ಈ ವೇಳೆ ಮೂವರು ಪೊಲೀಸ್‌ ಪೇದೆಗಳು ನ್ಯಾಯಾಲಯದಲ್ಲಿ ಹಾಜರಿದ್ದರು ಎಂದು ಗೊತ್ತಾಗಿದೆ. ನ್ಯಾಯಾಲಯದಲ್ಲಿ ಹಾಜರಿದ್ದ ಪೊಲೀಸರ ನಿರ್ಲಕ್ಷದಿಂದ ಅಪರಾಧಿ ತಪ್ಪಿಸಿಕೊಂಡಿದ್ದಾರೆ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಾಧೀಶರು ಮೂವರು ಪೊಲೀಸ್‌ ಅಮಾನತುಗೊಳಿಸಿ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ

ಬೆಂಗಳೂರು(ಏ.13): ಚೆಕ್‌ ಬೌನ್ಸ್‌ ಪ್ರಕರಣವೊಂದರಲ್ಲಿ ವಿಚಾರಣೆಗಾಗಿ ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾಗಿದ್ದ ಅಪರಾಧಿಯೊಬ್ಬ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿರುವ ಘಟನೆ ಮಂಗಳವಾರ ನಡೆದಿದೆ.

ವಿಚಾರಣೆಗಾಗಿ ನಗರದ 22ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಿ.ಎಚ್‌. ರಾಮಕೃಷ್ಣಗೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1 ವರ್ಷ ಜೈಲು ಶಿಕ್ಷೆ ಮತ್ತು 1 ಕೋಟಿ ರೂ. ದಂಡ ವಿಧಿಸಿರುವುದಾಗಿ ತೀರ್ಪು ಪ್ರಕಟಿಸಲಾಯಿತು. ಆದೇಶ ಹೊರ ಬರುತ್ತಿದ್ದಂತೆ ನ್ಯಾಯಾಲಯದ ಕಟಕಟೆಯಲ್ಲಿದ್ದ ಅಪರಾಧಿ ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾನೆ. ಈ ವೇಳೆ ಮೂವರು ಪೊಲೀಸ್‌ ಪೇದೆಗಳು ನ್ಯಾಯಾಲಯದಲ್ಲಿ ಹಾಜರಿದ್ದರು ಎಂದು ಗೊತ್ತಾಗಿದೆ. ನ್ಯಾಯಾಲಯದಲ್ಲಿ ಹಾಜರಿದ್ದ ಪೊಲೀಸರ ನಿರ್ಲಕ್ಷದಿಂದ ಅಪರಾಧಿ ತಪ್ಪಿಸಿಕೊಂಡಿದ್ದಾರೆ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಾಧೀಶರು ಮೂವರು ಪೊಲೀಸ್‌ ಅಮಾನತುಗೊಳಿಸಿ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ. ಜಯನಗರದ ಅಮರಾವತಿ ಪಿಯು ಕಾಲೇಜಿನ ಮಾಲೀಕ ರಾಮಕೃಷ್ಣ ಉದ್ಯಮಿ ರಕ್ಷಿತ್‌ ಎಂಬುವರಿಗೆ 50 ಲಕ್ಷ ಚೆಕ್‌ ನೀಡಿದ್ದರು. ಆದರೆ, ಚೆಕ್‌ ಬೌನ್ಸ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ರಕ್ಷಿತ್‌, ರಾಮಕೃಷ್ಣ ವಿರುದ್ಧ ಬನಶಂಕರಿ ಠಾಣೆಗೆ ದೂರು ನೀಡಿದ್ದರು. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. 2 ವರ್ಷಗಳಿಂದ ವಿಚಾರಣೆ ನಡೆಯುತ್ತಿತ್ತು.