ಶಿವಮೊಗ್ಗ[ಆ.20]: ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಭಾನುವಾರ ಪ್ರಕಟಗೊಳ್ಳುತ್ತಿದ್ದಂತೆ ಜಿಲ್ಲಾ ಕಾಂಗ್ರೆಸಿನಲ್ಲಿ ಅಸಮಾಧಾನ ಸ್ಪೋಟಗೊಂಡಿದೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ನೇತೃತ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿ ಭಾನುವಾರ ಬಿ ಫಾರಂ ವಿತರಿಸಲಾಗಿದ್ದು, ಟಿಕೆಟ್ ವಂಚಿತರ ಗುಂಪು ಆಕ್ರೋಶಗೊಂಡು ತಮ್ಮ ಬೆಂಬಲಿಗರೊಂದಿಗೆ ನಗರದ ರಾಘವೇಂದ್ರ ಸ್ವಾಮಿ ಮಠದ ರಸ್ತೆಯ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕಚೇರಿ ಮೇಲೆ ಕಲ್ಲು ತೂರಾಡಿ ಕಿಟಕಿಗಳ ಗಾಜುಗಳನ್ನು ಪುಡಿಮಾಡಿ, ಕಚೇರಿಯ ಎದುರು ಟಯರ್‌ಗೆ ಬೆಂಕಿಹಚ್ಚುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು ಈ ಮೂಲಕ ಕಾಂಗ್ರೆಸ್ ಪಕ್ಷದ ಟಿಕೆಟ್ ಹಂಚಿಕೆ ಭಿನ್ನಮತ ಸ್ಫೋಟಗೊಂಡಂತಾಗಿದೆ.

ಕಾಂಗ್ರೆಸ್‌ನ ಅನೇಕ ನಾಯಕರು ಹಾಗೂ ಮುಖಂಡರು ಟಿಕೆಟ್ ಆಕಾಂಕ್ಷಿಗಳಾಗಿದ್ದು ಚುನಾವಣೆ ಹಿನ್ನೆಲೆ ಪ್ರಚಾರ ಕಾರ್ಯವನ್ನು ಸಹ ಆರಂಭಿಸಿದ್ದರು. ಕೆಲವರು ನಾಮಪತ್ರಗಳನ್ನು ಸಲ್ಲಿಸಿದ್ದರು. ಆದರೆ ಭಾನುವಾರ ಟಿಕೆಟ್ ಪಟ್ಟಿ ಅಂತಿಮಗೊಳಿಸಿದ್ದು, ಅನೇಕರು ಟಿಕೆಟ್ ವಂಚಿತರಾಗಿದ್ದು ಕಚೇರಿ ಎದುರು ಪ್ರತಿಭಟನೆ ನಡೆಸಿ ನಿಷ್ಠಾವಂತ ಕಾರ್ಯಕರ್ತರಿಗೆ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಲಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.

ವಾರ್ಡ್ ನಂಬರ್ 17 ರ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಹಾಗೂ ಉತ್ತರ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ವಿಶ್ವನಾಥ್ ಕಾಶಿ ಹಾಗೂ 23 ರ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ರಂಗನಾಥ್ ಅವರ 50 ಕ್ಕೂ ಹೆಚ್ಚು ಬೆಂಬಲಿಗರು ಭಾನುವಾರ ಸಂಜೆ ಸುಮಾರು ಕಾಂಗ್ರೆಸ್ ಕಚೇರಿಗೆ ನುಗ್ಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಿಶ್ವನಾಥ್ ಕಾಶಿ ಮತ್ತು ರಂಗನಾಥ್ ಅವರಿಗೆ ಟಿಕೇಟ್ ನೀಡಬೇಕೆಂದು ಆಗ್ರಹಿಸಿದ್ದಾರೆ.

ಪಕ್ಷದ ಕಚೇರಿಗೆ ಕಲ್ಲುತೂರಾಟ ನಡೆಸಿದ್ದರಿಂದ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದರು. ಕಚೇರಿಯ ಕಿಟಕಿ ಗಾಜು ಪುಡಿ ಮಾಡಿದ್ದಕ್ಕೆ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ.

ಬಿಜೆಪಿಯಲ್ಲೂ ಭಂಡಾಯದ ಕಾವು
ಮಹಾನಗರ ಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿಯೂ ಸಹ ಅಸಮಧಾನ ಸ್ಪೋಟಗೊಂಡಿದ್ದು, ಬಂಡಾಯದ ಕಾವು ಏರಿದೆ. ಕೆಲ ಟಿಕೆಟ್ ವಂಚಿತರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಮುಂದಾಗಿದ್ದು, ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ದ ಅಸಹಕಾರ ಚಳುವಳಿ ಎದ್ದಿದ್ದಾರೆ. ಇನ್ನು ಕೆಲವರು ಪಕ್ಷದಲ್ಲೇ ಮುಂದುವರೆಯುವುದಾಗಿ ತಿಳಿಸಿದ್ದಾರೆ. 


ಬಿ ಫಾರಂ ನೀಡಿದ್ದೇವೆ ಪಟ್ಟಿ ಸೋಮವಾರ ಪ್ರಕಟಿಸುತ್ತೇವೆ. ಟಿಕೆಟ್ ಆಕಾಂಕ್ಷಿಗಳಾಗಿದ್ದ ಕೆಲವು ಕ್ಷೇತ್ರಗಳಲ್ಲಿ ಬೇರೆಯವರಿಗೆ ಬಿ ಫಾರಂ ನೀಡಿದ್ದರಿಂದ ಆಕಾಂಕ್ಷಿಗಳಾಗಿದ್ದವರು ನಿರಾಶ್ರಿತರಾಗಿ ಕಚೇರಿ ಎದುರು ಗಲಾಟೆ ಮಾಡಿದ್ದಾಾರೆ. ಅವರನ್ನು ಕರೆದು ಮಾತನಾಡಿದ್ದೇನೆ. ನಾಳೆನೂ ಅವರೊಂದಿಗೆ ಮಾತನಾಡುತ್ತೇನೆ ಟಿಕೆಟ್ ಪ್ರಕಟಗೊಂಡರೆ ಇವೆಲ್ಲಾ ಸಾಮಾನ್ಯ.

- ಕಾಂಗ್ರೆಸ್ ಜಿಲ್ಲಾಧ್ಯಕ್ಷ, ತೀ.ನಾ. ಶ್ರೀನಿವಾಸ್

ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೆ. ಚುನಾವಣೆಯಲ್ಲಿಯೂ ಗೆಲ್ಲುವ ಭರವಸೆ ಇತ್ತು ಪ್ರಚಾರ ಕಾರ್ಯವನ್ನು ಆರಂಭಿಸಿದ್ದೆ, ಆದರೆ ಪಕ್ಷದ ವರಿಷ್ಠರು ಯಾವುದೊ ಒತ್ತಡಕ್ಕೆ ಮಡಿದು ಬೇರೆಯವರಿಗೆ ಟಿಕೆಟ್ ನೀಡಿದ್ದಾರೆ. ನಾನು ಬಂಡಾಳ ಏಳುವುದಿಲ್ಲ. ಪಕ್ಷದಲ್ಲೇ ಮುಂದುವರೆಯುತ್ತೇನೆ.

- ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ವಿಶ್ವನಾಥ್ ಕಾಶಿ