ಕಾಯ್ದೆಯ ಅಂಶಗಳನ್ನು ಪರಿಗಣಿಸಿದ ಕೋರ್ಟ್‌, ಬಾರ್‌ ಮಾಲೀಕರು ಹೆಚ್ಚುವರಿ ಬೆಲೆ ಪಡೆಯುವುದರ ಜತೆಗೆ, ನ್ಯಾಯಾಲಯದ ದಾರಿ ತಪ್ಪಿಸಲು ಮುಂದಾಗಿದ್ದಾರೆ. ಅಲ್ಲದೆ, ಪದೇ ಪದೇ ನಿಯಮಬಾಹಿರವಾಗಿ ಹೆಚ್ಚುವರಿ ಬೆಲೆ ಪಡೆದಿದ್ದಾರೆ ಎಂದು ಅಭಿಪ್ರಾಯಪಟ್ಟು ದಂಡ ವಿಧಿಸಿ ಆದೇಶಿಸಿದೆ.

ಬೆಂಗಳೂರು(ಮೇ 30): ಕುಡಿದ ಅಮಲಿನಲ್ಲಿ ಎಷ್ಟು ಹಣ ಕೇಳಿದರೂ ಕೊಡುತ್ತಾರೆ ಎಂದು ಹೆಚ್ಚುವರಿಯಾಗಿ ರು.21 ಪಡೆದಿದ್ದ ಬಾರ್‌ ಮಾಲೀಕರೊಬ್ಬರಿಗೆ ಗ್ರಾಹಕರ ಹಕ್ಕುಗಳ ನ್ಯಾಯಾಲಯ ರು.10 ಸಾವಿರ ದಂಡ ವಿಧಿಸಿರುವ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.

ಅಲ್ಲದೆ, ಹೆಚ್ಚುವರಿಯಾಗಿ ಪಡೆದಿರುವ ರು.21ನ್ನು ಹಿಂದಿರುಗಿಸಬೇಕು. ಜತೆಗೆ ಪರಿಹಾರವಾಗಿ ರು.1 ಸಾವಿರ ನೀಡಬೇಕು ಎಂದು ಸೂಚಿಸಿದೆ. ಆ ಮೂಲಕ ಕುಡಿಯುವವರ ಬಳಿಯೂ ಎಚ್ಚರಿಕೆಯಿಂದ ವ್ಯವಹರಿಸಬೇಕು ಎನ್ನುವ ಸಂದೇಶ ರವಾನಿಸಿದೆ. 

ಕುಡಿಯಲು ಬಾರ್‌'ಗೆ ಬರುವ ಗ್ರಾಹಕರ ಕಣ್ತಪ್ಪಿಸಿ ಹೆಚ್ಚುವರಿ ಬಿಲ್‌ ಪಡೆಯುವುದು ರಾಜ್ಯದಲ್ಲಿ ಸಾಮಾನ್ಯ ಸಂಗತಿಯಾಗಿದೆ. ಇಂತಹ ವರ್ತನೆಯಿಂದಾಗಿ ಬೇಸತ್ತಿದ್ದ ವ್ಯಕ್ತಿಯೊಬ್ಬರು ಏನಾದರೂ ಮಾಡಿ ಇವರಿಗೆ ಬುದ್ಧಿ ಕಲಿಸಲೇಬೇಕು ಎಂದು ಗ್ರಾಹಕರ ಹಕ್ಕು ನ್ಯಾಯಾಲಯದ ಮೊರೆ ಹೋಗಿದ್ದರು. 

ಸಿದ್ದಾಪುರದ ವೈನ್ಸ್‌ಗೆ ದಂಡ: ಬೆಂಗಳೂರಿನ ಶ್ರೀನಗರದ ನಾಗೇಂದ್ರ ಬ್ಲಾಕ್‌'ನ ನಿವಾಸಿಯೊಬ್ಬರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ‘ಮಿನಿನೊ ವೈನ್ಸ್‌'ನಲ್ಲಿ 180 ಎಂಎಲ್‌'ನ ಮ್ಯಾಕ್‌'ಡೊನಾಲ್ಡ್‌ ವಿಸ್ಕಿ ಹಾಗೂ ಅರ್ಧ ಲೀಟರ್‌ ಸೋಡಾ ಖರೀದಿಸಿದ್ದರು. ಇದರ ಬೆಲೆ ರು.140 ಆಗಿದ್ದರೂ, ಬಾರ್‌ ಮಾಲೀಕ ಹೆಚ್ಚುವರಿಯಾಗಿ ರು.20 ಸೇರಿಸಿ ರು.160 ಬಿಲ್‌ ಕೊಟ್ಟಿದ್ದ. 

ಇದನ್ನು ಪ್ರಶ್ನಿಸಿದ ಗ್ರಾಹಕರು, ‘ಕರ್ನಾಟಕ ಅಬಕಾರಿ ಮಾರಾಟ ನಿಯಮ ಉಲ್ಲಂಘಿಸಿದ್ದೀರಿ. ಕಾನೂನುಬಾಹಿರವಾಗಿ ನನ್ನಿಂದ ಹೆಚ್ಚುವರಿ ಮೊತ್ತ ಪಡೆದಿದ್ದು, ಹೆಚ್ಚುವರಿ ಪಡೆದಿರುವ ಮೊತ್ತ ಹಿಂದಿರುಗಿಸಬೇಕು' ಎಂದು ವಕೀಲರ ಮೂಲಕ ನೋಟಿಸ್‌ ಜಾರಿ ಮಾಡಿದ್ದರು. ಅದಕ್ಕೆ ಬಾರ್‌ ಮಾಲೀಕರಿಂದ ಯಾವುದೇ ಉತ್ತರ ಬಂದಿರಲಿಲ್ಲ. ಹಾಗಾಗಿ ಗ್ರಾಹಕರ ಹಕ್ಕುಗಳ ನ್ಯಾಯಾಲಯಕ್ಕೆ ದೂರು ಸಲ್ಲಿಸಿ ಹೆಚ್ಚುವರಿಯಾಗಿ ಪಡೆದಿರುವ ಮೊತ್ತಕ್ಕೆ ಬದಲಾಗಿ ಬಾರ್‌ ಮಾಲೀಕರಿಂದ 1 ಲಕ್ಷ ರು. ಪರಿಹಾರ ಕೊಡಿಸಬೇಕು ಎಂದು ಮನವಿ ಮಾಡಿದ್ದರು. 

ದೂರಿನ ಸಂಬಂಧ ವಿಚಾರಣೆ ನಡೆಸಿದ ಉತ್ತರ ಕನ್ನಡ ಜಿಲ್ಲಾ ಗ್ರಾಹಕರ ನ್ಯಾಯಾಲಯದ ನ್ಯಾಯಾಧೀಶರಾದ ಸುನಂದಾ ಹಾಗೂ ಸದಸ್ಯ ರಾಜು ಎನ್‌. ಮೇತ್ರಿ ಅವರಿದ್ದ ಪೀಠ ಬಾರ್‌ ಮಾಲೀಕನಿಗೆ ನೋಟಿಸ್‌ ಜಾರಿ ಮಾಡಿತ್ತು. 

ದೂರಿನ ಸಂಬಂಧ ಆಕ್ಷೇಪಣೆ ಸಲ್ಲಿಸಿದ ಬಾರ್‌ ಮಾಲೀಕ, ಅಬಕಾರಿ ವ್ಯಾಪಾರ ಸಂಬಂಧದ ಪ್ರಕರಣಗಳು ಗ್ರಾಹಕರ ಹಕ್ಕುಗಳ ಕಾಯಿದೆ ವಾಪ್ತಿಗೆ ಬರುವುದಿಲ್ಲ. ಅಲ್ಲದೆ, ಸರ್ಕಾರ ನಿಗದಿ ಮಾಡಿರುವ ಬೆಲೆಗಿಂತ ಹೆಚ್ಚುವರಿಯಾಗಿ ಮಾರಾಟ ಮಾಡಲು ಬಾರ್‌ ಲೈಸೆನ್ಸ್‌ ಪಡೆದವರಿಗೆ ಅವಕಾಶವಿದೆ. ದೂರುದಾರರ ಆರೋಪ ಸರಿಯಲ್ಲ. ಆದ್ದರಿಂದ ದೂರು ರದ್ದು ಮಾಡಬೇಕು ಎಂದು ಕೋರಿದ್ದರು.

ಈ ಸಂಬಂಧ ಪರಿಶೀಲನೆ ನಡೆಸಿ ನ್ಯಾಯಪೀಠವು ಬಾರ್‌ ಲೈಸೆನ್ಸ್‌ ಇರುವವರು ಹೆಚ್ಚುವರಿ ಬೆಲೆಗೆ ಮಾರಾಟ ಮಾಡುವಂತಿಲ್ಲ ಎಂಬುದನ್ನು ಪತ್ತೆ ಹಚ್ಚುತ್ತದೆ. ಹಾಗೆಯೇ ಅಬಕಾರಿ ಕಾಯ್ದೆಯಲ್ಲೂ ಹೀಗೆ ಹೆಚ್ಚುವರಿ ಹಣ ಪಡೆಯಲು ಅವಕಾಶವಿರುವುದಿಲ್ಲ ಎಂಬುದು ತಿಳಿಯುತ್ತದೆ. ಗ್ರಾಹಕರಿಗೆ ಕಡ್ಡಾಯವಾಗಿ ಬಿಲ್‌ ನೀಡಬೇಕು ಎಂದು ಕಾಯ್ದೆಯಲ್ಲಿ ಉಲ್ಲೇಖವಿರುವುದೂ ತಿಳಿಯುತ್ತದೆ. 

ಕಾಯ್ದೆಯ ಅಂಶಗಳನ್ನು ಪರಿಗಣಿಸಿದ ಕೋರ್ಟ್‌, ಬಾರ್‌ ಮಾಲೀಕರು ಹೆಚ್ಚುವರಿ ಬೆಲೆ ಪಡೆಯುವುದರ ಜತೆಗೆ, ನ್ಯಾಯಾಲಯದ ದಾರಿ ತಪ್ಪಿಸಲು ಮುಂದಾಗಿದ್ದಾರೆ. ಅಲ್ಲದೆ, ಪದೇ ಪದೇ ನಿಯಮಬಾಹಿರವಾಗಿ ಹೆಚ್ಚುವರಿ ಬೆಲೆ ಪಡೆದಿದ್ದಾರೆ ಎಂದು ಅಭಿಪ್ರಾಯಪಟ್ಟು ದಂಡ ವಿಧಿಸಿ ಆದೇಶಿಸಿದೆ. 

ಗ್ರಾಹಕನಿಂದ ಹೆಚ್ಚುವರಿಯಾಗಿ ಪಡೆದಿರುವ ರು.21 ಹಾಗೂ ದಂಡದ ಮೊತ್ತವಾಗಿ ರು.10 ಸಾವಿರ ಹಾಗೂ ಕಾನೂನು ಹೋರಾಟದ ವೆಚ್ಚವಾಗಿ ರು.1 ಸಾವಿರ ಪರಿಹಾರ ನೀಡುವಂತೆ ಸೂಚನೆ ನೀಡಿದೆ. ಅಲ್ಲದೆ, ಮುಂದಿನ ಒಂದು ತಿಂಗಳಲ್ಲಿ ದಂಡದ ಸಂಪೂರ್ಣ ಮೊತ್ತ ಪಾವತಿಸುವಂತೆ ನಿರ್ದೇಶನ ನೀಡಿದೆ.

ವರದಿ: ರಮೇಶ್ ಎಂ.ಬನ್ನಿಕುಪ್ಪೆ, ಕನ್ನಡಪ್ರಭ
epaper.kannadaprabha.in