಹಾಗೂ ಬೇನಾಮಿ ಆಸ್ತಿ ಬಗ್ಗೆಯೂ ಅನುಮಾನ ಇದೆ.

ಡಿಕೆಶಿ ಪರ ವಕೀಲರು: ಡಿಕೆಶಿಗೂ, ಉಳಿದ ಆರೋಪಿಗಳಿಗೂ ಸಂಬಂಧವೇ ಇಲ್ಲ.. ಅನಗತ್ಯವಾಗಿ ಇತರೆ ಕೇಸ್​ ಬಗ್ಗೆ ವಿಚಾರಣೆ ಬೇಡ

ಇ.ಡಿ. ಪರ ವಕೀಲರು: ಡಿಕೆಶಿ ಪ್ರಭಾವಿಯಾಗಿದ್ದಾರೆ. ಜಾಮೀನು ಕೊಟ್ಟರೆ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ

ಡಿಕೆಶಿ ಪರ ವಕೀಲರು: ಯಾವಾಗ ಕರೆದರೂ ಡಿಕೆಶಿ ವಿಚಾರಣೆಗೆ ಹಾಜರಾಗುತ್ತಾರೆ.. ಡಿಕೆಶಿ ಮಗಳೊಂದಿಗೆ ಮುಖಾಮುಖಿ ವಿಚಾರಣೆ ಎದುರಿಸಲು ಸಿದ್ಧರಿದ್ದಾರೆ

ಇ.ಡಿ. ಪರ ವಕೀಲರು:  317 ಖಾತೆಗಳಿಂದ ಡಿಕೆಶಿ ಕುಟುಂಬ, ಸಹಚರರು ಲಾಭ ಪಡೆದಿದ್ದಾರೆ. ಅದರ ಬಗ್ಗೆ  ನಮಗೆ ಮಾಹಿತಿ ಬೇಕಿದೆ..

ಡಿಕೆಶಿ ಪರ ವಕೀಲರು:  ಇಡಿಯಲ್ಲಿ ಇಸಿಐಆರ್​ ಆಗಿರುವುದು ಆಗಸ್ಟ್​  2018ರಲ್ಲಿ.. ಪಿಎಂಎಲ್​ ಕಾಯಿದೆ ತಿದ್ದುಪಡಿಯಾಗಿದ್ದು ಆಗಸ್ಟ್ 2019ರಲ್ಲಿ.. 2015-16, 2017ರ ಹಳೇ ಪ್ರಕರಣವನ್ನ ಹೊಸ ಕಾನೂನಿನ ಅಡಿ ತನಿಖೆ ಮಾಡಲಾಗುತ್ತಿದೆ

ಇ.ಡಿ. ಪರ ವಕೀಲರು: 130 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದೇವೆ. ಡಿಕೆಶಿ ಅಕ್ರಮ ಹಣ ವರ್ಗಾವಣೆ ಹೇಗೆ ಮಾಡಿದ್ದಾರೆಂಬ ಬಗ್ಗೆ ತಿಳಿಯಬೇಕು.. ಅವರು ಉದ್ದೇಶಪೂರ್ವಕವಾಗೇ ಸಮಯ ಹಾಳು ಮಾಡುತ್ತಿದ್ದಾರೆ. ಏನೇ ಕೇಳದ್ರೂ ನಿದ್ದೆ ಬರುತ್ತೆ ಅನ್ನೋ ಉತ್ತರ ನೀಡುತ್ತಿದ್ದಾರೆ.

ಡಿಕೆಶಿ ಪರ ವಕೀಲರು: 130 ಗಂಟೆಗಳ ಕಾಲ ವಿಚಾರಣೆ ನಡೆಸಿದರೆ ಡಿಕೆಶಿಗೆ ನಿದ್ರೆ ಬಾರದೇ, ಆಯಾಸ ಆಗದೇ ಇರುತ್ತಾ ? ಡಿಕೆಶಿ ಕೊಟ್ಟಿದ್ದು ಅಪ್ರಸ್ತುತ ಮಾಹಿತಿ ಎಂದು ಯಾರು ನಿರ್ಧರಿಸಬೇಕು ?

ನ್ಯಾಯಾಧೀಶರು: 130 ಗಂಟೆ ವಿಚಾರಣೆ ನಡೆಸಿದರೂ ಉತ್ತರ ಪಡೆದಿಲ್ಲ. ಹಾಗಿದ್ದರೆ  5 ದಿನಗಳಲ್ಲಿ  ಡಿಕೆಶಿ ಹೇಗೆ ಮಾಹಿತಿ ನೀಡುತ್ತಾರೆ ? ಹೇಗೆ ಮಾಹಿತಿ ಪಡೆದುಕೊಳ್ಳುತ್ತೀರಿ..?

ಇ.ಡಿ. ಪರ ವಕೀಲರು:  ಡಿಕೆಶಿಯಿಂದ ಉತ್ತರ ಪಡೆಯಲು ನಮ್ಮ ಬಳಿ ಬೇರೆ ದಾಖಲೆ ಇದೆ. ಆ ದಾಖಲೆಗಳ ಮೂಲಕ ಉತ್ತರ ಪಡೆಯಲು ಪ್ರಯತ್ನಿಸುತ್ತೇವೆ.

ನ್ಯಾಯಾಧೀಶರು: ನಾನು ಹೇಳ್ತೀನಿ, ಡಿಕೆಶಿ ನಿಮಗೆ ಉತ್ತರ ಕೊಡೋದಿಲ್ಲ? ಹಾಗಿದ್ದ ಮೇಲೆ ಮತ್ತೇಕೆ ಕಸ್ಟಡಿಗೆ ?

ಇ.ಡಿ. ಪರ ವಕೀಲರು: ಬಹಳಷ್ಟು ಡಿಕೆಶಿ ಆಪ್ತರನ್ನು ವಿಚಾರಣೆಗೊಳಪಡಿಸುವ ಅಗತ್ಯ ಇದೆ. ಬೇರೆ ಆರೋಪಿಗಳ ಜತೆ ಮುಖಾಮುಖಿ ವಿಚಾರಣೆ ನಡೆಸುತ್ತೇವೆ

ಡಿಕೆಶಿ ಪರ ವಕೀಲರು:  ಡಿಕೆಶಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.  ಡಿಕೆಶಿ ಬಿಪಿ ಸಮಸ್ಯೆ ಪಾರ್ಶ್ವವಾಯು ಸಮಸ್ಯೆಗೆ ತಿರುಗಬಹುದು. ವಿಚಾರಣೆಯಿಂದ ಅವರು ಎಲ್ಲಿಗೂ ಓಡಿ ಹೋಗಲ್ಲ. ಇ.ಡಿ ವಶಕ್ಕೆ ಕೊಡಬೇಡಿ ಎಂಬುದಷ್ಟೇ ನಮ್ಮ ಮನವಿ..

 ಹೀಗೆ ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಅನಿಲ್ ಕುಮಾರ್ ಕುಹರ್ ತೀರ್ಪು ನೀಡಿದರು. ತಮ್ಮ ತೀರ್ಪಿನಲ್ಲಿ ಮಹತ್ವ ಕೆಲ ಅಂಶಗಳನ್ನು ಪ್ರಸ್ತಾಪಿಸಿದರು.

ನ್ಯಾಯಾಧೀಶರ ತೀರ್ಪು

ತೀರ್ಪು 1 : ಸೆ.17ರವರೆಗೆ 4 ದಿನ ಡಿ.ಕೆ.ಶಿವಕುಮಾರ್​ಗೆ ಇ.ಡಿ ಕಸ್ಟಡಿ

ತೀರ್ಪು 2 : ಇ.ಡಿ ಕಸ್ಟಡಿಯಲ್ಲೇ ಡಿಕೆಶಿಗೆ ಎಲ್ಲ ರೀತಿಯ ವೈದ್ಯಕೀಯ ನೆರವು ನೀಡಬೇಕು

ತೀರ್ಪು 3 : ಡಿಕೆಶಿ ಆರೋಗ್ಯ ಮೊದಲ ಆದ್ಯತೆ,  ಆಮೇಲೆ ನಿಮ್ಮ ವಿಚಾರಣೆ ನಡೆಸಿ

ತೀರ್ಪು 4 : ಸೋಮವಾರ ಡಿಕೆಶಿ ಜಾಮೀನು ಅರ್ಜಿಗೆ ಇ.ಡಿ ಆಕ್ಷೇಪಣೆ ಸಲ್ಲಿಸಬೇಕು

ತೀರ್ಪು 5 : ಪ್ರತಿದಿನ ಡಿಕೆಶಿಗೆ 2 ಬಾರಿ ಆರೋಗ್ಯ ತಪಾಸಣೆ ನಡೆಸಬೇಕು

ಹಾಗಾಗಿ ಇನ್ನು  ನಾಲ್ಕು ದಿನ ಡಿ ಕೆಶಿಗೆ ಇ.ಡಿ ಡ್ರಿಲ್ ಅನಿವಾರ್ಯ. ಸೋಮವಾರ ಡಿಕೆಶಿ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ. ಇಡಿ ಆಕ್ಷೇಪಣೆ ಸಲ್ಲಿಸಿ ಜಾಮೀನು ತಿರಸ್ಕೃತವಾದರೆ ತಿಹಾರ ಜೈಲೇ ಗತಿ. ಇಲ್ಲದಿದ್ದರೆ ಜಾಮೀನು ಸಿಕ್ಕರೂ  ಸಿಗಬಹುದು.