ಕಾಂಗ್ರೆಸ್ ಈಗಾಗಲೇ ಆರಂಭಿಸಿರುವ ಮನೆ ಮನೆಗೆ ಕಾಂಗ್ರೆಸ್ ಎಂಬ ಅಭಿಯಾನದ ಎರಡನೇ ಹಂತವಾಗಲಿರುವ ಜನ ಆಶೀರ್ವಾದ ರ್ಯಾಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿತ್ಯ ಜಿಲ್ಲೆಯೊಂದರಲ್ಲಿ 3 ಬಹಿರಂಗ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರು(ನ.03): ಬಿಜೆಪಿಯ ಪರಿವರ್ತನಾ ರ್ಯಾಲಿಗೆ ಚಾಲನೆ ದೊರೆತ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ತಾವು ಡಿಸೆಂಬರ್ 15ರಿಂದ ನಡೆಸಲಿರುವ ಒಂದು ತಿಂಗಳ ಅವಧಿಯ ರ್ಯಾಲಿಗೆ ಹೆಸರು ಅಂತಿಮಗೊಳಿಸಿದ್ದಾರೆ. ಅದು- ಜನ ಆಶೀರ್ವಾದ ರ್ಯಾಲಿ. ಬಿಜೆಪಿ ತನ್ನ ಅಧ್ಯಕ್ಷ ಅಮಿತ್ ಶಾ ಅವರಿಂದ ಪರಿವರ್ತನಾ ರ್ಯಾಲಿಗೆ ಉದ್ಘಾಟನೆ ಕೊಡಿಸಿದರೆ ಜನ ಆಶೀರ್ವಾದ ರ್ಯಾಲಿ ಉದ್ಘಾಟನೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕರೆಸುವ ಚಿಂತನೆಯಿದೆ.

ಕಾಂಗ್ರೆಸ್ ಈಗಾಗಲೇ ಆರಂಭಿಸಿರುವ ಮನೆ ಮನೆಗೆ ಕಾಂಗ್ರೆಸ್ ಎಂಬ ಅಭಿಯಾನದ ಎರಡನೇ ಹಂತವಾಗಲಿರುವ ಜನ ಆಶೀರ್ವಾದ ರ್ಯಾಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿತ್ಯ ಜಿಲ್ಲೆಯೊಂದರಲ್ಲಿ 3 ಬಹಿರಂಗ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನಿರಂತರ ಒಂದು ತಿಂಗಳು ನಡೆಯುವ ಈ ರ್ಯಾಲಿಯು ಚಾಮರಾಜನಗರದಿಂದ ಬೀದರ್‌'ವರೆಗೂ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ತಲುಪಲಿದೆ. ಈ ರ್ಯಾಲಿಗೆ ಏನು ಹೆಸರಿಡಬೇಕು ಎಂಬ ಬಗ್ಗೆ ಸಿಎಂ ಆಪ್ತರು ಚಿಂತನೆ ನಡೆಸಿ ಹಲವು ಹೆಸರುಗಳನ್ನು ಸೂಚಿಸಿದ್ದರು. ಮತ್ತೆ ಜನರ ಆಶೀರ್ವಾದ ಕೇಳಲು ಹೋಗಲಿರುವ ಕಾರಣ ಜನಾಶೀರ್ವಾದ ರ್ಯಾಲಿ ಎಂಬ ಹೆಸರು ಅಂತಿಮವಾಗಿದೆ ಎಂದು ಮೂಲಗಳು ತಿಳಿಸಿವೆ.

ರ್ಯಾಲಿಯ ಉಳಿದ ರೂಪುರೇಷೆಗಳು ಸಿದ್ಧಗೊಂಡಿಲ್ಲ. ರ್ಯಾಲಿಯನ್ನು ಯಾವ ರೀತಿ ಮಾಡಬೇಕು? ಪ್ರತಿಪಕ್ಷಗಳ ರೀತಿ ಬಸ್ ಅಥವಾ ವಿಶೇಷ ವಾಹನ ಸಿದ್ಧಪಡಿಸಿಕೊಳ್ಳಬೇಕೇ? ಜನರನ್ನು ನೇರವಾಗಿ ತಲುಪಲು ಸಾಮಾನ್ಯ ವಾಹನಗಳಲ್ಲಿ ಸಂಚರಿಸಬೇಕೇ ಎಂಬಿತ್ಯಾದಿ ಯಾವ ಅಂಶವೂ ಅಂತಿಮಗೊಂಡಿಲ್ಲ. ಆದರೆ, ಟೆಂಪೋದಲ್ಲೇ ಈ ಯಾತ್ರೆ ನಡೆಸಿದರೆ ಜನರಿಗೆ ಹತ್ತಿರವಾಗಬಹುದು ಎಂಬ ಚಿಂತನೆಯಿದೆ ಎಂದು ಮೂಲಗಳು ತಿಳಿಸಿವೆ.