ಬೆಂಗಳೂರು :  ವಿಧಾನಸೌಧದಲ್ಲಿ ಸಚಿವ ಪುಟ್ಟರಂಗ ಶೆಟ್ಟಿಅವರ ಆಪ್ತ ಸಹಾಯಕನ ಬಳಿ 26 ಲಕ್ಷ ರು. ನಗದು ಪತ್ತೆ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಸಚಿವರ ಬೆನ್ನಿಗೆ ಕಾಂಗ್ರೆಸ್‌ ಪಕ್ಷ ನಿಂತಿದೆ.

‘ಈ ಪ್ರಕ​ರ​ಣ​ದಲ್ಲಿ ಹಣ ಪತ್ತೆ​ಯಾ​ಗಿ​ರು​ವುದು ಒಬ್ಬ ಸಿಬ್ಬಂದಿ ಬಳಿ. ಈ ಬಗ್ಗೆ ತನಿ​ಖೆ​ಯಾ​ಗಲಿ. ಆದರೆ, ಪ್ರಕ​ರ​ಣಕ್ಕೆ ಸಂಬಂಧವೇ ಇಲ್ಲದ ಪುಟ್ಟ​ರಂಗಶೆಟ್ಟಿಅವರು ರಾಜೀ​ನಾಮೆ ಪಡೆ​ಯುವುದು ಸಾಧ್ಯವೇ ಇಲ್ಲ’ ಎಂದು ಸ್ಪಷ್ಟ​ಪ​ಡಿ​ಸಿದೆ.

ಪುಟ್ಟ​ರಂಗ​ಶೆಟ್ಟಿಪರ​ವಾಗಿ ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌, ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ, ಕಾರ್ಯಾ​ಧ್ಯಕ್ಷ ಈಶ್ವರ್‌ ಖಂಡ್ರೆ ಹಾಗೂ ಗೃಹ ಸಚಿವ ಎಂ.ಬಿ.​ಪಾ​ಟೀಲ್‌ ಶನಿ​ವಾರ ಪ್ರತ್ಯೇಕ ಹೇಳಿಕೆ ನೀಡಿದ್ದು, ಸಿಬ್ಬಂದಿ​ಯೊ​ಬ್ಬ​ರಿಂದ ಹಣ ವಶ ಪಡೆ​ಯ​ಲಾ​ಗಿದೆ. ಆದರೆ, ಈ ಹಣ ಕೊಟ್ಟಿದ್ದು ಯಾರು, ಯಾರಿಗೆ ನೀಡಲು ತಂದಿ​ದ್ದರು ಎಂಬಿ​ತ್ಯಾದಿ ವಿಚಾ​ರ​ಗಳ ಬಗ್ಗೆ ತನಿಖೆ ನಡೆ​ಯಬೇಕು. ನೇರ​ವಾಗಿ ಸಚಿ​ವ​ರನ್ನೇ ಆರೋ​ಪಕ್ಕೆ ಗುರಿ​ಮಾ​ಡು​ವುದು ಸರಿ​ಯಲ್ಲ ಎಂದು ಸಮ​ರ್ಥಿ​ಸಿ​ಕೊಂಡಿ​ದ್ದಾ​ರೆ.

ಪುಟ​ಗೋಸಿ ಮೊತ್ತ- ದಿನೇ​ಶ್‌!: ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಫೇಲ್‌ ಯುದ್ಧ ವಿಮಾನದ 33 ಸಾವಿರ ಕೋಟಿ ರು. ಹಗರಣವನ್ನೇ ಪ್ರಧಾನಮಂತ್ರಿ ನರೇಂದ್ರ ಮೋದಿ ತನಿಖೆಗೆ ಕೊಡಲಿಲ್ಲ. ಜಂಟಿ ಸಂಸದೀಯ ತನಿಖೆಗೆ ನೀಡುವಂತೆ ಆಗ್ರಹಿಸಿದರೂ ನರೇಂದ್ರ ಮೋದಿ ಸೊಪ್ಪು ಹಾಕಲಿಲ್ಲ. ಇನ್ನು ಪುಟ್ಟರಂಗಶೆಟ್ಟಿಅವರ ಮೇಲಿನ 25 ಲಕ್ಷದ ಆರೋಪ ಯಾವ ಪುಟಗೋಸಿ?’ ಎಂದು ಪ್ರಶ್ನಿಸಿದ್ದಾರೆ.

‘ವಿಧಾನಸೌಧದಲ್ಲಿ ಹಣದೊಂದಿಗೆ ಸಚಿವ ಪುಟ್ಟರಂಗಶೆಟ್ಟಿಅವರ ಸಿಬ್ಬಂದಿ ಒಬ್ಬರನ್ನು ಹಿಡಿದಿದ್ದಾರೆ. ಆ ಹಣ ಯಾರದು ಎಂಬುದನ್ನು ಸಿಬ್ಬಂದಿಯೇ ಹೇಳಬೇಕು. ಯಾರ ದುಡ್ಡು, ಯಾರಿಗೆ ಕೊಡಲು ತಂದಿದ್ದರು ಎಂಬ ಬಗ್ಗೆ ಸಮಗ್ರ ತನಿಖೆ ಆಗಬೇಕು. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಇದಕ್ಕೂ ಮೊದಲೇ ಆರೋಪ ಮಾಡುವುದು ಸರಿಯಲ್ಲ. ಕೆಪಿಸಿಸಿ ಕಚೇರಿಯಲ್ಲಿ ಸಾಕಷ್ಟುಮಂದಿ ಸಿಬ್ಬಂದಿ ಇದ್ದಾರೆ. ಯಾವ ಸಿಬ್ಬಂದಿ ಬಳಿಯಾದರೂ ಹಣ ದೊರತರೆ ಕೆಪಿಸಿಸಿ ಅಧ್ಯಕ್ಷನಾದ ನಾನು ಹೇಗೆ ಜವಾಬ್ದಾರನಾಗುತ್ತೇನೆ’ ಎಂದು ಪ್ರಶ್ನಿಸಿದರು.

‘ಮೊದಲು ಈ ಪ್ರಕ​ರ​ಣದ ಬಗ್ಗೆ ಸಮಗ್ರ ತನಿಖೆಯಾಗಲಿ. ಹಣ ಯಾರದು ಎಂಬುದನ್ನು ಮೊದಲು ಪತ್ತೆ ಹಚ್ಚಲಿ. ತನಿಖೆಯಾಗದೆ ಯಾರೋ ಒಬ್ಬ​ರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ. ಒಂದು ವೇಳೆ ನಮ್ಮ ಪಕ್ಷದವರು ತಪ್ಪಿತಸ್ಥರು ಎಂದು ಸಾಬೀತಾದರೆ ತಕ್ಷಣವೇ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

‘ಜತೆಗೆ ವಿರೋಧಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರ ಆಪ್ತ ಸಹಾಯಕ ಹಾಗೂ ಕೆ.ಎಸ್‌. ಈಶ್ವರಪ್ಪ ಅವರ ಆಪ್ತ ಸಹಾಯಕ ಏನೇನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ರಾಜೀನಾಮೆ ಕೊಟ್ಟರೇ?’ ಎಂದು ಪ್ರಶ್ನೆ ಮಾಡಿದರು.

ರಾಜೀನಾಮೆ ಇಲ್ಲ- ಖಂಡ್ರೆ:  ಕೆಪಿಸಿಸಿ ಅಧ್ಯಕ್ಷ ಈಶ್ವರ್‌ ಖಂಡ್ರೆ ಮಾತನಾಡಿ, ವಿಧಾನಸೌಧದಲ್ಲಿ ಸಚಿವ ಪುಟ್ಟರಂಗಶೆಟ್ಟಿಅವರ ಸಿಬ್ಬಂದಿ ಬಳಿ 25 ಲಕ್ಷ ಹಣ ದೊರೆತಿದೆ ಎನ್ನುವ ಮಾಹಿತಿ ಮಾಧ್ಯಮಗಳಲ್ಲಿ ನೋಡಿದ್ದೇನೆ.

ಪುಟ್ಟರಂಗಶೆಟ್ಟಿಅವರು ನೇರವಾಗಿ ಭಾಗಿಯಾಗಿದ್ದಾರೆ ಎಂದು ಪ್ರಕರಣದಲ್ಲಿ ಕಂಡು ಬಂದಿಲ್ಲ. ಹೀಗಾಗಿ ಪುಟ್ಟರಂಗಶೆಟ್ಟಿರಾಜೀನಾಮೆ ಕೇಳುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ತನಿಖೆಯಾಗಲಿ ಎಂದು ಹೇಳಿದರು.