Asianet Suvarna News Asianet Suvarna News

ಇಂದು ಮೈತ್ರಿ ಸರ್ಕಾರದ ಮಹತ್ವದ ನಿರ್ಧಾರ : ಏನಾಗಲಿದೆ..?

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ರಚನೆ ಮಾಡಿಕೊಂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಸಮನ್ವಯ ಸಮಿತಿ ಸಭೆ ಇಂದು ನಡೆಯಲಿದ್ದು, ಮಹತ್ವದ ತೀರ್ಮಾನ ಕೈಗೊಳ್ಳಲಾಗುತ್ತದೆ. 

Coordination Committee Meeting To Be Held Today

ಬೆಂಗಳೂರು :  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿ ಕಾರ್ಯಕ್ರಮ ರೈತರ ಸಾಲ ಮನ್ನಾ ಹಾಗೂ ಮೈತ್ರಿ ಸರ್ಕಾರದ ಮೊತ್ತಮೊದಲ ಬಜೆಟ್‌ನ ನೈಜ ಸ್ವರೂಪ ನಿರ್ಧರಿಸುವ ಮಹತ್ವದ ಸಮನ್ವಯ ಸಮಿತಿ ಸಭೆ ಇಂದು ನಡೆಯಲಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯ ಮುಖ್ಯ ಉದ್ದೇಶ ವೀರಪ್ಪ ಮೊಯ್ಲಿ ನೇತೃತ್ವದ ಸಮಿತಿಯು ನೀಡಿರುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ವರದಿಯ ಶಿಫಾರಸುಗಳನ್ನು ಆಖೈರುಗೊಳಿಸಿ ಮುಂದಿನ ಐದು ವರ್ಷಗಳ ಅವಧಿಗೆ ಅಳವಡಿಸಲು ಕಾರ್ಯಯೋಜನೆ ರೂಪಿಸುವುದು. ಆದರೆ, ಈ ಸಭೆಯಲ್ಲಿ ಜು.5ರಂದು ಮಂಡನೆಯಾಗಲಿರುವ ಮೈತ್ರಿಕೂಟದ ಪ್ರಥಮ ಮುಂಗಡ ಪತ್ರದಲ್ಲಿ ಹೊಸ ಸರ್ಕಾರ ಘೋಷಿಸಲಿರುವ ಕಾರ್ಯಕ್ರಮಗಳ ಪೈಕಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪ್ರಣಾಳಿಕೆಯ ಎಷ್ಟುಭರವಸೆಗಳು ಇರಬೇಕು ಎಂಬುದು ನಿರ್ಧಾರವಾಗುತ್ತದೆ.

ಜೆಡಿಎಸ್‌ ಪ್ರಣಾಳಿಕೆಯ ಪ್ರಮುಖ ಘೋಷಣೆಯಾದ ಸಾಲ ಮನ್ನಾ ಈ ಪೈಕಿ ಪ್ರಮುಖ ವಿಚಾರ. ಸಾಲ ಮನ್ನಾ ಮಾಡಲು ಕಾಂಗ್ರೆಸ್‌ ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಿದೆ. ಭಾನುವಾರದ ಸಮನ್ವಯ ಸಮಿತಿ ಸಭೆಯಲ್ಲಿ ಸಾಲ ಮನ್ನಾ ಯಾವ ಸ್ವರೂಪದಲ್ಲಿ ಇರಲಿದೆ ಎಂಬುದು ಸ್ಪಷ್ಟವಾಗಲಿದೆ. ಸಂಪೂರ್ಣ ಸಾಲ ಮನ್ನಾ ಜೆಡಿಎಸ್‌ನ ಇರಾದೆಯಾದರೆ, ಅದಕ್ಕೆ ಹಣ ಹೊಂದಿಸಲು ಹಿಂದಿನ ಸರ್ಕಾರದ ಜನಪ್ರಿಯ ಯೋಜನೆಗಳು ಮೊಟಕುಗೊಳ್ಳಬಾರದು ಎಂಬುದು ಕಾಂಗ್ರೆಸ್‌ ಕಾಳಜಿ. ಈ ಎರಡರ ನಡುವಿನ ಸಮತೋಲನ ರೂಪಿಸುವ ಹೊಣೆ ಭಾನುವಾರ ಸಮನ್ವಯ ಸಮಿತಿ ಸಭೆ ಮೇಲಿದೆ.

ಇದಲ್ಲದೆ, ಬಜೆಟ್‌ನಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಪ್ರಣಾಳಿಕೆಯ ಎಷ್ಟುಭರವಸೆಗಳು ಈ ಬಾರಿ ಅಳವಡಿಕೆಯಾಗಬೇಕು ಎಂಬುದು ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ. ತಕ್ಷಣದ ಆದ್ಯತೆಯಾದ ಈ ವಿಚಾರಗಳಲ್ಲದೆ ಮೈತ್ರಿ ಸರ್ಕಾರದ ಅಂಗ ಪಕ್ಷಗಳ ನಡುವೆ ಬಗೆಹರಿಯಬೇಕಾದ ಇನ್ನೂ ಹಲವು ವಿಚಾರಗಳು ಈ ಸಭೆಯಲ್ಲಿ ಚರ್ಚೆಗೆ ಒಳಪಡಲಿವೆ ಎಂದು ಮೂಲಗಳು ತಿಳಿಸಿವೆ. ಈ ಪೈಕಿ ಪ್ರಮುಖವಾದದ್ದು ನಿಗಮ ಮಂಡಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ.

ಸಚಿವ ಸಂಪುಟ ವಿಸ್ತರಣೆಗೂ ಮುನ್ನ ನಿಗಮ ಮಂಡಳಿ ಅಧ್ಯಕ್ಷ -ಉಪಾಧ್ಯಕ್ಷರ ನೇಮಕ ಪೂರ್ಣಗೊಳಿಸುವ ಉದ್ದೇಶ ಮೈತ್ರಿ ಸರ್ಕಾರಕ್ಕೆ ಇದೆ. ಮೂಲಗಳ ಪ್ರಕಾರ ಕಾಂಗ್ರೆಸ್‌ 30 ಹಾಗೂ ಜೆಡಿಎಸ್‌ 10 ನಿಗಮ ಮಂಡಳಿಗಳನ್ನು ಮೊದಲ ಹಂತದಲ್ಲಿ ಪಡೆದುಕೊಳ್ಳಲು ಉದ್ದೇಶಿಸಿವೆ. ಹೀಗಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಾಲಿಗೆ ದೊರೆಯಬೇಕಾದ ನಿಗಮ ಮಂಡಳಿಗಳು ಯಾವುದು ಎಂಬುದು ನಿರ್ಧಾರವಾಗಬೇಕು. ಭಾನುವಾರದ ಸಮನ್ವಯ ಸಮಿತಿ ಸಭೆಯಲ್ಲಿ ನಿಗಮ, ಮಂಡಳಿಗಳ ಪಾಲನ್ನು ಉಭಯ ಪಕ್ಷಗಳ ನಾಯಕರು ಮಾಡಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕವು ಸಭೆಯಲ್ಲಿ ಚರ್ಚೆಗೆ ಬರಲಿದೆ. ಯಾವ ಪಕ್ಷಕ್ಕೆ ಯಾವ ಜಿಲ್ಲೆಯನ್ನು ಉಸ್ತುವಾರಿಗೆ ನೀಡಬೇಕು ಎಂಬುದು ಸಭೆಯಲ್ಲಿ ತೀರ್ಮಾನವಾಗಲಿದೆ. ಪ್ರಸ್ತುತ ಕಾಂಗ್ರೆಸ್‌ ಸಚಿವರಿಂದ ಜಿಲ್ಲಾ ಉಸ್ತುವಾರಿ ನೇಮಕಕ್ಕೆ ತೀವ್ರ ಒತ್ತಡವಿರುವ ಹಿನ್ನೆಲೆಯಲ್ಲಿ ಈ ವಿಚಾರವೂ ಭಾನುವಾರದ ಸಭೆಯಲ್ಲಿ ಆದ್ಯತೆಯ ರೂಪದಲ್ಲಿ ಬರಲಿದೆ ಎನ್ನಲಾಗಿದೆ.

ಉಳಿದಂತೆ ಹಿಂದಿನ ಸರ್ಕಾರದ ಅವಧಿಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳಲ್ಲಿ ಹಾಲಿ ಸರ್ಕಾರ ಮಾಡಿರುವ ಮಾರ್ಪಾಡುಗಳ ವಿಚಾರವನ್ನು ಕಾಂಗ್ರೆಸ್‌ ಪ್ರಸ್ತಾಪಿಸಲಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಲಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಪ್ರಮುಖ ವರ್ಗಾವಣೆ ಮಾಡುವಾಗ ಅಂಗ ಪಕ್ಷದೊಂದಿಗೆ ಚರ್ಚೆ ನಡೆಸುವ ಸೌಜನ್ಯವನ್ನು ಅಪೇಕ್ಷಿಸುವುದಾಗಿ ಕಾಂಗ್ರೆಸ್‌ ನಾಯಕರು ಭಾನುವಾರದ ಸಭೆಯಲ್ಲಿ ಜೆಡಿಎಸ್‌ ನಾಯಕರಿಗೆ ತಿಳಿಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಸಿದ್ದರಾಮಯ್ಯ ಅಧ್ಯಕ್ಷತೆಯ ಈ ಸಭೆಯಲ್ಲಿ ಕಾಂಗ್ರೆಸ್‌ನಿಂದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌, ಜೆಡಿಎಸ್‌ನಿಂದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್‌ ಅಲಿ ಅವರು ಇದ್ದಾರೆ.

Follow Us:
Download App:
  • android
  • ios