ಭ್ರಷ್ಟ ಅಧಿಕಾರಿಗಳಿಂದ ಜನರ ಬದುಕು ಕಷ್ಟವಾಗಿದೆ : ಹೈ ಕೋರ್ಟ್

news | Friday, January 12th, 2018
Suvarna Web Desk
Highlights

ಶಾಪ ಅಂತಾ ಏನಾದರೂ ಇದ್ದರೆ ಅದು ಕಂದಾಯ ಇಲಾಖೆಗೆ ಮಾತ್ರ. ಜನರಿಂದ ಹಣ ಕೇಳಲು ನಿಮಗೆ ನಾಚಿಕೆಯಾಗುವುದಿಲ್ಲವೇ, ನಿಮ್ಮಂತಹ ಅಧಿಕಾರಿಗಳಿಂದ ಜನರು ಬದುಕೋದೇ ಕಷ್ಟವಾಗಿದೆ’ ಜಮೀನುವೊಂದರ ಸಂಬಂಧ ಮಹಿಳೆಯೊಬ್ಬರಿಗೆ ಪೋಡಿ ಮಾಡಿಕೊಡಲು ಸತಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ತಹಶೀಲ್ದಾರ್ ಎಚ್.ಟಿ. ಮಂಜಪ್ಪ ವಿರುದ್ಧ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಪರಿ ಇದು.

ಬೆಂಗಳೂರು (ಜ.12): ‘ಶಾಪ ಅಂತಾ ಏನಾದರೂ ಇದ್ದರೆ ಅದು ಕಂದಾಯ ಇಲಾಖೆಗೆ ಮಾತ್ರ. ಜನರಿಂದ ಹಣ ಕೇಳಲು ನಿಮಗೆ ನಾಚಿಕೆಯಾಗುವುದಿಲ್ಲವೇ, ನಿಮ್ಮಂತಹ ಅಧಿಕಾರಿಗಳಿಂದ ಜನರು ಬದುಕೋದೇ ಕಷ್ಟವಾಗಿದೆ’ ಜಮೀನುವೊಂದರ ಸಂಬಂಧ ಮಹಿಳೆಯೊಬ್ಬರಿಗೆ ಪೋಡಿ ಮಾಡಿಕೊಡಲು ಸತಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ತಹಶೀಲ್ದಾರ್ ಎಚ್.ಟಿ. ಮಂಜಪ್ಪ ವಿರುದ್ಧ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಪರಿ ಇದು.

ಕೆಂಗೇರಿ ಹೋಬಳಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ಬಿ.ಎಂ. ಕಾವಲ್‌ನ ಸರ್ವೇ ನಂ.60/2 ರಲ್ಲಿನ 17 ಗುಂಟೆ ಜಮೀನು ತಮಗೆ ಸೇರಿದ್ದು, ಅದಕ್ಕೆ ಪೋಡಿ ಮಾಡಿಕೊಡಲು ಬೆಂಗಳೂರು ದಕ್ಷಿಣ ತಹಶೀಲ್ದಾರ್ ಹಲವು ವರ್ಷಗಳಿಂದ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಕೆ. ಎಸ್. ಶರ್ಮಿಳಾ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಎನ್. ಸತ್ಯನಾರಾಯಣ ಅವರು, ಗುರುವಾರ ವಿಚಾರಣೆಗೆ ಹಾಜರಿದ್ದ ತಹಶೀಲ್ದಾರ್ ಮಂಜಪ್ಪ ಅವರನ್ನು ಕಟು ಮಾತುಗಳಿಂದ ತರಾಟೆಗೆ ತೆಗೆದುಕೊಂಡರು.

ವಿಚಾರಣೆ ವೇಳೆ ಮಂಜಪ್ಪ ಅವರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿಗಳು, 2010ರಲ್ಲಿ ಪೋಡಿ ಮಾಡಿಕೊಡಲು ಅರ್ಜಿದಾರರು ಸಲ್ಲಿಸಿರುವ ಅರ್ಜಿಯನ್ನು ಇಲ್ಲಿ ತನಕ ಏಕೆ ವಿಲೇವಾರಿ ಮಾಡಿಲ್ಲ? ಬೆಂಗಳೂರು ಸುತ್ತಮುತ್ತ ಇರುವ ಜಮೀನಿಗೆ ಪೋಡಿ ಮಾಡಲು ನಿಮಗೆ ಲಕ್ಷಾಂತರ ಹಣ ಕೊಡಬೇಕಿದೆ. ಜಮೀನಿನ ಖಾತೆ ಬದಲಾಯಿಸಲು ಬಿಬಿಎಂಪಿನವರಿಗೆ 30ರಿಂದ 40 ಸಾವಿರ ಕೊಡಬೇಕು. ನಿಮಗೆ ಸರ್ಕಾರವು ತಿಂಗಳಿಗೆ ಸರಿಯಾಗಿ ಸಂಬಳ ಕೊಡೋದಿಲ್ವಾ? ಯಾವತ್ತಾದರೂ ಸಂಬಳ ವಿಳಂಬವಾಗಿದೆಯೇ? ಸರಿಯಾಗಿ ವೇತನ ಪಡೆಯಲು ಆಗುತ್ತದೆ. ಜನರ ಕೆಲಸ ಮಾಡಲು ನಿಮಗೆ ಏನಾಗುತ್ತದೆ?

ಅರ್ಜಿದಾರರು ಸಲ್ಲಿಸಿರುವ ಅರ್ಜಿಯನ್ನು ಏಕೆ ಇನ್ನೂ ಬಾಕಿ ಉಳಿಸಿಕೊಂಡಿದ್ದೀರಿ ಎಂದು ತೀವ್ರ ಅಸಮಧಾನದಿಂದ ನುಡಿದರು. ಇದಕ್ಕೆ ಉತ್ತರಿಸಿದ ಮಂಜಪ್ಪ ಅವರು, ನಾನೂ ಹೊಸದಾಗಿ ಬಂದಿದ್ದೇನೆ. ಈ ಪ್ರಕರಣದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ತಿಳಿಸಿದರು.

ಇದರಿಂದ ಆಕ್ರೋಶಗೊಂಡ ನ್ಯಾಯಮೂರ್ತಿಗಳು, ಹಾಗಾದರೆ ನಿಮ್ಮ ಹಿಂದೆ ಯಾರು ಕೆಲಸ ಮಾಡುತ್ತಿದ್ದರೋ ಅವರನ್ನು ಕರೆಯಿರಿ. ಸದ್ಯ ನೀವು ಜನರನ್ನು ಸತಾಯಿಸುತ್ತೀರಿ. ನಾಳೆ ನಿಮ್ಮ ಹೆಣ ಸುಡಲು ಬಿಬಿಎಂಪಿಯವರು ದುಡ್ಡು ಕೇಳ್ತಾರೆ. ಇಂದು ನಿಮ್ಮಿಂದ ಜನರು ಏನು ಗತಿ ಅನುಭವಿಸುತ್ತಿದ್ದಾರೋ? ಮುಂದೆ ನಿಮಗೂ ಅದೇ ಬರುತ್ತದೆ ಎಂಬುದನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಬೇಸರದಿಂದ ನುಡಿದರು.

Comments 0
Add Comment