"ಪ್ರಸಕ್ತ ಅಧಿವೇಶನದಲ್ಲಿ ಸಚಿನ್ ಮತ್ತು ರೇಖಾ ಅವರು ಸದನಕ್ಕೆ ಹಾಜರಾಗಿದ್ದನ್ನು ನಾನು ನೋಡಿಲ್ಲ"- ನರೇಶ್ ಅಗರ್ವಾಲ್ 

ನವದೆಹಲಿ(ಮಾ.30): ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಬಾಲಿವುಡ್ ನಟಿ ರೇಖಾ ಅವರಂತಹ ರಾಜ್ಯಸಭೆಯ ನಾಮ ನಿರ್ದೇಶಿತ ಸದಸ್ಯರು ಸದನಕ್ಕೆ ನಿರಂತರವಾಗಿ ಗೈರಾಗಬಹುದೇ? ಒಂದು ವೇಳೆ ಅವರಿಗೆ ರಾಜ್ಯಸಭೆಗೆ ಬರಲು ಆಸಕ್ತಿ ಇಲ್ಲದಿದ್ದರೆ ರಾಜೀನಾಮೆ ನೀಡಬಾರದೇಕೆ ಎಂದು ಸಮಾಜವಾದಿ ಪಕ್ಷದ ಸದಸ್ಯ ನರೇಶ್ ಅಗರ್ವಾಲ್ ಪ್ರಶ್ನಿಸಿದ್ದಾರೆ.

ಪ್ರಶ್ನೋತ್ತರ ಕಲಾಪದ ವೇಳೆ ಈ ವಿಷಯ ಪ್ರಸ್ತಾಪಿಸಿದ ಅಗರ್ವಾಲ್, ಪ್ರಸಕ್ತ ಅಧಿವೇಶನದಲ್ಲಿ ಸಚಿನ್ ಮತ್ತು ರೇಖಾ ಅವರು ಸದನಕ್ಕೆ ಹಾಜರಾಗಿದ್ದನ್ನು ನಾನು ನೋಡಿಲ್ಲ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಉಪಸಭಾಪತಿ ಪಿ.ಜೆ. ಕುರಿಯನ್, ಈ ರೀತಿಯ ಪ್ರಶ್ನೆ ಕೇಳಲು ಬರುವುದಿಲ್ಲ. ನಾಮ ನಿರ್ದೇಶಿತ ಸದಸ್ಯರು ಕೆಲ ದಿನವಾದರೂ ಸದನಕ್ಕೆ ಹಾಜರಾಗುವಂತೆ ಮನವೊಲಿಸಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಒಪ್ಪಿದ ಅಗರ್ವಾಲ್, ಈ ವಿಷಯವಾಗಿ ಗೈರು ಹಾಜರಾದ ಸದಸ್ಯರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

ಕಲೆ, ವಿಜ್ಞಾನ, ಸಾಹಿತ್ಯ, ಸಮಾಜ ಸೇವೆ ಹಾಗೂ ಕ್ರೀಡೆಯಲ್ಲಿ ಪರಿಣತಿ ಹೊಂದಿದ 12 ಮಂದಿಯನ್ನು ಮೇಲ್ಮನೆಗೆ ನಾಮನಿರ್ದೇಶನ ಮಾಡಲಾಗುತ್ತದೆ. ಪ್ರಸ್ತುತ ರಾಜ್ಯಸಭೆಯಲ್ಲಿ ಸಚಿನ್ ತೆಂಡೂಲ್ಕರ್, ರೇಖಾ ಸೇರಿದಂತೆ ಅನು ಅಗಾ, ಸಂಬಾಜಿ ಛತ್ರಪತಿ, ಸ್ವಪ್ನದಾಸ್ ಗುಪ್ತಾ, ರೂಪಾ ಗಂಗೂಲಿ, ನರೇಂದ್ರ ಜಾಧವ್, ಎಂ.ಸಿ ಮೇರಿ ಕೋಮ್, ಕೆ. ಪರಾಶರನ್, ಗೋಪಿ ಸುರೇಶ್, ಸುಬ್ರಮಣಿಯನ್ ಸ್ವಾಮಿ ಮತ್ತು ಕೆಟಿಎಸ್ ತುಳಸಿ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ.