ನವದೆಹಲಿ: ದೇಶದಲ್ಲಿ ಪೆಟ್ರೋಲ್‌ ಬೆಲೆ ಗಗನಕ್ಕೇರುತ್ತಿದ್ದಂತೆಯೇ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಮೇಲೆ ಕಾಂಗ್ರೆಸ್‌ ಪಕ್ಷ ಕೆಲವು ಗಂಭೀರ ಆರೋಪಗಳನ್ನು ಮಾಡಿದೆ. ‘ಬಿಜೆಪಿ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಇತರ ದೇಶಕ್ಕೆ ಅಗ್ಗದ ದರಕ್ಕೆ ಮಾರಾಟ ಮಾಡುತ್ತಿದೆ. ಆದರೆ, ಭಾರತದ ಜನರು ಮಾತ್ರ ಸರ್ವಾಧಿಕ ಬೆಲೆ ಏರಿಕೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಶುಕ್ರವಾರ ಆರೋಪಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲ, ದೇಶದಲ್ಲಿ ಪೆಟ್ರೋಲ್‌ ಅನ್ನು 78 ರು.​ರಿಂದ 86 ರು.ವರೆಗೆ ಹಾಗೂ ಡೀಸೆಲ್‌ 70ರಿಂದ 75 ರು.ವರೆಗೆ ಮಾರಾಟ ಮಾಡಲಾಗುತ್ತಿದೆ. ಆದರೆ, ಇಂಗ್ಲೆಂಡ್‌, ಆಸ್ಪ್ರೇಲಿಯಾ, ಅಮೆರಿಕ, ಮಲೇಷಿಯಾ ಮತ್ತು ಇಸ್ರೇಲ್‌ ಸೇರಿದಂತೆ 15 ದೇಶಗಳಿಗೆ ಪೆಟ್ರೋಲ್‌ ಅನ್ನು 34 ರು.ಗೆ ಮಾರುತ್ತಿದೆ. ಇನ್ನು ಡೀಸೆಲ್‌ ಅನ್ನು ಕೇವಲ 37 ರು.ಗೆ 29 ದೇಶಗಳಿಗೆ ಮೋದಿ ಸರ್ಕಾರ ಸರ್ಕಾರ ಮಾರಾಟ ಮಾಡುತ್ತಿದೆ ಎಂಬ ಸಂಗತಿ ಮಾಹಿತಿ ಹಕ್ಕು ಕಾಯ್ದೆಯ ಅಡಿ ಸಲ್ಲಿಸಿದ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಿಂದ ಬಹಿರಂಗಗೊಂಡಿದೆ ಎಂದು ಹೇಳಿದರು.

ಸರ್ವಾಧಿಕ ತೈಲ ದರ ಏರಿಕೆಯಿಂದಾಗಿ ದೇಶದ ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಪೆಟ್ರೋಲ್‌ ಡೀಸೆಲ್‌ ಮೇಲೆ ದೈತ್ಯಾಕಾರದ ತೆರಿಗೆ ವಿಧಿಸುವ ಮೂಲಕ ಮೋದಿ ಸರ್ಕಾರವು 11 ಲಕ್ಷ ಕೋಟಿ ರು. ಲಾಭ ಮಾಡಿಕೊಂಡಿದೆ ಎಂದು ಆರೋಪಿಸಿದರು.

2014ರ ಮೇನಲ್ಲಿ ಪೆಟ್ರೋಲ್‌ ಮೇಲಿನ ತೆರಿಗೆ ಪ್ರತಿ ಲೀಟರ್‌ಗೆ 9.2 ರು. ಇತ್ತು. ಆದರೆ, ಮೋದಿ ಸರ್ಕಾರ ಬಂದ ಬಳಿಕ ಪೆಟ್ರೋಲ್‌ ಮೇಲಿನ ತೆರಿಗೆಯನ್ನು ಪ್ರತಿಲೀಟರ್‌ಗೆ 19.48 ರು.ಗೆ ಏರಿಸಲಾಗಿದೆ. ಅಬಕಾರಿ ಸುಂಕವನ್ನು ಮೋದಿ ಸರ್ಕಾರ 12 ಪಟ್ಟು ಏರಿಸಿದೆ. ಅದೇರೀತಿ ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 3.46 ರು.ನಿಂದ 15.33 ರು.ಗೆ ಏರಿಸಲಾಗಿದೆ ಎಂದು ಸುರ್ಜೇವಾಲ ಆರೋಪಿಸಿದರು.

2017ರ ಜುಲೈನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಜಿಎಸ್‌ಟಿಯ ಅಡಿ ತರುವಂತೆ ಕಾಂಗ್ರೆಸ್‌ ಒತ್ತಾಯಿಸಿತ್ತು. ಆದರೆ, ಬಿಜೆಪಿ ಸರ್ಕಾರ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳಲೇ ಇಲ್ಲ ಎಂದು ಟೀಕಿಸಿದರು.

ರುಪಾಯಿ ಮೌಲ್ಯ 71 ರು.ಗೆ:  ಇದೇ ವೇಳೆ ರುಪಾಯಿ ಮೌಲ್ಯವು ಶುಕ್ರವಾರ 26 ಪೈಸೆ ಕುಸಿದು ಡಾಲರ್‌ ಎದುರು 71 ರು.ಗೆ ಏರಿತು. ಈ ಮೂಲಕ ಮತ್ತೆ ಪಾತಾಳ ಕಂಡಿತು. ಈ ಬಗ್ಗೆ ಕೂಡ ಕಾಂಗ್ರೆಸ್‌ ವಕ್ತಾರ ಸುರ್ಜೇವಾಲಾ ಪ್ರತಿಕ್ರಿಯಿಸಿ, ಮೋದಿ ಸರ್ಕಾರದ ಅಡಿ ಆರ್ಥಿಕತೆ ಕುಸಿಯುವ ಸಂಕೇತವಿದು ಎಂದು ಟೀಕಿಸಿದರು.