ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದೇ 24ರಿಂದ ಆರಂಭವಾಗಲಿರುವ  83 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭ್ರಷ್ಟಾಚಾರವನ್ನು ಸಾಕ್ಷೀಕರಿಸುವ ಮತ್ತೊಂದು ಹಗರಣ ಬಯಲಾಗಿದೆ.

ಮೈಸೂರು (ನ.22): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದೇ 24ರಿಂದ ಆರಂಭವಾಗಲಿರುವ 83 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭ್ರಷ್ಟಾಚಾರವನ್ನು ಸಾಕ್ಷೀಕರಿಸುವ ಮತ್ತೊಂದು ಹಗರಣ ಬಯಲಾಗಿದೆ.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಮ್ಮೇಳನಕ್ಕಾಗಿ ಬೃಹತ್​ ವೇದಿಕೆ ಸಜ್ಜಾಗುತ್ತಿದ್ದು, ಪ್ರಧಾನ ವೇದಿಕೆಯೇ ನಕಲಿಯಾಗಿದೆ. ಅಂದರೆ, ಇದೇ ಮಹಾರಾಜ ಕಾಲೇಜು ಮೈದಾನದಲ್ಲಿ 2015ರ ಮಾರ್ಚ್​ 1ರಂದು ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿತ್ತು. ಆಗ ಕಲಾವಿದ ಶಶಿಧರ್ ಅಡಪ ಮೈಸೂರು ಅರಮನೆಯ ದರ್ಬಾರ್​ ಹಾಲ್​ ಪರಿಕಲ್ಪನೆಯ ವೇದಿಕೆಯನ್ನು ನಿರ್ಮಿಸಿಕೊಟ್ಟಿದ್ದರು. ಆಗ ವೇದಿಕೆಗಾಗಿ ಸುಮಾರು 15 ಲಕ್ಷ ರೂಪಾಯಿ ಖರ್ಚಾಗಿತ್ತು. ಈಗ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಅದೇ ಪರಿಕಲ್ಪನೆಯಡಿ ವೇದಿಕೆ ನಿರ್ಮಿಸುತ್ತಿದ್ದು, ಇದಕ್ಕಾಗಿ ಸುಮಾರು 20 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಒಬ್ಬರೇ ಕಲಾವಿದರಿಗೆ ಒಂದೇ ಪರಿಕಲ್ಪನೆಗೆ ಇಷ್ಟೊಂದು ಹಣ ನೀಡುತ್ತಿರುವುದು ಭ್ರಷ್ಟಾಚಾರವಲ್ಲದೆ ಮತ್ತೇನು ಅಂತಾ ಸಾಹಿತಿ ಬನ್ನೂರು ಕೆ. ರಾಜು ಪ್ರಶ್ನಿಸಿದ್ದಾರೆ.

ಈಗಾಗಲೇ ಸಮ್ಮೇಳನದ ಪ್ರಚಾರಕ್ಕೆ ಹೊರಟ ಕನ್ನಡ ರಥವನ್ನೂ ಇದೇ ರೀತಿ ನಕಲು ಮಾಡಿದ್ದ ಸಾಹಿತ್ಯ ಪರಿಷತ್​ ಈಗ ಮತ್ತೆ ವೇದಿಕೆಯನ್ನು ನಕಲು ಮಾಡಿ ಲಕ್ಷಾಂತರ ರೂಪಾಯಿ ದುಂದು ವೆಚ್ಚ ಮಾಡಿ ಭ್ರಷ್ಟಾಚಾರ ಮಾಡಲು ಹೊರಟಿರುವುದು ಸಾಹಿತಿಗಳ ವಲಯದ ಆಕ್ರೋಶಕ್ಕೆ ಕಾರಣವಾಗಿದೆ.