ನವದೆಹಲಿ[ಜೂ.17]: ‘ಕಾಂಗ್ರೆಸ್‌ಗೆ ಮಹತ್ವದ ಸರ್ಜರಿಯೊಂದು ಆಗಬೇಕಿದೆ. ಪಕ್ಷದ ಎಲ್ಲಾ ಹಂತವನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ರಾಹುಲ್‌ ಗಾಂಧಿ ಅವರಲ್ಲಿದೆ. ಅವರೇ ಖುದ್ದಾಗಿ ಪಕ್ಷ ನಿಯಂತ್ರಿಸುವ ಅಧಿಕಾರವನ್ನು ಹೊಂದಿರಬೇಕು’’ ಎಂದು ಕಾಂಗ್ರೆಸ್‌ನ ಹಿಡಿಯ ಮುಖಂಡ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಆದ ಮುಖಭಂಗದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಹುಲ್‌ ಗಾಂಧಿ ಅವರೇ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕೆಂದು ಪ್ರತಿಪಾದಿಸಿರುವ ವೀರಪ್ಪ ಮೊಯ್ಲಿ ಅವರು, ಕಾಂಗ್ರೆಸ್‌ ರಾಜ್ಯ ಘಟಕಗಳನ್ನು ಮುನ್ನಡೆಸುತ್ತಿರುವ ರೀತಿ ಕೆಟ್ಟದಾಗಿದೆ. ಇದರ ಪರಿಣಾಮ ಪಕ್ಷದ ಮೇಲೆ ಆಗುತ್ತಿದೆ. ಇವೆಲ್ಲವೂ ದಾಖಲಾಗುವ ರೀತಿಯಲ್ಲಿ ಪಕ್ಷವನ್ನು ಬಲವರ್ಧನೆಗೊಳಿಸುವ ಕೆಲಸ ಆಗಬೇಕಿದೆ ಎಂದಿದ್ದಾರೆ.

ಪಕ್ಷದ ಮುಂದಿನ ಅಧ್ಯಕ್ಷರು ಯಾರೆಂದು ಯೋಚಿಸುವ ಸಮಯ ಇದಲ್ಲ. ಇದಕ್ಕಾಗಿ ಸಮಯ ವ್ಯರ್ಥಮಾಡುವುದರಲ್ಲಿ ಅರ್ಥವಿಲ್ಲ. ರಾಜ್ಯಗಳಲ್ಲಿ ಪಕ್ಷ ಮುನ್ನಡೆಸುವ ಸಮರ್ಥ ಅಭ್ಯರ್ಥಿಗಳನ್ನು ಬದಲಾಯಿಸುವಲ್ಲಿ ಅವರು ಗಮನ ಹರಿಸಬೇಕು. ಸಮರ್ಥರನ್ನು ಹುಡುಕಿ ನೇಮಕ ಮಾಡಬೇಕು ಎಂದು ಕಾಂಗ್ರೆಸ್‌ನ ಅನುಭವಿ ಮುಖಂಡ ಮೊಯ್ಲಿ ಹೇಳಿದ್ದಾರೆ.