ಬೆಂಗಳೂರು[ಡಿ.27]  ಅಸಮಾಧಾನಗೊಂಡಿರುವ ರಮೇಶ್ ಜಾರಕಿಹೊಳಿ ಜತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾತನಾಡಿದ್ದಾರೆ ಎಂದು ಒಂದು ಸುದ್ದಿಯಾದರೆ ರಮೇಶ್ ಜಾರಕಿಹೊಳಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದೂ ಹೇಳಲಾಗಿದೆ.

ರಮೇಶ್ ಜಾರಕಿಹೊಳಿ ಜೊತೆ ರಾಹುಲ್ ಗಾಂಧಿ ದೂರವಾಣಿ ಮೂಲಕ  ಮಾತುಕತೆ ನಡೆಸಿದ್ದಾರೆ. ನಿಮ್ಮ ಫ್ಯಾಮಿಲಿಯಲ್ಲ ಸತೀಶ್ ಗೆ ಸಚಿವ ಸ್ಥಾನ ಕೊಡಲು ನಿಮ್ಮ ಒಪ್ಪಿಗೆ ಇದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರೇ ನನಗೆ ತಿಳಿಸಿದ್ದು ಎಂದು ಹೇಳಿದ್ದಾರೆ.

ರಾಜಕಾರಣದಲ್ಲಿ ಈಗ ರಮೇಶ್ ಒಬ್ಬಂಟಿ! ಸತೀಶ್‌ಗೆ ಜೈ ಅಂದ ಶಾಸಕರು

ಈ ಬಾರಿ ಬೆಳಗಾವಿ ಲೋಕಸಭೆಗೆ ಕಾಂಗ್ರೆಸ್ ಟಿಕೆಟ್ ನಿಮಗೆ ಕೊಡ್ತೇವೆ.. ಲೋಕಸಭೆಗೆ ಸ್ಪರ್ಧಿಸಿ. ನೀವು ಸ್ಪರ್ಧಿಸಿದ್ರೆ ಬೆಳಗಾವಿಯಲ್ಲಿ ಕಾಂಗ್ರೆಸ್ ಗೆಲ್ಲಬಹುದು. ಮುಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಬಂದಾಗ ನಿಮಗೆ ಸೂಕ್ತ ಸ್ಥಾನ ಕಲ್ಪಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ನ್ಯಾಷನಲ್ ಪಾಲಿಟಿಕ್ಸ್ ಬಗ್ಗೆ ನನಗೆ ಹೆಚ್ಚು ಆಸಕ್ತಿ ಇಲ್ಲ ಎಂದು ರಾಹುಲ್ ಬಳಿ ರಮೇಶ್ ಜಾರಕಿಹೊಳಿ ಹೇಳಿಕೊಂಡಿದ್ದಾರೆ. ನಾನು ರಾಜ್ಯ ರಾಜಕಾರಣದಲ್ಲೇ ಇರಲು ಇಚ್ಚಿಸುತ್ತೇನೆ. ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ನನಗೆ ಯೋಚಿಸಲು ಸ್ವಲ್ಪ ಸಮಯ ಕೊಡಿ ಎಂದು ರಾಹುಲ್ ಬಳಿ  ರಮೇಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ಯಾರ ಕೈಗೂ ಸಿಗದೆ ಅಜ್ಞಾತ ಸ್ಥಳಕ್ಕೆ ತೆರಳಿ ತಮ್ಮ ನಡೆಯನ್ನು ಮತ್ತಷ್ಟು ನಿಗೂಢಗೊಳಿಸುತ್ತಿದ್ದಾರೆ.   ರಮೇಶ್‌ ಜಾರಕಿಹೊಳಿ ಕಾಂಗ್ರೆಸ್ ಹಿರಿಯ ನಾಯಕರ ಭೇಟಿಯನ್ನು ನಿರಾಕರಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಭೇಟಿಗೆ ಮುಂದಾಗಿದ್ದಾರೆ ಎನ್ನಲಾಗಿದ್ದು ಸಹಜವಾಗಿ ಬಿಜೆಪಿಯಲ್ಲಿಯೂ ರಾಜಕಾರಣದ ಚಟುವಟಿಕೆ ಜೋರಾಗುವಂತೆ ಮಾಡಿದೆ.