ಮೊಬೈಲ್‌'ನ ಪೂರ್ತಿ ಮೊತ್ತ, ಕಾನೂನು ವೆಚ್ಚ ಪಾವತಿಗೆ ನ್ಯಾಯಾಲಯ ಆದೇಶ

ಬೆಂಗಳೂರು(ಫೆ. 28): ದೋಷಪೂರಿತ (ಮ್ಯಾನಿಫ್ಯಾಕ್ಚರ್‌ ಡಿಫೆಕ್ಟ್) ಮೊಬೈಲ್‌'ನ್ನು ಐಟಿ ಉದ್ಯೋಗಿಗೆ ಮಾರಾಟ ಮಾಡಿದ್ದಲ್ಲದೆ, ರಿಪೇರಿ ಮಾಡಿಸಿಕೊಡದೇ ನಿರ್ಲಕ್ಷಿಸಿದ ಮೊಬೈಲ್‌ ಉತ್ಪಾದನಾ ಕಂಪನಿಯೊಂದಕ್ಕೆ ಬೆಂಗಳೂರಿನ ಗ್ರಾಹಕರ ಹಕ್ಕುಗಳ ನ್ಯಾಯಾಲಯ ರು. 10 ಸಾವಿರ ದಂಡ ವಿಧಿಸಿದೆ.

ಅಲ್ಲದೆ, ಗ್ರಾಹಕನಿಗೆ ಮೊಬೈಲ್‌ ಫೋನ್‌'ನ ಸಂಪೂರ್ಣ ಮೊತ್ತ ಹಿಂದಿರುಗಿಸುವುದರ ಜತೆಗೆ ಕಾನೂನು ಹೋರಾಟದ ವೆಚ್ಚವಾಗಿ ರು. 3 ಸಾವಿರ ಪರಿಹಾರ ಪಾವತಿಸುವಂತೆ ನಿರ್ದೇಶಿಸಿದೆ. 

ವಿದ್ಯುನ್ಮಾನ ಉಪಕರಣಗಳಿಗೆ ನೀಡುವ ವಾರೆಂಟಿಯ ಅವಧಿಯಲ್ಲಿ ಸದರಿ ಉಪಕರಣ ಕೆಟ್ಟರೆ ಉಚಿತವಾಗಿ ಸರಿಪಡಿಸಿಕೊಡಬೇಕು. ಸರಿಪಡಿಸಲು ಸಾಧ್ಯವಾಗದಿದ್ದಲ್ಲಿ ಬದಲಿ ವಸ್ತು ಒದಗಿಸಬೇಕು. ಈ ಎರಡೂ ಆಗದಿದ್ದಲ್ಲಿ ಆ ವಸ್ತುವಿನ ಖರೀದಿ ಬೆಲೆ ಸಂಪೂರ್ಣವಾಗಿ ಹಿಂದಿರುಗಿಸಬೇಕು ಎಂಬ ನಿಯಮವಿದೆ. ಆದರೆ, ಮೊಬೈಲ್‌ ಕಂಪನಿಯು ದೋಷಪೂರಿತ ಮೊಬೈಲ್‌ ಸರಿಪಡಿಸಿಕೊಡದೇ ನಿರ್ಲಕ್ಷಿಸಿತು. ಇದರಿಂದಾಗಿ ಮೊಬೈಲ್‌ ಮೂಲಕ ತಾನು ನಡೆಸುವ ವ್ಯವಹಾರಗಳಿಗೆ ಅಡ್ಡಿಯುಂಟಾಗಿ ನಷ್ಟವಾಗಿದೆ ಮತ್ತು ಈ ಅವಧಿಯಲ್ಲಿ ತಾನು ಮಾನಸಿಕ ಹಿಂಸೆಯನ್ನು ಅನುಭವಿಸಿದ್ದೇನೆ ಎಂದು ಗ್ರಾಹಕ ದೂರು ನೀಡಿದ್ದ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. 

22 ಸಾವಿರದ ಮೊಬೈಲ್‌: ಬೆಂಗಳೂರಿನ ಭೂಪಸಂದ್ರದ ನಿವಾಸಿ ಕೆ.ಎನ್‌. ವಿಕ್ರಂ ಎಂಬುವರು ಸಂಪಿಗೆ ರಸ್ತೆಯಲ್ಲಿನ ಸಂಗೀತ ಮೊಬೈಲ್‌ ಫೋನ್‌ ಸೆಂಟರ್‌ನಲ್ಲಿ 2015ರ ಏಪ್ರಿಲ್‌ 14 ರಂದು ಎಚ್‌'ಟಿಸಿ ಡಿಸೈರ್‌ 820ಎಸ್‌ ಮಿಲ್ಕಿವೇ ಎಂಬ ಮೊಬೈಲನ್ನು 22,421 ರು.ಗೆ ಖರೀದಿಸಿದ್ದರು. ಅತ್ಯುತ್ತಮ ಗುಣಮಟ್ಟವನ್ನು ಹೊಂದಿದೆ. ಹೆಚ್ಚು ಕಾಲ ಬ್ಯಾಟರಿ ಉಳಿಯಲಿದೆ ಎಂದು ಖರೀದಿ ಸಂದರ್ಭದಲ್ಲಿ ವಿಕ್ರಂಗೆ ಮಾರಾಟಗಾರ ಭರವಸೆ ನೀಡಿದ್ದ. ಅಲ್ಲದೆ, ಫೋನ್‌'ನಲ್ಲಿ ಯಾವುದೇ ತೊಂದರೆ ಕಾಣಿಸಿಕೊಂಡಲ್ಲಿ ಬದಲಿ ಪೋನ್‌ ಅನ್ನು ನೀಡಲಾಗುವುದು ಎಂದು ತಿಳಿಸಿದ್ದ. ಆದರೆ, ಈ ಯಾವುದೇ ಸಮಸ್ಯೆ ಪರಿಹಾರವಾಗಲಿಲ್ಲ. ಇದರಿಂದ ವಿಕ್ರಂ ಗ್ರಾಹಕರ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು.

(epaper.kannadaprabha.in)