ನವದೆಹಲಿ: ಕೇಂದ್ರ ಸರ್ಕಾರವು ಹಜ್ ಸಬ್ಸಿಡಿಯನ್ನು ರದ್ದುಗೊಳಿಸಿರುವ ಕ್ರಮವನ್ನು ಕಾಂಗ್ರೆಸ್ ಮುಖಂಡ ಗುಲಾಮ್ ನಬೀ ಆಝಾದ್ ಸ್ವಾಗತಿಸಿದ್ದಾರೆ.

ಸುಪ್ರೀಂ ಕೋರ್ಟ್ ನಿಗದಿಪಡಿಸಿದ ದಿನಾಂಕದ ನಾಲ್ಕು ವರ್ಷಗಳ ಮುಂಚೆಯೇ ಕೇಂದ್ರವು ಈ ಕ್ರಮ ಕೈಗೊಂಡಿದೆ. ನಮಗ್ಯಾವ ಅಭ್ಯಂತರವಿಲ್ಲ. ಸುಪ್ರೀಂ ತೀರ್ಪಿನ ಒಂದಂಶವನ್ನು ಸರ್ಕಾರ ಜಾರಿಗೊಳಿಸಿದೆ, 2ನೇ ಅಂಶವನ್ನು ಕೂಡಾ  ಜಾರಿಗೊಳಿಸಬೇಕು, ಎಂದು ಅಝಾದ್ ಹೇಳಿದ್ದಾರೆ.

ಒಂದು ವಿಷಯವಿಲ್ಲಿ ಬಹಳ ಸ್ಪಷ್ಟವಾಗಿದೆ. ಸಬ್ಸಿಡಿಯಿಂದ ವಿಮಾನಯಾನ ಸಂಸ್ಥೆಗಳಿಗೆ ಲಾಭವಾಗಿದೆಯೇ ಹೊರತು ಹಜ್ ಯಾತ್ರಿಗಳಿಗಲ್ಲ, ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಇಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಮುಸ್ಲಿಮರ ಹಜ್​ ಯಾತ್ರೆಗೆ ನೀಡಲಾಗುತ್ತಿದ್ದ ಸಬ್ಸಿಡಿ ರದ್ದುಗೊಳಿಸಿದೆ.

​ಈ ನಿರ್ಧಾರವನ್ನು ಇಂದು ಪ್ರಕಟಿಸಿರುವ ಅಲ್ಪಸಂಖ್ಯಾತ ಖಾತೆ ಸಚಿವ ಮುಕ್ತಾರ್​ ಅಬ್ಬಾಸ್​ ನಖ್ವಿ,  ಅಲ್ಪಸಂಖ್ಯಾತ ಮಹಿಳೆಯರ ಶ್ರೇಯೋಭಿವೃದ್ದಿಗೆ ಅದನ್ನು ಬಳಸಿಕೊಳ್ಳಲಾಗುವುದೆಂದು ಅವರು ಹೇಳಿದ್ದಾರೆ.

ಈ ವರ್ಷದಿಂದಲೇ ಹಜ್​ ಯಾತ್ರೆಗೆ ಈ ನಿರ್ಧಾರವು ಅನ್ವಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.