ನಿರ್ಮಲಾ ಓಲಾ, ಉಬರ್ ಹೇಳಿಕೆಗೆ ಕಾಂಗ್ರೆಸ್ ವ್ಯಂಗ್ಯ!
ನಿರ್ಮಲಾ ಓಲಾ, ಉಬರ್ ಹೇಳಿಕೆಗೆ ಕಾಂಗ್ರೆಸ್ ವ್ಯಂಗ್ಯ| ಎಲ್ಲರನ್ನೂ ದೂಷಿಸಿ ಆದರೆ, ಬಿಜೆಪಿಯ ಆರ್ಥಿಕ ನಿರ್ವಹಣೆಯನ್ನಲ್ಲ
ನವದೆಹಲಿ[ಸೆ.12]: ಜನರು ಕಾರು ಖರೀದಿಸುವ ಬದಲು ಓಲಾ, ಉಬರ್‌ನಲ್ಲಿ ಓಡಾಡುತ್ತಿದ್ದಾರೆ. ಹೊಸ ತಲೆಮಾರಿನ ಜನರ ಮನಸ್ಥಿತಿಯಿಂದಾಗಿ ವಾಹನ ಮಾರಾಟದಲ್ಲಿ ಇಳಿಕೆಯಾಗಿದೆ ಎಂಬ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಕಾಂಗ್ರೆಸ್ ಬುಧವಾರ ವ್ಯಂಗ್ಯವಾಡಿದೆ.
ಸೀತಾರಾಮನ್ ಹೇಳಿಕೆಗೆ ಟಾಂಗ್ ನೀಡಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಗ್ವಿ, ‘ಹೌದು ಅದು ಅದ್ಭುತವಾಗಿದೆ. ಮತದಾರರನ್ನು ದೂಷಿಸಿ... ಎಲ್ಲರನ್ನೂ ದೂಷಿಸಿ. ಆದರೆ, ಬಿಜೆಪಿಯ ಹಣಕಾಸು ಸಚಿವರ ಆರ್ಥಿಕ ನಿರ್ವಹಣೆಯನ್ನಲ್ಲ ಎಂದು ಹೇಳಿದ್ದಾರೆ.
ಮೋದಿ ಅವರ ಟ್ವೀಟರ್ ಕಾತೆ 5 ಕೋಟಿ ಹಿಂಬಾಲಕರನ್ನು ದಾಟಿದೆ. ಆರ್ಥಿಕತೆ 5 ಟ್ರಿಲಿಯನ್ ಆರ್ಥಿಕತೆಯನ್ನು ಮುಟ್ಟಲಿದೆ. ಆದರೆ, ಹೇಗೆ ಯುವಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ನೀವು ಪ್ರತಿಪಕ್ಷಗಳು ಕೂಡ ಕಾರಣ ಎಂದು ಹೇಳಬಹುದು. ಓಲಾ, ಊಬರ್ ಎಲ್ಲವನ್ನೂ ಹಾಳು ಮಾಡಿದೆ ಅಲ್ಲವೇ?
ಯಾವುದೇ ಒಳ್ಳೆಯದು ಆದರೆ ಅದು ನಮ್ಮಿಂದ (ಮೋದಿನೋಮಿಕ್ಸ್), ಏನಾದರೂ ಕೆಟ್ಟದ್ದು ಆಗಿದ್ದರೆ, ಅದನ್ನು ಮಾಡಿದ್ದು ಬೇರೆಯವರು (ನಿರ್ಮಲಾನೋಮಿಕ್ಸ್). ಹಾಗಿದ್ದರೆ ಜನರು ಯಾಕೆ ನಿಮ್ಮನ್ನು ಆಯ್ಕೆ ಮಾಡಿದ್ದಾರೆ? (ಪಬ್ಲಿಕೊನಾಮಿಕ್ಸ್) ಎಂದು ಸಿಂಗ್ವಿ ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ನಿರ್ಮಲಾ ಹೇಳಿಕೆಯನ್ನು ಟೀಕಿಸಿರುವ ಕಾಂಗ್ರೆಸ್ ಪಕ್ಷ, ಬಸ್ ಮತ್ತು ಟ್ರಕ್ ಮಾರಾಟ ಕುಸಿತಕ್ಕೂ ಜನರ ಮನಸ್ಥಿತಿ ಬದಲಾವಣೆ ಕಾರಣವೇ ಎಂದು ಪ್ರಶ್ನಿಸಿದೆ.