* ಅಂತರ್ಜಾಲದಲ್ಲಿ ಖರೀದಿ ವೇಳೆ ಎಚ್ಚರ ಅಗತ್ಯ* ಕೋರಿಕೆಗೆ ವ್ಯತಿರಿಕ್ತವಾದ ಉತ್ಪನ್ನ ವಿತರಿಸಿದ್ದರೆ ತಕ್ಷಣ ಪ್ರಶ್ನಿಸಬೇಕು* ಉತ್ಪನ್ನ ಬದಲಿಸದಿದ್ದರೆ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಬಹುದು* ಖರೀದಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಸಲ್ಲಿಸುವುದು ಕಡ್ಡಾಯ* ವಕೀಲರ ಸಹಾಯವಿಲ್ಲದೆ ಕೇವಲ ರೂ.100 ಗಳಲ್ಲಿ ಪ್ರಕರಣ ದಾಖಲಿಸಬಹುದು
- ರಮೇಶ್ ಎಂ. ಬನ್ನಿಕುಪ್ಪೆ, ಕನ್ನಡಪ್ರಭ
ಬೆಂಗಳೂರು: ಗ್ರಾಹಕರ ಕೋರಿಕೆ ಉಲ್ಲಂಘಿಸಿ ಕಳಪೆ ಗುಣಮಟ್ಟದ ಉತ್ಪನ್ನ ವಿತರಿಸಿದ್ದ ಆನ್‌ಲೈನ್ ಮಾರಾಟ ಸಂಸ್ಥೆ "ಸ್ನ್ಯಾಪ್'ಡೀಲ್"ಗೆ ಗ್ರಾಹಕರ ಹಕ್ಕುಗಳ ನ್ಯಾಯಾಲಯ ರೂ.6 ಸಾವಿರ ದಂಡ ವಿಧಿಸಿದೆ. ಗ್ರಾಹಕರ ಕೋರಿಕೆಯ ಉತ್ಪನ್ನಕ್ಕೆ ಈ ಹಿಂದೆ ಪಾವತಿಸಿದ್ದ ಸಂಪೂರ್ಣ ಮೊತ್ತವನ್ನು ವಾರ್ಷಿಕ ಶೇ.6ರಷ್ಟುಬಡ್ಡಿ ಸಹಿತ ಹಿಂದಿರುಗಿ ಸಬೇಕು ಎಂದು ಮಹತ್ವದ ಆದೇಶ ನೀಡಿದೆ.
ಈಗಾಗಲೇ ವಿತರಿಸಿರುವ ಕಳಪೆ ಗುಣಮಟ್ಟದ ಉತ್ಪನ್ನ ಹಿಂಪಡೆದು, ಅತ್ಯುತ್ತಮ ಗುಣಮಟ್ಟದ ಉತ್ಪನ್ನವನ್ನು ಆದೇಶದ ಪ್ರತಿ ಸಿಕ್ಕ ಒಂದು ತಿಂಗಳಲ್ಲಿ ಗ್ರಾಹಕರಿಗೆ ನೀಡಬೇಕು ಎಂದು ಸ್ನ್ಯಾಪ್‌ಡೀಲ್ ಸಂಸ್ಥೆಗೆ ನ್ಯಾಯಾಲಯ ಸೂಚಿಸಿದೆ.
ನೋಟು ಅಮಾನ್ಯ ಮಾಡುವ ಮೂಲಕ ಕ್ಯಾಶ್'ಲೆಸ್ ಮತ್ತು ಅಂತರ್ಜಾಲ ವ್ಯವಹಾರಕ್ಕೆ ಪ್ರೇರಣೆ ನೀಡುತ್ತಿರುವ ಈ ಸಂದರ್ಭ ಆನ್'ಲೈನ್ ಮಾರಾಟ ವ್ಯವಹಾರದಲ್ಲೂ ಗ್ರಾಹಕರನ್ನು ವಂಚಿಸುವ ಪ್ರಕರಣಗಳು ಸಂಭವಿಸುತ್ತಿದ್ದರೂ ವರದಿಯಾಗುವುದು ಕಡಿಮೆ. ಅಂತಹ ಸಂಸ್ಥೆಗಳ ವಿರುದ್ಧ ವಂಚನೆಗೊಳಗಾದವರು ಗ್ರಾಹಕರ ಹಕ್ಕುಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂಬುದಕ್ಕೆ ಈ ಆದೇಶ ಉದಾಹರಣೆಯಾಗಿದೆ.
ಅಲ್ಲದೆ, ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತೋರಿಸಿ ಗ್ರಾಹಕರನ್ನು ಸೆಳೆಯುವುದು. ಆಕರ್ಷಕ ರಿಯಾಯಿತಿ ಬೆಲೆಗಳನ್ನು ಪ್ರಕಟಿಸಿ ಗ್ರಾಹಕರ ವಂಚನೆ ಮಾಡುವುದಕ್ಕೆ ಮುಂದಾಗುವ ಅಂತರ್ಜಾಲ ಮಾರಾಟ ಕಂಪನಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಜತೆಗೆ ರಿಯಾಯಿತಿ ಬೆಲೆಗಳ ಬಲೆಗೆ ಬಿದ್ದು ದುಬಾರಿ ಮೊತ್ತ ತೆತ್ತು, ಮೋಸ ಹೋಗುವ ಗ್ರಾಹಕರು ಶಪಿಸಿಕೊಂಡು ಸಮಾಧಾನಪಟ್ಟುಕೊಳ್ಳುವ ಬದಲಿಗೆ ನ್ಯಾಯಾಂಗ ಹೋರಾಟದ ಮೂಲಕ ತಮ್ಮ ಹಕ್ಕುಗಳ ರಕ್ಷಣೆ ಪಡೆಯಬಹುದು ಎಂಬ ಭರವಸೆ ಮೂಡಿಸಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಫ್ರೇಜರ್'ಟೌನ್ ನಿವಾಸಿ ಸೈಯದ್ ಶರ್ಮೀನ್ ಅಫ್ಜಾ ಎಂಬವರು ರೂ.10,669 ರು. ಬೆಲೆಯ ಕಂದು ಬಣ್ಣದ ಉತ್ತಮ ಗುಣಮಟ್ಟದ ಬೆಡ್'ಶೀಟ್ ಅನ್ನು ಸ್ನ್ಯಾಪ್ ಡೀಲ್ ಸಂಸ್ಥೆ ಮೂಲಕ ಖರೀದಿಸಿದ್ದರು. ಕೆಲ ದಿನಗಳ ಬಳಿಕ ಸಂಸ್ಥೆ ಬಿಳಿ ಬಣ್ಣದ ಕಳಪೆ ಗುಣಮಟ್ಟದ ಅನುಕೂಲಕರವಲ್ಲದ ಬೆಡ್‌ಶೀಟ್ ಪಡೆದು ಬೇಸ್ತು ಬಿದ್ದಿರುವುದು ಗೊತ್ತಾಗುತ್ತದೆ. ಉತ್ಪನ್ನದ ಸಂಪೂರ್ಣ ಮೊತ್ತ ಭರಿಸಿದ ನಂತರವೂ ಕಳಪೆ ಉತ್ಪನ್ನ ನೀಡಿರುವುದು ಸಹಜವಾಗಿಯೇ ಅವರಲ್ಲಿ ಆಕ್ರೋಶ ಮೂಡಿಸಿದೆ.
ಕಳಪೆ ಗುಣಮಟ್ಟದ ಉತ್ಪನ್ನ ವಿತರಿಸಿದ್ದರಿಂದ ಅಸಮಾಧಾನಗೊಂಡ ಅಫ್ಜಾ ಅವರು, ತಾವು ಖರೀದಿಸಿರುವ ಉತ್ಪನ್ನಕ್ಕೂ, ವಿತರಿಸಿರುವ ಉತ್ಪನ್ನಕ್ಕೂ ಸಂಪೂರ್ಣ ವ್ಯತ್ಯಾಸವಿದ್ದು, ಉತ್ಪನ್ನ ಹಿಂಪಡೆದು, ಉತ್ತಮ ಗುಣಮಟ್ಟದ ಉತ್ಪನ್ನ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ, ಈ ಸ್ನ್ಯಾಪ್'ಡೀಲ್ ಸಂಸ್ಥೆ ಈ ಮನವಿಯನ್ನು ಪುರಸ್ಕರಿಸಿಲ್ಲ. ಇದರಿಂದ ಬೇಸತ್ತ ಅವರು 8 ದಿನಗಳಲ್ಲಿ ಕಳಪೆ ಉತ್ಪನ್ನವನ್ನು ಹಿಂಪಡೆದು ಹಣ ಹಿಂದಿರುಗಿಸಬೇಕು. ಇಲ್ಲದಿದ್ದರೆ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದಾಗಿ ಎಚ್ಚರಿಕೆ ನೋಟಿಸ್ ಅನ್ನು ಸ್ನ್ಯಾಪ್‌ಡೀಲ್ ಸಂಸ್ಥೆಗೆ ಕಳುಹಿಸಿದ್ದರು.
ಇದಕ್ಕೂ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆ ಹಿನ್ನೆಲೆಯಲ್ಲಿ ಖರೀದಿಗೆ ಸಂಬಂಧಿಸಿದ ಎಲ್ಲ ದಾಖಲೆಗಳೊಂದಿಗೆ ಗ್ರಾಹಕರ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು.ದೂರಿನಲ್ಲಿ ಸಂಸ್ಥೆಯಿಂದ ಮಾನಸಿಕ ಹಿಂಸೆ ಅನುಭವಿಸುವಂತಾಗಿದ್ದು, ಅದಕ್ಕೆ ಪರಿಹಾರವಾಗಿ ರೂ. 50 ಸಾವಿರ ಕೊಡಿಸುವಂತೆಯೂ ಕೋರಿದ್ದರು.
ಆದೇಶದಲ್ಲೇನಿದೆ?
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಗ್ರಾಹಕರ ಹಕ್ಕುಗಳ ನ್ಯಾಯಾಲಯದ ಅಧ್ಯಕ್ಷ ಪಿ.ವಿ.ಸಿಂಗ್ರಿ ಮತ್ತು ಸದಸ್ಯೆ ಎಂ.ಯಶೋದಮ್ಮ, ಗ್ರಾಹಕರ ಕೋರಿ ಕೆಗೆ ವಿರುದ್ಧವಾದ ಉತ್ಪನ್ನ ವಿತರಿಸುವ ಮೂಲಕ ಗ್ರಾಹಕರ ಹಕ್ಕುಗಳ ನಿಯಮಗಳನ್ನು ಉಲ್ಲಂಘಿಸಿ ದಂತಾಗಿದೆ. ಅಲ್ಲದೆ, ಹಣ ಹಿಂತಿರುಗಿಸುವಂತೆ ಪದೇ ಪದೆ ಮನವಿ ಮಾಡಿದರೂ ಪ್ರತಿಕ್ರಿಯೆ ನೀಡದೆ ಮಾನಸಿಕ ಹಿಂಸೆ ನೀಡಲಾಗಿದೆ. ಆದ ಪರಿಣಾಮ ಗ್ರಾಹಕರಿಗೆ ಮಾನಸಿಕ ಹಿಂಸೆ ನೀಡಿರುವುದಕ್ಕಾಗಿ ರೂ. 3 ಸಾವಿರ ಮತ್ತು ಕಾನೂ ನು ಹೋರಾಟದ ಪರಿಹಾರವಾಗಿ ರೂ. 3 ಸಾವಿರ ಸೇರಿ ಒಟ್ಟು ಆರು ಸಾವಿರ ರು. ದಂಡ ವಿಧಿಸಿ ಆದೇಶಿಸಿದೆ.
epaper.kannadaprabha.in
