36 ಯುದ್ಧವಿಮಾನ ಖರೀದಿಸಲು ರಿಲಯನ್ಸ್ ಗ್ರೂಪ್ ಸಹಯೋಗದ ಡಸಾಲ್ಟ್ ಕಂಪನಿಗೆ ಟೆಂಡರ್ ನೀಡಲಾಗಿದೆ. ಈ ಮೂಲಕ ಎಚ್ ಎಎಲ್‌ಗೆ ಸಿಗುತ್ತಿದ್ದ ದೊಡ್ಡ ಟೆಂಡರ್ ಕೈತಪ್ಪಿದೆ. ಖಾಸಗಿ ಕಂಪನಿಯಿಂದ ದೊಡ್ಡ ಮೊತ್ತದ ಕಿಕ್‌ಬ್ಯಾಕ್ ಪಡೆದು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. 

ಬೆಂಗಳೂರು(ಮೇ.01): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಫೇಲ್ ಯುದ್ಧವಿಮಾನ ಖರೀದಿ ವೇಳೆ ನಿಯಮ ಉಲ್ಲಂಘಿಸಿ ರಿಲಯನ್ಸ್ ಗ್ರೂಪ್ ಸಹಯೋಗದ ಡಸಾಲ್ಟ್ ಕಂಪನಿಗೆ ಗುತ್ತಿಗೆ ನೀಡುವ ಮೂಲಕ ಕರ್ನಾಟಕಕ್ಕೆ ವಂಚನೆ ಮಾಡಿದ್ದಾರೆ ಎಂದು ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್ ಸುರ್ಜೇ ವಾಲಾ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕರ್ನಾಟಕ ದಲ್ಲಿ ಮುಖ್ಯ ಕಚೇರಿ ಹೊಂದಿರುವ ಎಚ್‌ಎಎಲ್ ಈ ಗುತ್ತಿಗೆಯಲ್ಲಿ ಪಾಲ್ಗೊಂಡಿತ್ತು ಮತ್ತು ಕಡಿಮೆ ವೆಚ್ಚದಲ್ಲಿ ಯುದ್ಧವಿಮಾನ ತಯಾರಿಸಿ ಕೊಡಲು ಬಿಡ್ ಕೂಡ ಮಾಡಿತ್ತು. ಆದರೆ, ರಿಲಯನ್ಸ್ ಸಂಸ್ಥೆಯ ಒತ್ತಡಕ್ಕೆ ಮಣಿದು ಎಚ್‌ಎಲ್‌ಗೆ ನೀಡಿದ್ದ ಟೆಂಡರ್ ರದ್ದುಪಡಿಸಿ, 36 ಯುದ್ಧವಿಮಾನ ಖರೀದಿಸಲು ರಿಲಯನ್ಸ್ ಗ್ರೂಪ್ ಸಹಯೋಗದ ಡಸಾಲ್ಟ್ ಕಂಪನಿಗೆ ಟೆಂಡರ್ ನೀಡಲಾಗಿದೆ. ಈ ಮೂಲಕ ಎಚ್ ಎಎಲ್‌ಗೆ ಸಿಗುತ್ತಿದ್ದ ದೊಡ್ಡ ಟೆಂಡರ್ ಕೈತಪ್ಪಿದೆ. ಖಾಸಗಿ ಕಂಪನಿಯಿಂದ ದೊಡ್ಡ ಮೊತ್ತದ ಕಿಕ್‌ಬ್ಯಾಕ್ ಪಡೆದು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ಇದರಿಂದ ಸಾವಿರಾರು ಉದ್ಯೋಗಗಳು ಕೈತಪ್ಪಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಸಾಲ್ಟ್ ಕಂಪನಿಗೆ ಪ್ರತಿ ಏರ್‌ಕ್ರಾಫ್ಟ್‌ಗೆ 1670 ಕೋಟಿ ರು.ನಂತೆ 36 ಏರ್‌ಕ್ರಾಫ್ಟ್‌ಗಳಿಗೆ 41,205 ಕೋಟಿ ರು. ನೀಡಲಾಗಿದೆ. ಇಷ್ಟೇ ಮೊತ್ತವನ್ನು ಪಾವತಿಸಿದ್ದ ಕತಾರ್ ಹಾಗೂ ಈಜಿಪ್ಟ್ ದೇಶಗಳಿಗೆ 46 ಯುದ್ಧವಿಮಾನಗಳನ್ನು ಡಸಾಲ್ಟ್ ಕಂಪನಿ ಪೂರೈಕೆ ಮಾಡಿದೆ. ಆದರೆ, ಭಾರತಕ್ಕೆ ಮಾತ್ರ ಕೇವಲ 36 ಯುದ್ಧವಿಮಾನ ಗಳನ್ನು ಪೂರೈಸುತ್ತಿದೆ. ಇದು ಸ್ಪಷ್ಟವಾಗಿ ಈ ವ್ಯವಹಾರದಲ್ಲಿ ಹಗರಣ ನಡೆದಿದೆ ಎಂಬುದನ್ನು ನಿರೂಪಿಸುತ್ತದೆ ಎಂದು ಆರೋಪಿಸಿದರು.
ರಕ್ಷಣಾ ಇಲಾಖೆಗೆ ಒಂದು ಸಣ್ಣ ವಸ್ತು ಖರೀದಿಸಬೇಕಾದರೂ ನಿಯಮ ಪಾಲಿಸಬೇಕು.

ಜಾಗತಿಕ ಟೆಂಡರ್ ಕರೆದು ಕಡಿಮೆ ದರಕ್ಕೆ ಬಿಡ್ ಸಲ್ಲಿಸುವ ಕಂಪನಿಗೆ ಟೆಂಡರ್ ನೀಡಬೇಕು. ಆದರೆ ರಫೇಲ್ ಏರ್‌ಕ್ರಾಫ್ಟ್ ಖರೀದಿಯಲ್ಲಿ ಈ ಎಲ್ಲಾ ನಿಯಮ ಉಲ್ಲಂಘಿಸಲಾಗಿದೆ. ಯುದ್ಧ ವಿಮಾನ ತಯಾರಿಕೆಯಲ್ಲಿ 77 ವರ್ಷ ಅನುಭವವಿರುವ ಕರ್ನಾಟಕದ ಎಚ್‌ಎಎಲ್ ಸಂಸ್ಥೆಯನ್ನು ಬದಿಗೊತ್ತಿ ಇತ್ತೀಚೆಗೆ ಬಂದ ಡಸಾಲ್ಟ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಇಂದು ಅಥವಾ ನಾಳೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬರುತ್ತಿದ್ದಾರೆ. ರಾಜ್ಯದ ಜನತೆಯ ಬಳಿ ಮತ ಕೇಳಲು ಬಿಜೆಪಿ ನಾಯಕರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ ಅವರು, ರಾಜ್ಯದ ಜನ ತಮಗಾಗಿರುವ ಅನ್ಯಾಯದ ಕುರಿತು ಮೋದಿ ಅವರನ್ನು ಪ್ರಶ್ನಿಸಬೇಕು ಎಂದರು. ಎಐಸಿಸಿ ಕಾರ್ಯದರ್ಶಿ ಅಮಿತ್ ದೇಶಮುಖ್ ಇದ್ದರು.