ಉದ್ಯಮಿ ಮನೆಯಲ್ಲಿ 4 ಕೆಜಿ ಚಿನ್ನ ಕದ್ದ ದಂಪತಿ ನೇಪಾಳ ಗಡಿಯಲ್ಲಿ ಸೆರೆ

First Published 25, Jan 2018, 6:54 AM IST
Couple Arrest in Nepala Border
Highlights

ತಾನು ಕೆಲಸ ಮಾಡುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮನೆಯಲ್ಲಿ ನಾಲ್ಕು ಕೆ.ಜಿ. ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಾವಲುಗಾರ ದಂಪತಿಯನ್ನು ನೇಪಾಳ ಗಡಿಯಲ್ಲಿ ಬಂಧಿಸಿ ನಗರಕ್ಕೆ ಬಾಣಸವಾಡಿ ಪೊಲೀಸರು ಕರೆ ತಂದಿದ್ದಾರೆ.

ಬೆಂಗಳೂರು (ಜ.25): ತಾನು ಕೆಲಸ ಮಾಡುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮನೆಯಲ್ಲಿ ನಾಲ್ಕು ಕೆ.ಜಿ. ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಾವಲುಗಾರ ದಂಪತಿಯನ್ನು ನೇಪಾಳ ಗಡಿಯಲ್ಲಿ ಬಂಧಿಸಿ ನಗರಕ್ಕೆ ಬಾಣಸವಾಡಿ ಪೊಲೀಸರು ಕರೆ ತಂದಿದ್ದಾರೆ.

ನೇಪಾಳದ ಮೂಲದ ಭೀಮ್ ಬಹದ್ದೂರ್ ಶಾಹಿ ಹಾಗೂ ಆತನ ಪತ್ನಿ ಮೀನಾ ಶಾಹಿ ಬಂಧಿತರಾಗಿದ್ದು, ಮತ್ತೊಬ್ಬ ಆರೋಪಿ ಅಪಿಲ್ ಶಾಹಿ ನೇಪಾಳ ಪೊಲೀಸರ ವಶದಲ್ಲಿದ್ದಾನೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಾದ ಧೀರ್ ಶಾಹಿ ಹಾಗೂ ಧೀರಜ್ ಶಾಹಿಯ ಬಂಧನಕ್ಕೆ ಬಲೆ ಬೀಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

2017ರ ಡಿ.8 ರಂದು ಬಾಣಸವಾಡಿಯ ರಿಯಲ್ ಎಸ್ಟೇಟ್ ಉದ್ಯಮಿ ಕೆ. ನಾಗರಾಜ್ ಅವರು, ಕುಟುಂಬ ಸಮೇತ ತಮಿಳುನಾಡಿಗೆ ಪ್ರವಾಸಕ್ಕೆ ತೆರಳಿದ್ದರು. ಆಗ ಅವರ ಮನೆಯ ಕಾವಲುಗಾರ ಭೀಮ್, ತನ್ನ ಸಹಚರರ ಜತೆ ಸೇರಿ ಉದ್ಯಮಿ ಮನೆಯ ಬೀಗ ಮುರಿದು ನಾಲ್ಕು ಕೆ.ಜಿ. ಚಿನ್ನಾಭರಣ ದೋಚಿದ್ದರು. ಈಗ ಬಂಧಿತ ದಂಪತಿಯಿಂದ 1 ಕೋಟಿ ರು ಮೌಲ್ಯದ ಆಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋಟಿ, ಕೋಟಿ ಬಂಗಾರ: ನೇಪಾಳ ಮೂಲದ ಭೀಮ್, ಕೆಲವು ತಿಂಗಳುಗಳಿಂದ ಉದ್ಯಮಿ ನಾಗರಾಜ್ ಅವರ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ ಆಗಿದ್ದ. ಅದೇ ಮನೆಯ ಆವರಣದ ಕೊಠಡಿಯಲ್ಲೇ ಪತ್ನಿ ಜತೆ ಆತ ನೆಲೆಸಿದ್ದ. ಹೀಗಾಗಿ ನಾಗರಾಜ್ ಮನೆಯ ಆರ್ಥಿಕ ವ್ಯವಹಾರ ಕುರಿತು ಉಳಿದುಕೊಂಡಿದ್ದ ಭೀಮ್, ಒಡೆಯನ ಮನೆಗೆ ಕನ್ನ ಹಾಕಲು ಹೊಂಚು ಹಾಕಿದ್ದ. ಡಿ.8 ರಂದು ತಮಿಳುನಾಡಿಗೆ ಪ್ರವಾಸ ಹೊರಟ ನಾಗರಾಜ್, ಮನೆ ನೋಡಿಕೊಳ್ಳುವಂತೆ ಕಾವಲುಗಾರನಿಗೆ

ಸೂಚಿಸಿದ್ದರು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ದಂಪತಿ, ಮಾಲೀಕನ ಮನೆಯಲ್ಲಿ ಚಿನ್ನಾಭರಣ ಲೂಟಿ ಮಾಡಿ ತಮ್ಮೂರಿಗೆ ತೆರಳಲು ನಿರ್ಧರಿಸಿದ್ದರು. ಬಳಿಕ ನಗರದ ಇತರೆಡೆ ಸೆಕ್ಯುರಿಟಿ ಗಾರ್ಡ್‌ಗಳಾಗಿದ್ದ ಸ್ನೇಹಿತರಾದ ಅಫಿಲ್, ಧೀರಜ್ ಹಾಗೂ ಧೀರ್ ಅವರನ್ನು ಮಧ್ಯಾಹ್ನವೇ ಮನೆ ಹತ್ತಿರ ಕರೆಸಿಕೊಂಡು  ಭೀಮ್, ತನ್ನ ಸಂಚಿನ ಬಗ್ಗೆ ವಿವರಿಸಿದ್ದ. ಇದಕ್ಕೆ ಆ ಗೆಳೆಯರು ಸಮ್ಮತಿಸಿದ್ದ ನಂತರ, ಅವರಿಗೆ ಕೊಠಡಿಯಲ್ಲೇ ಭೀಮ್ ದಂಪತಿ ಪಾರ್ಟಿ ಆಯೋಜಿಸಿತು.

ರಾತ್ರಿ 1 ಗಂಟೆ ಸುಮಾರಿಗೆ ಬಾಲ್ಕನಿಗೆ ತೆರಳಿದ ಆರೋಪಿಳು, ರಾಡ್‌ನಿಂದ ಬಾಗಿಲನ್ನು ಮೀಟಿ ಒಳ ನುಗ್ಗಿದ್ದರು. ಬಳಿಕ ಅಲ್ಮೆರಾ ಮುರಿದು 1.8 ಕೋಟಿ ಮೌಲ್ಯದ 4 ಕೆ.ಜಿ ಚಿನ್ನಾಭರಣ ಹಾಗೂ 5.7 ಲಕ್ಷ ನಗದು ದೋಚಿ ಕೊಠಡಿಗೆ ಮರಳಿದ್ದರು. ಕಳವು ಮಾಲನ್ನು ಅಲ್ಲೇ ಹಂಚಿಕೊಂಡು ರಾತ್ರಿಯೇ ಅವರು ನಗರ ತೊರೆದಿದ್ದರು.

ರೈಲಿನಲ್ಲೇ ಪ್ರಯಾಣ: ಬೆಂಗಳೂರಿನಿಂದ ದೆಹಲಿಗೆ ರೈಲಿನಲ್ಲಿ ತೆರಳಿದ ಆರೋಪಿಗಳು, ನಂತರ ಅಲ್ಲಿಂದ ಟಿಟಿಯಲ್ಲಿ ಉತ್ತರಾಖಂಡದ ಬನ್‌ಬಾಸಾ (ಭಾರತ-ನೇಪಾಳ ಗಡಿ) ತಲುಪಿದ್ದರು. ಆದರೆ ಪೂರ್ವ ಯೋಜಿತದಂತೆ ಹುಟ್ಟೂರಿಗೆ ಹೋಗದೆ ದಂಪತಿ, ಕೊನೆ ಕ್ಷಣದಲ್ಲಿ ಯೋಜನೆ ಬದಲಿಸಿ ಬನ್ ಬಾಸಾದಲ್ಲೇ ಉಳಿದುಕೊಂಡು ಇನ್ನುಳಿದವರನ್ನು ಮಾತ್ರ ನೇಪಾಳಕ್ಕೆ ಕಳುಹಿಸಿದ್ದರು. ಕೈಲಾಲಿ ಜಿಲ್ಲೆಯ ಸುಕ್ಕಡ್ ಠಾಣೆ ಪೊಲೀಸರ ನೆರವಿನಿಂದ 12 ದಿನಗಳ ಬಳಿಕ ಅಪಿಲ್‌ನನ್ನು ಪತ್ತೆ ಹಚ್ಚಿದ ಪೊಲೀಸರು, ಆತನ ಬಳಿ 94 ಗ್ರಾಂ ಚಿನ್ನದ ಸರ ಹಾಗೂ 29 ಸಾವಿರ ರು ನಗದ ಜಪ್ತಿ ಮಾಡಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

loader