ಸರಿಯಾಗಿ ಕೆಲಸ ಮಾಡದ ಸಚಿವರ ವಜಾ

Congress to evaluate performance of ministers Says G Parameshwar
Highlights

 ಮೈತ್ರಿಕೂಟದ ಸಂಪುಟದಲ್ಲಿ ಸ್ಥಾನ ಪಡೆದಿರುವ ಕಾಂಗ್ರೆಸ್‌ನ ಸಚಿವರ ಮೌಲ್ಯಮಾಪವನ್ನು ಖುದ್ದು ಎಐಸಿಸಿ ನಡೆಸಲಿದ್ದು, ಸಮರ್ಪಕವಾಗಿ ಕಾರ್ಯ ನಿರ್ವಹಿಸದವರಿಗೆ ಭವಿಷ್ಯದಲ್ಲಿ ಕೊಕ್ ನೀಡಿ ಅತೃಪ್ತರಿಗೆ ಅವಕಾಶ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ ಹೇಳಿದ್ದಾರೆ. 

ಬೆಂಗಳೂರು :  ಮೈತ್ರಿಕೂಟದ ಸಂಪುಟದಲ್ಲಿ ಸ್ಥಾನ ಪಡೆದಿರುವ ಕಾಂಗ್ರೆಸ್‌ನ ಸಚಿವರ ಮೌಲ್ಯಮಾಪವನ್ನು ಖುದ್ದು ಎಐಸಿಸಿ ನಡೆಸಲಿದ್ದು, ಸಮರ್ಪಕವಾಗಿ ಕಾರ್ಯ ನಿರ್ವಹಿಸದವರಿಗೆ ಭವಿಷ್ಯದಲ್ಲಿ ಕೊಕ್ ನೀಡಿ ಅತೃಪ್ತರಿಗೆ ಅವಕಾಶ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ ಹೇಳಿದ್ದಾರೆ. 

ಗುರುವಾರ ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯ ನಂತರ  ಅಸಮಾಧಾನ, ಬಂಡಾಯ ಎಲ್ಲ ಸಹಜ. ಶೀಘ್ರವೇ ಅತೃಪ್ತ ಶಾಸಕರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡುತ್ತೇನೆ. ಈ ಅತೃಪ್ತಿಯ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ ಎಂಬ ಮಾಹಿತಿ ನನಗೂ ಬಂದಿದೆ. ಆದರೆ, ಬಿಜೆಪಿಯೊಂದಿಗೆ ಯಾರೂ ಹೋಗುವುದಿಲ್ಲ ಎಂಬ ವಿಶ್ವಾಸವಿದೆ ಎಂದರು. 

ಅಸಮಾಧಾನದ ದೊಡ್ಡ ಕೂಗು ಹುಟ್ಟುಹಾಕಿರುವ ಎಂ.ಬಿ.ಪಾಟೀಲ್ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಎಂ.ಬಿ.ಪಾಟೀಲ್ ನನ್ನ ಆತ್ಮೀಯರು. ಅವರೊಂದಿಗೆ ನಾನೇ ಮಾತನಾಡುತ್ತೇನೆ. ಸಚಿವ ಸ್ಥಾನ ದೊರೆಯದೇ ಅವರು ಅಸಮಾಧಾನಗೊಂಡಿರುವುದು ಸಹಜ. ಅವರ ಅಸಮಾಧಾನವನ್ನು ಬಗೆಹರಿಸಲಾಗುವುದು ಎಂದರು. 

ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯೂ ಶೀಘ್ರ ನಡೆಯಲಿದೆ. ಆಗ ಅತೃಪ್ತರ ಪೈಕಿ ಅರ್ಹರಿಗೆ ಅವಕಾಶ ನೀಡಲಾಗುವುದು. ಕಾಂಗ್ರೆಸ್‌ನಲ್ಲಿ 78 ಮಂದಿ ಶಾಸಕರಿದ್ದಾರೆ. ಎಲ್ಲರೂ ಸಚಿವರಾಗಲು ಅರ್ಹತೆ ಹೊಂದಿರುವವರು. ಹಾಗಂತ ಎಲ್ಲರಿಗೂ ಸಚಿವ ಖಾತೆ ನೀಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. 

ಸಚಿವ ಸಂಪುಟ ವಿಸ್ತರಣೆ ಜತೆಯಲ್ಲಿಯೇ ಖಾತೆ ಹಂಚಿಕೆಯನ್ನೂ ಮಾಡಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಖಾತೆಗಳ ಹಂಚಿಕೆಯ ಪಟ್ಟಿ ನೀಡಿದ್ದೇವೆ. ಅಂತಿಮವಾಗಿ ಅವರೊಂದಿಗೆ ಚರ್ಚೆ ನಡೆಸಿ ಖಾತೆಗಳ ಹಂಚಿಕೆ ಪ್ರಕ್ರಿಯೆ ಮುಗಿಸಲಾಗುವುದು ಎಂದು ಅವರು ಹೇಳಿದರು.

ಮೈತ್ರಿ ಸರ್ಕಾರವಾದ್ದರಿಂದ ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಾಗಿಲ್ಲ. ಕೆಲವು ಜಿಲ್ಲೆಗಳಲ್ಲಿ ಕಾಂಗ್ರೆಸ್ ಗೆದ್ದಿಲ್ಲವಾದ್ದರಿಂದ ಎಲ್ಲಾ ಜಿಲ್ಲೆಗಳಿಗೂ ಪ್ರಾತಿನಿಧ್ಯ ನೀಡಲಾಗಿಲ್ಲ. ಸಂಪುಟ ವಿಸ್ತರಣೆಯಲ್ಲಾದ ಸಣ್ಣ ಪುಟ್ಟ ತಪ್ಪು ಬದಿಗೊತ್ತಿ ಸಹಕರಿಸಬೇಕು. ಇದುಯಾರೋ ಒಬ್ಬರು ತೆಗೆದುಕೊಂಡ ನಿರ್ಧಾರವಲ್ಲ. ಹೈಕಮಾಂಡ್ ಎಲ್ಲರೊಂದಿಗೂ ಚರ್ಚಿಸಿ ತೆಗೆದುಕೊಂಡ ನಿರ್ಧಾರ. ಹೀಗಾಗಿ ಪಕ್ಷದ ಹಿತದೃಷ್ಟಿಯಲ್ಲಿ ಸಹಕರಿಸಬೇಕು ಎಂದು ಅತೃಪ್ತರಲ್ಲಿ ಪರಮೇಶ್ವರ್ ಮನವಿ ಮಾಡಿದರು.

ಕೆಲವು ಆಕಾಂಕ್ಷಿಗಳ ಮೇಲೆ ಪರಮೇಶ್ವರ್ ಸೇಡು ತೀರಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅದು ಸುಳ್ಳು. ನನಗೆ ಸೇಡಿನ ಮನಸ್ಥಿತಿ ಇಲ್ಲ. ಇಷ್ಟಕ್ಕೂ ಸಂಪುಟ ವಿಸ್ತರಣೆ, ಪುನರ್ ರಚನೆ ವಿಚಾರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯ ಉಸ್ತುವಾರಿ ವೇಣುಗೋಪಾಲ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕರೆಸಿ ಮಾತನಾಡಿದ್ದಾರೆ. ದಿನೇಶ್ ಗುಂಡೂರಾವ್, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ ಹಾಗೂ ಡಿ.ಕೆ. ಶಿವಕುಮಾರ್ ಅವರೊಂದಿಗೂ ಪ್ರತ್ಯೇಕ ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಂಡು 15 ಮಂದಿ ಸಚಿವರನ್ನು ಅಂತಿಮಗೊಳಿಸಿದ್ದಾರೆ. 

ಇದರಲ್ಲಿ ಯಾರ ದುರುದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಕುರುಬ ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್‌ನಿಂದ ಗೆದ್ದಿರುವ ಕುರುಬ ಶಾಸಕರಿಗೆ ಅವಕಾಶ ನೀಡಿಲ್ಲ ಎಂಬ ಮಾತಿದೆ. ಆದರೆ, ಆರ್. ಶಂಕರ್ ಅವರಿಗೆ ನಮ್ಮ ಪಕ್ಷದಿಂದಲೇ ಸಚಿವ ಸ್ಥಾನ ನೀಡಿದ್ದೇವೆ. ಹೀಗಾಗಿ ಅನ್ಯಾಯದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಮುಂದಿನ ಕೆಪಿಸಿಸಿ ಅಧ್ಯಕ್ಷರು ಯಾರಾಗಬೇಕೆಂದು ನಿರ್ಧರಿಸುವವರೆಗೆ ನಾನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುತ್ತೇನೆ. ಯಾರೇ ಅಧ್ಯಕ್ಷರಾದರೂ ಅವರನ್ನು ಮುಕ್ತವಾಗಿ ಸ್ವಾಗತಿಸುತ್ತೇವೆ ಎಂದಷ್ಟೇ ಹೇಳಿದರು. 

loader