Asianet Suvarna News Asianet Suvarna News

ಕಾಫಿ-ತಿಂಡಿ ಮೇಲೆ ಸೆಸ್ ವಿಧಿಸಿದ ಅಡಿಗಾಸ್'ಗೆ ಗ್ರಾಹಕ ನ್ಯಾಯಾಲಯದಿಂದ ದಂಡ

consumer court fine against adigas hotel

ಬೆಂಗಳೂರು: ಹೊಟೇಲ್‌ಗೆ ಬರುವ ಗ್ರಾಹಕರು ಪಡೆಯುವ ಆಹಾರ ಪದಾರ್ಥಗಳ ಖರೀದಿ ರಶೀದಿಯಲ್ಲಿ ಇಸ್ಕಾನ್‌ನ ಅಕ್ಷಯ ಪಾತ್ರೆ ಫೌಂಡೇಷನ್ ಹೆಸರಿನಲ್ಲಿ ಒಂದೊಂದು ರುಪಾಯಿ ಸಂಗ್ರಹಿಸುತ್ತಿರುವ ವಾಸುದೇವ್ ಅಡಿಗಾಸ್ ಹೋಟೆಲ್‌ನ ನೀತಿ ‘ಸರಿಯಾದ ವ್ಯಾಪಾರ ಕ್ರಮವಲ್ಲ’ವೆಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ವೇದಿಕೆ ಮಾಡಿದ್ದ ಆದೇಶವನ್ನು ರಾಜ್ಯ ಗ್ರಾಹಕ ಪರಿಹಾರ ಆಯೋಗ ಎತ್ತಿ ಹಿಡಿದಿದೆ.

೨೦೧೩ರಲ್ಲಿ ಇಸ್ಕಾನ್ ಅಕ್ಷಯ ಪಾತ್ರೆ ಯೋಜನೆಗೆ ಹಣ ನೀಡುವುದಕ್ಕಾಗಿ ಗ್ರಾಹಕರಿಂದ ಒಂದು ರು. ಹೆಚ್ಚುವರಿ ಪಡೆಯುತ್ತಿದ್ದನ್ನು ಸಮರ್ಥಿಸಿಕೊಂಡಿದ್ದ ವಾಸುದೇವ್ ಅಡಿಗಾಸ್ ಹೋಟೆಲ್ ಆಡಳಿತ ಮಂಡಳಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಎನ್ನುವರು ಗ್ರಾಹಕರ ವೇದಿಕೆಯಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ್ದ ಬೆಂಗಳೂರು ಜಿಲ್ಲಾ ಗ್ರಾಹಕರ ವೇದಿಕೆ, ಅಡಿಗಾಸ್ ಹೋಟೆಲ್‌ಗೆ ₹೧೦೦ ದಂಡ ಹಾಗೂ ಕಾನೂನು ಹೋರಾಟದ ಖರ್ಚು ಒಂದು ಸಾವಿರ ರುಪಾಯಿಗಳನ್ನು ದೂರುದಾರರಿಗೆ ನೀಡುವಂತೆ ಆದೇಶಿಸಿತ್ತು. ಆದರೆ ಹೋರಾಟ ನಿಲ್ಲಿಸದ ಅಡಿಗಾಸ್ ಹೋಟೆಲ್, ಜಿಲ್ಲಾ ಗ್ರಾಹಕರ ವೇದಿಕೆ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್ ಕೂಡ ಅಡಿಗಾಸ್ ಕ್ರಮವನ್ನು ತಪ್ಪೆಂದು ತಿಳಿಸಿತ್ತು. ಇದೀಗ ರಾಜ್ಯ ಗ್ರಾಹಕ ವೇದಿಕೆ ಕೂಡ ಹೈಕೋರ್ಟ್, ಜಿಲ್ಲಾ ಗ್ರಾಹಕರ ವೇದಿಕೆ ಆದೇಶ ಎತ್ತಿಹಿಡಿದಿದೆ.

ಹಣ ಸಂಗ್ರಹಕ್ಕಾಗಿ ಕೇವಲ ೬ ತಿಂಗಳಿಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಸಂಗ್ರಹಿಸಿದ ಅಷ್ಟೂ ಹಣ ಅಕ್ಷಯ ಪಾತ್ರೆಗೆ ವಿತರಿಸಲಾಗಿದೆ ಎಂಬ ಬಗ್ಗೆಯೂ ಯಾವುದೇ ದಾಖಲೆಗಳಿಲ್ಲ. ಈ ಬಗ್ಗೆ ನೋಟಿಸ್ ನೀಡಿ ಎರಡು ವರ್ಷ ಕಳೆದರೂ ಇನ್ನೂ ಉತ್ತರ ಬಂದಿಲ್ಲ. ಅಡಿಗಾಸ್‌ನ ಎಲ್ಲ ಹೋಟೆಲ್‌ಗಳಲ್ಲಿಯೂ ಈ ರೀತಿ ಹಣ ಸಂಗ್ರಹಿಸಲಾಗುತ್ತಿದ್ದು, ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ನರಸಿಂಹಮೂರ್ತಿ ದೂರಿನಲ್ಲಿ ವಿವರಿಸಿದ್ದರು.

(ಕನ್ನಡಪ್ರಭ ವಾರ್ತೆ)

Latest Videos
Follow Us:
Download App:
  • android
  • ios