ನವದೆಹಲಿ[ಸೆ.11]: ಸದಾ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ದೂಷಿಸುವ ಕಾಂಗ್ರೆಸ್‌, ಇದೀಗ ತನ್ನ ಕಾರ್ಯಕರ್ತರ ಪಡೆಯನ್ನು ಇನ್ನಷ್ಟುಸದೃಢಗೊಳಿಸುವ ನಿಟ್ಟಿನಲ್ಲಿ ಆರ್‌ಎಸ್‌ಎಸ್‌ನಲ್ಲಿ ಇರುವ ಪ್ರಚಾರಕ ರೀತಿಯ ಘಟಕವೊಂದನ್ನು ತೆರೆಯಲು ನಿರ್ಧರಿಸಿದೆ. ಇಂಥ ಘಟಕದ ಸದಸ್ಯರಿಗೆ ಅದು ಪ್ರೇರಕ್‌ (ಪ್ರೇರೇಪಣೆ) ಎಂದು ಕರೆಯಲು ನಿರ್ಧರಿಸಿದೆ.

ತನ್ನ ಕಾರ್ಯಕರ್ತರ ತರಬೇತಿ ಕೌಶಲ್ಯವನ್ನು ಇನ್ನಷ್ಟುಸುಧಾರಿಸಿ ಅವರನ್ನು ಪಕ್ಷ ಸಂಘಟನೆಯಲ್ಲಿ ಇನ್ನಷ್ಟುಪರಿಣಾಮಕಾರಿ ತೊಡಗಿಸಿಕೊಳ್ಳಲು ಅನುವಾಗುವಂತೆ ಪ್ರೇರಕ್‌ಗಳ ಮೂಲಕ ತರಬೇತಿ ಕೊಡಿಸುವುದು ಕಾಂಗ್ರೆಸ್‌ನ ಉದ್ದೇಶ ಎನ್ನಲಾಗಿದೆ. ಆರ್‌ಎಸ್‌ಎಸ್‌ನಲ್ಲಿ ಇರುವ ಪ್ರಚಾರಕರು, ಬಿಜೆಪಿಯ ಕಾರ್ಯಕರ್ತರನ್ನು ಇದೇ ರೀತಿಯಲ್ಲಿ ಸಜ್ಜುಗೊಳಿಸುತ್ತಾರೆ.

ಕಾಂಗ್ರೆಸ್‌ಗೆ ಮತ್ತೆ ಶಾಕ್: ಕೈಗೆ ಗುಡ್ ಬೈ ಎಂದ ಸ್ಟಾರ್ ನಟಿ!

ಪ್ರೇರಕರು, ಪಕ್ಷದ ಕಾರ್ಯಕರ್ತರಿಗೆ ಪಕ್ಷದ ಇತಿಹಾಸ, ಸಿದ್ಧಾಂತಗಳ ಮಾಹಿತಿ ನೀಡುವುದರ ಜೊತೆಗೆ ಅವರನ್ನು ಇನ್ನಷ್ಟುಉತ್ತೇಜಿಸುವ ಮೂಲಕ ನಿಯಮಿತವಾಗಿ ಜನಸಾಮಾನ್ಯರೊಂದಿಗೆ ತೊಡಗಿಸಿಕೊಳ್ಳಲು ತರಬೇತಿ ನೀಡಲಿದ್ದಾರೆ. ಆರ್‌ಎಸ್‌ಎಸ್‌ನ ಪ್ರಚಾರಕರು, ಶಾಖೆಗಳನ್ನು ಆಯೋಜಿಸುವ ಮೂಲಕ ಕಾರ್ಯಕರ್ತರಿಗೆ ಪಕ್ಷದ ಸಿದ್ಧಾಂತಗಳ ಬಗ್ಗೆ ಅರಿವು ಮೂಡಿಸುತ್ತಾರೆ. ಸಾಮಾಜಿಕ ನೆರವಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಆದರೆ ನೇರವಾಗಿ ಯಾವುದೇ ಚುನಾವಣಾ ಪ್ರಚಾರದಂಥ ಕೆಲಸಗಳಲ್ಲಿ ಭಾಗಿಯಾಗುವುದಿಲ್ಲ. ಆದರೆ ಕಾಂಗ್ರೆಸ್‌ನ ಪ್ರೇರಕ್‌ಗಳಿಗೆ ಇಂಥ ಚುನಾವಣಾ ನಿಷಿದ್ಧ ಇಲ್ಲ.

ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್‌ ಗೊಗೋಯ್‌ ಅವರು ಆರ್‌ಎಸ್‌ಎಸ್‌ನ ಪ್ರಚಾರಕ್‌ ಮಾದರಿಯಲ್ಲೇ ಕಾಂಗ್ರೆಸ್‌ ಕೂಡಾ ಚುನಾವಣೆ ಗೆಲ್ಲಲು ಪ್ರತ್ಯೇಕ ಪಡೆ ಸ್ಥಾಪಿಸಬೇಕು ಎಂದು ಇತ್ತೀಚೆಗೆ ಸಲಹೆ ನೀಡಿದ್ದರು. ಅದರ ಬೆನ್ನಲ್ಲೇ ಸೆ.3ರಂದು ದೆಹಲಿಯಲ್ಲಿ ನಡೆದ ಪಕ್ಷದ ಒಂದು ದಿನದ ಕಾರ್ಯಾಗಾರದಲ್ಲಿ ಪ್ರೇರಕರನ್ನು ನೇಮಿಸುವ ವಿಷಯ ಪ್ರಸ್ತಾಪವಾಗಿ ಅದಕ್ಕೆ ಬಹುತೇಕರು ಸಮ್ಮತಿಯನ್ನೂ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ಇಂಥ ಅರ್ಹ ಪ್ರೇರಕರ ಪಟ್ಟಿಯೊಂದು ತಯಾರಿಸಿ ಅದನ್ನು ಸೆಪ್ಟೆಂಬರ್‌ ಮಾಸಾಂತ್ಯದೊಳಗೆ ಪಕ್ಷದ ಕೇಂದ್ರ ಕಚೇರಿಗೆ ಕಳುಹಿಸಿಕೊಡಬೇಕು ಎಂದು ಎಲ್ಲಾ ರಾಜ್ಯ ಘಟಕಗಳಿಗೂ ಸೂಚನೆ ನೀಡಲಾಗಿದೆ.

ಪ್ರೇರಕರಾಗಲು ಅರ್ಹತೆ?

ಪ್ರೇರಕರಾಗಿ ನೇಮಕವಾಗುವವರು ಸಂಘಟನಾ ಅನುಭವ ಹೊಂದಿರಬೇಕು. ಹೀಗಿದ್ದಾಗ ಮಾತ್ರವೇ ಕಾರ್ಯಕರ್ತರು ಅಂಥವರನ್ನು ಗೌರವಿಸುವುದರ ಜೊತೆಗೆ ಪಕ್ಷಕ್ಕೆ ಪ್ರಶ್ನಾತೀತ ಬದ್ಧತೆಯನ್ನು ಪ್ರದರ್ಶಿಸಲು ಸಾಧ್ಯತೆ. ಜೊತೆಗೆ ಪ್ರೇರಕರಾಗಿ ನೇಮಕವಾಗಲು ಆಸಕ್ತಿ ಹೊಂದಿರುವವರು, ತರಬೇತಿಯ ಕುರಿತು ನಂಬಿಕೆ ಮತ್ತು ಬದ್ಧತೆ ಹೊಂದಿರಬೇಕು, ಅಲ್ಲದೇ ಹೆಚ್ಚಿನ ಸಮಯವನ್ನು ಪಕ್ಷ ಸಂಘಟನೆಗೆ ಮೀಸಲಿಡಲು ಸಿದ್ಧರಾಗಿಬೇಕು.

ಬಿಜೆಪಿ ಸೇರಲು ಸಜ್ಜಾದರಾ ರಾಜ್ಯದ ಕಾಂಗ್ರೆಸ್ ಶಾಸಕ?

ಕಾರ್ಯಕರ್ತರ ವಿಶ್ವಾಸಗಳಿಸುವ ಸಾಮರ್ಥ್ಯ ಹೊಂದಿದ್ದು, ಪ್ರತಿಯೊಬ್ಬರನ್ನೂ ಗೌರವಿಸುವ ಮತ್ತು ಯಾವುದೇ ರೀತಿಯ ಗುಂಪುಗಾರಿಕೆಯಿಂದ ಹೊರತಾದ ವ್ಯಕ್ತಿತ್ವ ಹೊಂದಿರಬೇಕು ಎಂಬ ಟಿಪ್ಪಣಿಯನ್ನು ಸಭೆಯಲ್ಲಿ ಅಂಗೀಕರಿಸಲಾಗಿದೆ. ಪ್ರತಿ 4-5 ಜಿಲ್ಲೆಗಳನ್ನು ಒಳಗೊಂಡ ಒಂದು ವಿಭಾಗಕಕ್ಕೆ 3 ಪ್ರೇರಕರನ್ನು ನೇಮಿಸಬೇಕು. ಇಂಥ ಪ್ರೇರಕರು ಕನಿಷ್ಠ 5-7 ದಿನ ಮೊದಲು ತರಬೇತಿ ಪಡೆಯಬೇಕು. ಬಳಿಕ ಅವರನ್ನು ಬೇರೆ ಬೇರೆ ವಿಭಾಗಕ್ಕೆ ನೇಮಿಸಬೇಕು.

ನೇಮಕಗೊಂಡ ಬಳಿಕ ಪ್ರೇರಕರು, ಪ್ರತಿ ತಿಂಗಳೂ ಸಂಘಟನ ಸಂವಾದ ಕಾರ್ಯಕ್ರಮವನ್ನು ಪ್ರತಿ ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಬೇಕು. ಅಲ್ಲಿ ಪ್ರಸಕ್ತ ರಾಷ್ಟ್ರೀಯ ಮತ್ತು ರಾಜ್ಯ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕು.