ಡೈರಿಯಲ್ಲಿ ಹಣ ಪಡೆದ ಪಟ್ಟಿಯಲ್ಲಿ ನಮೂದಾಗಿರುವ ಇನಿಶಿಯಲ್’ಗಳು ಬಿಜೆಪಿ ನಾಯಕರಿಗೂ ಹಾಗೂ ಕಡೆಯಲ್ಲಿರುವ ಸಹಿ ಬಿಜೆಪಿ ಎಂಎಲ್’ಸಿ ಲೆಹರ್ಸಿಂಗ್ ಅವರಿಗೂ ಹೋಲಿಕೆ ಆಗುತ್ತೆ ಎಂದ ದಿನೇಶ್ ಗುಂಡುರಾವ್, ಈ ಡೈರಿ, ಗೋವಿಂದರಾಜು ಡೈರಿ ಹಾಗೂ ಸಹರಾ-ಬಿರ್ಲಾ ಡೈರಿ ಎಲ್ಲದರ ಬಗ್ಗೆಯೂ ಉನ್ನತ ಮಟ್ಟದ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು (ಫೆ.25): ಕಾಂಗ್ರೆಸ್ ಹೈಕಮಾಂಡ್’ಗೆ ಕಪ್ಪ ಸಲ್ಲಿಸಿದ ವಿವರಗಳುಳ್ಳ ಡೈರಿ ಬಹಿರಂಗಗೊಂಡ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಫೇಸ್’ಬುಕ್ನಲ್ಲಿ ಓಡಾಡುತ್ತಿದ್ದ ಡೈರಿಯ ಪ್ರತಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲ, 2013ರಲ್ಲಿ ಲೆಹರ್ಸಿಂಗ್ ಅಡ್ವಾಣಿಗೆ ಪತ್ರ ಬರೆದಿರುವುದನ್ನೂ ಬಿಡುಗಡೆ ಮಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಪ್ರತ್ಯುತ್ತರ ನೀಡಿದೆ. ಈ ಎಲ್ಲ ವಿವರಗಳ ಸವಿವರ ವರದಿ ಇಲ್ಲಿದೆ.
ಕಳೆದ ಮೂರು ದಿನಗಳಿಂದ ಫೇಸ್’ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಡೈರಿಯ ಪ್ರತಿಯೊಂದನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನ ವಿಧಾನಸೌಧದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಈ ಡೈರಿ ಬಿಡುಗಡೆ ಮಾಡಿದ ಅವರು, ಬಿಜೆಪಿ ಶಾಸಕ ಲೆಹರ್ ಸಿಂಗ್ ನಿವಾಸದ ಮೇಲೆ ಐಟಿ ದಾಳಿ ನಡೆದಾಗ ಸಿಕ್ಕ ಡೈರಿ ಇದು ಎಂದೂ ಆರೋಪಿಸಿದ್ದಾರೆ.
ಡೈರಿಯಲ್ಲಿ ಹಣ ಪಡೆದ ಪಟ್ಟಿಯಲ್ಲಿ ನಮೂದಾಗಿರುವ ಇನಿಶಿಯಲ್’ಗಳು ಬಿಜೆಪಿ ನಾಯಕರಿಗೂ ಹಾಗೂ ಕಡೆಯಲ್ಲಿರುವ ಸಹಿ ಬಿಜೆಪಿ ಎಂಎಲ್’ಸಿ ಲೆಹರ್ಸಿಂಗ್ ಅವರಿಗೂ ಹೋಲಿಕೆ ಆಗುತ್ತೆ ಎಂದ ಅವರು, ಈ ಡೈರಿ, ಗೋವಿಂದರಾಜು ಡೈರಿ ಹಾಗೂ ಸಹರಾ-ಬಿರ್ಲಾ ಡೈರಿ ಎಲ್ಲದರ ಬಗ್ಗೆಯೂ ಉನ್ನತ ಮಟ್ಟದ ತನಿಖೆ ಆಗಲಿ ಅಂತ ಆಗ್ರಹಿಸಿದ್ದಾರೆ.
ಅಷ್ಟೇ ಅಲ್ಲದೇ, ಇದೇ ವೇಳೆ 2013ರಲ್ಲಿ ಲೆಹರ್ ಸಿಂಗ್ ಎಲ್.ಕೆ. ಅಡ್ವಾಣಿಯವರಿಗೆ ಬರೆದ ಪತ್ರದ ಪ್ರತಿಯನ್ನು ಬಿಡುಗಡೆ ಮಾಡಿದ ದಿನೇಶ್ಗುಂಡೂರಾವ್, 2008ರಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕಿದ್ದರೆ ಹಣ ಎಲ್ಲಿಂದ ಬಂತು ಎಂದು ನೀವೇಕೆ ಕೇಳಲಿಲ್ಲ ಅಂತ ಅಡ್ವಾಣಿಯವರಿಗೆ ಲೆಹರ್ ಸಿಂಗ್ ಪ್ರಶ್ನಿಸಿದ್ದರು. ಅಡ್ವಾಣಿ ಯಾತ್ರೆಗಳಿಗೆ ಹಣ ಖರ್ಚು ಮಾಡಿರುವ ವಿಚಾರವನ್ನೂ ಆ ಪತ್ರದಲ್ಲಿ ಪ್ರಸ್ತಾಪಿಸಿರುವುದನ್ನು ದಿನೇಶ್ ಗುಂಡೂರಾವ್ ಹೇಳಿದರು.
ನಕಲಿ ದಾಖಲೆ: ಬಿಜೆಪಿ
ಆದರೆ, ಇವರು ಸುದ್ದಿಗೋಷ್ಟಿ ನಡೆಸುವ ಮುನ್ನವೇ ಅಂದರೆ ನಿನ್ನೆಯೇ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಾಯಕರ ಅವಹೇಳನ ಮಾಡುವ ಡೈರಿಯ ಪ್ರತಿ ಹಾಕಿರುವವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ದಾಖಲಿಸಿದ್ದಾರೆ.
ಈ ವಿವರ ಬಿಡುಗಡೆ ಮಾಡಿದ ಬಿಜೆಪಿ ವಕ್ತಾರ ಅಶ್ವತ್ಥ್ ನಾರಾಯಣ, 1000 ಕೋಟಿ ರೂಪಾಯಿಗಳ ಕಪ್ಪ ಪ್ರಕರಣದ ದಾಖಲೆ ಬಿಡುಗಡೆ ನಂತರ ಹತಾಶಗೊಂಡಿರುವ ಕಾಂಗ್ರೆಸ್, ನಕಲಿ ದಾಖಲೆ ಬಿಡುಗಡೆ ಮಾಡಿದೆ ಅಂತ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದ ಈ ಡೈರಿಯ ಪ್ರತಿಯಲ್ಲಿ ಅಮಿತ್ ಷಾ, ನರೇಂದ್ರ ಮೋದಿ, ಮುರುಳಿಧರರಾವ್, ಯಡಿಯೂರಪ್ಪ ಅವರನ್ನು ಸೂಚಿಸುವಂತಹ ಇನಿಶಿಯಲ್’ಗಳನ್ನು ಹಾಕಲಾಗಿದೆ. ಆದರೆ 2013ರಲ್ಲಿ ಅಮಿತ್ ಷಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಆಗಿರಲಿಲ್ಲ, ಮೋದಿ ಪ್ರಧಾನಿಯೂ ಆಗಿರಲಿಲ್ಲ, ಯಡಿಯೂರಪ್ಪ ಹಾಗೂ ಲೆಹರ್ಸಿಂಗ್ ಬಿಜೆಪಿಯಲ್ಲೇ ಇರಲಿಲ್ಲ. ಮುರುಳೀಧರರಾವ್ ರಾಜ್ಯ ಬಿಜೆಪಿಯ ಉಸ್ತುವಾರಿಯೂ ಆಗಿರಲಿಲ್ಲ ಅಂತ ಅಶ್ವತ್ಥ್ ನಾರಾಯಣ ಸ್ಪಷ್ಟನೆ ನೀಡಿದ್ದಾರೆ. ಒಟ್ಟಾರೆ, ಡೈರಿ ಬಹಿರಂಗ ಪ್ರಕರಣ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಪರಸ್ಪರ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಭಾರೀ ಗ್ರಾಸ ಒದಗಿಸಿದ್ದು, ಇದು ಇಷ್ಟಕ್ಕೇ ನಿಲ್ಲುವ ಲಕ್ಷಣಗಳಿಲ್ಲ.
ವರದಿ: ವೀರೇಂದ್ರ ಉಪ್ಪುಂದ., ಪೊಲಿಟಿಕಲ್ ಬ್ಯೂರೋ
