ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ಈಗ ಭಾರತ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಜಪಾನ್ ಪ್ರಧಾನಿ ಶಿಂಜೋ ಅಬೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲಾದವರನ್ನು ಅಪ್ಪಿಕೊಳ್ಳುತ್ತಿರುವ ದೃಶ್ಯಗಳನ್ನು ಹಾಕಿ ವ್ಯಂಗ್ಯ ಮಾಡಲಾಗಿದೆ
ನವದೆಹಲಿ(ಜ.15): ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಅವರ ‘ಅಪ್ಪುಗೆ ರಾಜತಾಂತ್ರಿಕತೆ‘ (ಹಗ್'ಪ್ಲೋಮೆಸಿ) ಬಗ್ಗೆ ವ್ಯಂಗ್ಯ ಮಾಡಿ ಭಾನುವಾರ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೇವೇಳೆ ಬಿಜೆಪಿ ಕೆಂಗಣ್ಣಿಗೆ ಕಾರಣವಾಗಿದೆ.
ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ಈಗ ಭಾರತ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಜಪಾನ್ ಪ್ರಧಾನಿ ಶಿಂಜೋ ಅಬೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲಾದವರನ್ನು ಅಪ್ಪಿಕೊಳ್ಳುತ್ತಿರುವ ದೃಶ್ಯಗಳನ್ನು ಹಾಕಿ ವ್ಯಂಗ್ಯ ಮಾಡಲಾಗಿದೆ. ಇನ್ನೊಂದೆಡೆ ಜರ್ಮನಿಯ ಚಾನ್ಸಲರ್ ಏಜೆಂಲಾ ಮರ್ಕೆಲ್ ಹಾಗೂ ಜಪಾನ್'ನ ಪ್ರಧಾನಿಯವರ ಪತ್ನಿ ಅಕೀ ಅಬೆ ಅವರನ್ನು ಮೋದಿ ಭೇಟಿಯಾಗುವ ವೇಳೆ ಉಂಟಾದ ಕೆಲವು ಮುಜುಗರದ ಸನ್ನಿವೇಶದ ದೃಶ್ಯಗಳನ್ನೂ ವಿಡಿಯೋದಲ್ಲಿ ಸೇರಿಸಲಾಗಿದೆ.
ಕಾಂಗ್ರೆಸ್‌ನ ಈ ವಿಡಿಯೋ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ‘ಪ್ರಧಾನಿಯವರ ಭೇಟಿಗಳ ಬಗ್ಗೆ ಈ ರೀತಿ ಅಶ್ಲೀಲವಾಗಿ ಬಿಂಬಿಸುವುದು ಸರಿಯಲ್ಲ’ ಎಂದು ಪಕ್ಷದ ವಕ್ತಾರ ನಳಿನ್ ಕೊಹ್ಲಿ ಟೀಕಿಸಿದ್ದಾರೆ.
ಕಾಂಗ್ರೆಸ್ ಮೋದಿ ಅಪ್ಪುಗೆಯ ವ್ಯಂಗ್ಯ ಟ್ವೀಟ್'ಗೆ ತಿರುಗೇಟು ನೀಡಿರುವ ಸಂಸದ ಪ್ರತಾಪ್ ಸಿಂಹ ದೇಶದ ಮೊದಲ ಪ್ರಧಾನಿ ಜವಹರ್ ಲಾಲ್ ನೆಹರು ಅನೇಕ ಮಹಿಳೆಯರನ್ನು ಅಪ್ಪಿಕೊಂಡಿರು ಭಾವಚಿತ್ರಗಳನ್ನು ಶೇರ್ ಮಾಡಿದ್ದು, ಇವು ಕಾಂಗ್ರೆಸ್ಸಿಗರಿಗೆ ಕಾಣುವುದಿಲ್ಲವೇ ಎಂದು ಟ್ವೀಟ್ ಮಾಡಿದ್ದಾರೆ.
