ರಾಜ್ಯದಲ್ಲಿ ನಾವೇ ಗೆಲ್ಲೋದು, ರಾಹುಲ್‌ ಪ್ರಧಾನಿ ಖಚಿತ

First Published 18, Mar 2018, 8:41 AM IST
Congress Win Karnataka Assembly Election
Highlights

ಕರ್ನಾಟಕ ವಿಧಾನಸಭಾ ಚುನಾವಣೆ ಕೋಮುವಾದಿ ಮತ್ತು ಜಾತ್ಯತೀತತೆಯ ನಡುವಿನ ಕದನ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ನಾವು ಈ ಚುನಾವಣೆ ಎದುರಿಸಿ ಗೆಲುವು ಸಾಧಿಸಲಿದ್ದೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ನಾವೇ ಗೆಲ್ಲಲಿದ್ದು, ರಾಹುಲ್‌ ಪ್ರಧಾನಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನವದೆಹಲಿ : ಕರ್ನಾಟಕ ವಿಧಾನಸಭಾ ಚುನಾವಣೆ ಕೋಮುವಾದಿ ಮತ್ತು ಜಾತ್ಯತೀತತೆಯ ನಡುವಿನ ಕದನ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ನಾವು ಈ ಚುನಾವಣೆ ಎದುರಿಸಿ ಗೆಲುವು ಸಾಧಿಸಲಿದ್ದೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ನಾವೇ ಗೆಲ್ಲಲಿದ್ದು, ರಾಹುಲ್‌ ಪ್ರಧಾನಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎಐಸಿಸಿಯ 84ನೇ ಅಧಿವೇಶನದಲ್ಲಿ ಶನಿವಾರ ಮಾತನಾಡಿದ ಸಿದ್ದರಾಮಯ್ಯ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸುಮಾರು 15 ನಿಮಿಷಗಳ ತಮ್ಮ ಭಾಷಣದಲ್ಲಿ ರಾಜ್ಯದಲ್ಲಿನ ತಮ್ಮ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ವಿವಿಧ ಯೋಜನೆಗಳನ್ನು ಉಲ್ಲೇಖಿಸಿದ ಸಿದ್ದರಾಮಯ್ಯ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಧೋರಣೆಯನ್ನೂ ತರಾಟೆಗೆ ತೆಗೆದುಕೊಂಡರು.

ಮೋದಿ ಅವರು ಎನ್‌ಡಿಎ ಸರ್ಕಾರವನ್ನು ‘ಈವೆಂಟ್‌ ಮ್ಯಾನೇಜ…ಮೆಂಚ್‌’ರೀತಿಯಲ್ಲಿ ಹಾಗೂ ಸಾರ್ವಜನಿಕ ಸಂಪರ್ಕ (ಪಬ್ಲಿಕ್‌ ರಿಲೇಷನ್‌) ಕಸರತ್ತಿನ ಹಾಗೆ ನಡೆಸುತ್ತಿದ್ದಾರೆ. ಯುವಕರ, ರೈತರ, ಮಹಿಳೆಯರ ಮತ್ತು ಅಲ್ಪಸಂಖ್ಯಾತರ ನೈಜ ಸಮಸ್ಯೆಗಳನ್ನು ಭಾರಿ ಪ್ರಮಾಣದಲ್ಲಿ ಜಾಹೀರಾತು ನೀಡುವ, ಹೆಡ್‌ಲೈನ್‌ ಮ್ಯಾನೇಜ… ಮಾಡುವ ಮೂಲಕ ಮರೆ ಮಾಚಲಾಗುತ್ತಿದೆ ಎಂದು ಕಿಡಿಕಾರಿದರು.

ರಾಹುಲ… ಗಾಂಧಿ ಅವರು ಕೇವಲ ಮನ್‌ ಕಿ ಬಾತ್‌ ಮಾತ್ರ ಮಾತನಾಡುವುದಿಲ್ಲ, ರೈತರ, ಯುವಕರ ಮತ್ತು ಶೋಷಿತರ ನೋವನ್ನೂ ಆಲಿಸುತ್ತಾರೆ. ಅವರು ಯುವ, ಉದಾರವಾದಿ, ಡೈನಾಮಿಕ್‌ ಆಗಿದ್ದಕ್ಕಿಂತ ಹೆಚ್ಚು ಪ್ರಜಾಪ್ರಭುತ್ವವಾದಿ ಆಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ, ಕೆಲವರು ‘ಸಬ್‌ ಕಾ ಸಾಥ್‌ ಸಬ… ಕಾ ವಿಕಾಸ್‌’ ಎಂದು ಬಾಯ್ಮಾತಿನಲ್ಲಿ ಹೇಳುತ್ತಾರೆ. ಆದರೆ ನಾವು ಕರ್ನಾಟಕದಲ್ಲಿ ಅದನ್ನು ನಿಜರೂಪದಲ್ಲಿ ಅನುಷ್ಠಾನಕ್ಕೆ ತಂದಿದ್ದೇವೆ ಎಂದು ಹೆಸರು ಹೇಳದೆ ಪ್ರಧಾನಿ ಮೋದಿ ಅವರ ಕಾರ್ಯ ವೈಖರಿಯನ್ನು ಟೀಕಿಸಿದರು. ಕರ್ನಾಟಕ ಮಾದರಿ ಅಭಿವೃದ್ಧಿಯಲ್ಲಿ ಎಲ್ಲರನ್ನು ತಲುಪುವ ಯೋಜನೆಗಳಿದ್ದು ಸಮಾನತೆಗಾಗಿ ಸರ್ಕಾರ ದುಡಿಯುತ್ತಿದೆ ಎಂದು ಹೇಳಿದರು.

ಯೂರೋಪ್‌ ದೇಶಗಳ ಏಕ ಭಾಷೆ, ಏಕ ಸಂಸ್ಕೃತಿಯ ಒಂದು ದೇಶ ಎಂಬ ಪರಿಕಲ್ಪನೆಯನ್ನು ತಿರಸ್ಕರಿಸಿದ ಬಹು ಸಂಸ್ಕ್ರತಿಯ ಭಾರತವನ್ನು ಕಟ್ಟಲಾಗಿದೆ. ಆದರೆ, ಹಿಂದುತ್ವ ಶಕ್ತಿಗಳು ಜರ್ಮನಿ, ಇಟಲಿಯ ಫ್ಯಾಸಿಸ್ಟ್‌ ಚಿಂತನೆಯನ್ನು ಎರವಲು ಪಡೆದುಕೊಂಡಿವೆ ಎಂದು ಟೀಕಿಸಿದರು.

ಜತೆಗೆ, ದೇಶವು ಇದೀಗ ಕವಲು ದಾರಿಯಲ್ಲಿದ್ದು, ಭಾರತದ ಸ್ವಾತಂತ್ರ್ಯ ಹೋರಾಟವನ್ನು ರೂಪಿಸಿದ್ದ, ಭಾರತದಿಂದ ಬ್ರಿಟಿಷರನ್ನು ಓಡಿಸಲು ನೆರವಾಗಿದ್ದ ಮೌಲ್ಯಗಳು ಅಪಾಯದಲ್ಲಿವೆ ಎಂದು ಆತಂಕ ತೋಡಿಕೊಂಡರು.

loader