ನವದೆಹಲಿ[ಆ.30]: ಮಾಜಿ ಸಂಸದೆ ಹಾಗೂ ಚಿತ್ರ ನಟಿ ರಮ್ಯಾ ರಾಜೀನಾಮೆ ಬಳಿಕ ಖಾಲಿ ಉಳಿದಿರುವ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಹುದ್ದೆಗೆ ಇಬ್ಬರು ಕನ್ನಡಿಗರೂ ಸೇರಿ ಒಟ್ಟು ನಾಲ್ವರ ಹೆಸರು ಮುಂಚೂಣಿಯಲ್ಲಿದೆ.

ಕರ್ನಾಟಕದ ಹಿರಿಯ ರಾಜಕಾರಣಿ ಮಾರ್ಗರೆಟ್‌ ಆಳ್ವ ಅವರ ಪುತ್ರ, ಸದ್ಯ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಟ್ವೀಟರ್‌ ಖಾತೆ ನಿರ್ವಹಿಸುತ್ತಿರುವ ನಿಖಿಲ್‌ ಆಳ್ವ ಹಾಗೂ ಕರ್ನಾಟಕದ ಕೆಪಿಸಿಸಿಯ ಸೋಷಿಯಲ್‌ ಮೀಡಿಯಾ ವಿಭಾಗದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ವೈ.ಬಿ. ಶ್ರೀವತ್ಸ ಅವರ ಹೆಸರು ಹೆಚ್ಚು ಚರ್ಚೆಯಲ್ಲಿದೆ. ಇದಲ್ಲದೆ ರಾಷ್ಟ್ರೀಯ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಹಾಗೂ ಎಐಸಿಸಿ ಮಾಧ್ಯಮ ಸಮನ್ವಯಕಾರ ರೋಹನ್‌ ಗುಪ್ತಾ ಹೆಸರೂ ಕೇಳಿಬರುತ್ತಿದೆ.

ಈ ಬೆಳವಣಿಗೆ ಕುರಿತು ಯಾವುದೇ ವಿಚಾರವನ್ನು ಬಹಿರಂಗಪಡಿಸಲು ಈ ನಾಲ್ವರು ಅಭ್ಯರ್ಥಿಗಳು ನಿರಾಕರಿಸಿದ್ದಾರೆ. ಆದರೆ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ ಅವರು ಈಗಾಗಲೇ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸ್ಥಾನದ ಅಭ್ಯರ್ಥಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಕಾಂಗ್ರೆಸ್‌ನ ಕೆಲ ನಾಯಕರು ಹೇಳುತ್ತಿದ್ದಾರೆ.

'ಫೇಸ್‌ಬುಕ್, ಟ್ವಿಟರ್‌ನಲ್ಲಿ ಬೈಬೇಡಿ, ಕೊಠಡಿಗೆ ಬಂದು ಬುದ್ಧಿ ಹೇಳಿ'..!

2017ರಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ವಹಿಸಿಕೊಂಡಾಗಿನಿಂದಲೂ ರಾಹುಲ್‌ ಗಾಂಧಿ ಅವರ ಸೋಷಿಯಲ್‌ ಮೀಡಿಯಾವನ್ನು ಕರ್ನಾಟಕದ ಹಿರಿಯ ಕಾಂಗ್ರೆಸ್‌ ನಾಯಕಿ ಮಾರ್ಗರೇಟ್‌ ಆಳ್ವಾ ಅವರ ಪುತ್ರ ನಿಖಿಲ್‌ ಆಳ್ವಾ ನಿರ್ವಹಿಸುತ್ತಿದ್ದು, ಟ್ವೀಟರ್‌ನಲ್ಲಿ ರಾಹುಲ್‌ರ ಹಿಂಬಾಲಕರ ಸಂಖ್ಯೆಯನ್ನು 20.5 ಲಕ್ಷದಿಂದ 1.5 ಕೋಟಿಗೆ ಎತ್ತರಿಸಿದ ಕೀರ್ತಿ ಆಳ್ವಾಗೆ ಸಲ್ಲುತ್ತದೆ. ಆದರೆ, ಅವರು ಮೇ ತಿಂಗಳಿನಲ್ಲಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಅವರು ಸಹ ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ವಹಿಸಿಕೊಳ್ಳುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಪ್ರಮುಖರೆನಿಸಿದ್ದಾರೆ.

ಇದಲ್ಲದೆ, ಕರ್ನಾಟಕ ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿದ್ದ ಹಾಗೂ ಇದೀಗ ರಾಷ್ಟ್ರೀಯ ಯುವ ಕಾಂಗ್ರೆಸ್‌ ಉಸ್ತುವಾರಿ ಶ್ರೀವಸ್ತ, 2018ರ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 77 ಸ್ಥಾನ ಗಳಿಸಿಕೊಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ರೋಹನ್‌ ಗುಪ್ತಾ ಹಾಗೂ ಮತ್ತೋರ್ವ ನಾಯಕ ಪವನ್‌ ಖೇರಾ ಅವರು ಸಹ ಅಭ್ಯರ್ಥಿಗಳಾಗಿದ್ದಾರೆ.

ಸಾಮಾಜಿಕ ಜಾಲತಾಣದ ಮುಖ್ಯಸ್ಥರು ಬೇಕೇಬೇಕು ಎಂಬುದು ಕಾಂಗ್ರೆಸ್‌ನ ಅಭಿಪ್ರಾಯವಾಗಿದೆ. ದಿವ್ಯ ಸ್ಪಂದನಾ ಅವರು ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಅವರ ತಂಡದಲ್ಲಿದ್ದ ಐವರು ಪ್ರಸ್ತುತ ಸಂದರ್ಭದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಅವರಿಗೆ ನಾಯಕತ್ವವೇ ಇಲ್ಲದಂತಾಗಿದೆ ಎಂದು ಇತ್ತೀಚೆಗೆ ನಡೆದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ 75ನೇ ಜಯಂತಿ ಕಾರ್ಯಕ್ರಮದಲ್ಲಿ ಹೆಸರು ಹೇಳಲಿಚ್ಚಸದ ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದ್ದರು.