ಕಲಬುರಗಿ (ಮಾ. 04):  ತಮಗೆ ಸಚಿವ ಸ್ಥಾನ ನೀಡದೆ ಪಕ್ಷದಲ್ಲಿ ನಿರ್ಲಕ್ಷಿಸಲಾಗುತ್ತಿದೆ ಎಂದು ಅಸಮಾಧಾನಗೊಂಡಿರುವ ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ್‌ ಕಾಂಗ್ರೆಸ್‌ ಪಕ್ಷದಿಂದ ಹೊರಬಂದು ಬಿಜೆಪಿಗೆ ಸೇರ್ಪಡೆಯಾಗುವುದು ಖಚಿತವಾಗಿದೆ.

ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಅವರು ಮಾ.6 ರಂದು ಕಲಬುರಗಿಯಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶದಲ್ಲಿ ಅವರು ಮೋದಿ ಸಮ್ಮುಖದಲ್ಲೇ ಬಿಜೆಪಿ ಸೇರಲಿದ್ದಾರೆ ಎಂದು ಆಪ್ತಮೂಲಗಳು ತಿಳಿಸಿವೆ.

ಸದ್ಯ ಬೆಂಗಳೂರಿನಲ್ಲಿರುವ ಡಾ.ಜಾಧವ್‌, ತಾವು ರಾಜೀನಾಮೆ ನೀಡುವುದರಿಂದ ಉಂಟಾಗುವ ಕಾನೂನು ತೊಡಕುಗಳು, ಬೆಳವಣಿಗೆಗಳ ಬಗ್ಗೆ ನ್ಯಾಯವಾದಿಗಳ ಸಲಹೆ, ಸೂಚನೆ ಪಡೆದೇ ರಾಜೀನಾಮೆ ನಿರ್ಣಯಕ್ಕೆ ಬಂದಿದ್ದಾರೆ. ಈ ಪ್ರಕಾರ ಮಾ.4ರ ಸೋಮವಾರದಂದು ಸ್ಪೀಕರ್‌ ರಮೇಶ ಕುಮಾರ್‌ ಅವರನ್ನು ಖುದ್ದು ಭೇಟಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ.

ಬಳಿಕ ಮಾ.6ರಂದು ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನದ ಸಮಾರಂಭದ ವೇದಿಕೆಯಲ್ಲಿಯೇ ಕಮಲ ಪಕ್ಷ ಹಿಡಿಯುವ ಯೋಜನೆ ರೂಪಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಜಾಧವ್‌ ಅವರನ್ನು ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಅವರ ಎದುರು ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಬಿಜೆಪಿ ಉದ್ದೇಶಿಸಿದೆ.