ನವದೆಹಲಿ(ಆ.01): ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ, ಸಂಸತ್ ಅಧಿವೇಶನದ ಬಳಿಕ ಹೊಸಬರನ್ನು ಆಯ್ಕೆ ಮಾಡಲಾಗುವುದು ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ಸಂಸತ್ ಮುಂಗಾರು ಅಧಿವೇಶನದ ಬಳಿಕ ಎಐಸಿಸಿ ನೂತನ ಅಧ್ಯಕ್ಷರ ಬಗ್ಗೆ ಪಕ್ಷ ನಿರ್ಧರಿಸಲಿದೆ ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುರ್ಜೇವಾಲ, ಸಂಸತ್ ಅಧಿವೇಶನದ ಬಳಿಕ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(CWC) ಸಭೆಯಲ್ಲಿ ಹೊಸ ಅಧ್ಯಕ್ಷರ ನೇಮಕದ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಂಸತ್ ಅಧಿವೇಶನವನ್ನು ಆಗಸ್ಟ್ 7ರ ವರೆಗೆ ವಿಸ್ತರಿಸಲಾಗಿದ್ದು, ಅಧಿವೇಶನದ ಬಳಿಕ ನಡೆಯುವ ಸಿಡಬ್ಲ್ಯುಸಿ ಸಭೆಯಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕೂಡ ಭಾಗವಹಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.