ರಾಜೀನಾಮೆ ನೀಡಿದ್ದೇಕೆ? ಡಾ. ಸುಧಾಕರ್ ಕೊಟ್ಟ ಕಾರಣ ಇಲ್ಲಿದೆ!
ವಿಧಾನಸೌಧದಲ್ಲಿ ನಡೆದ ಘಟನೆಗೆ ಕ್ಷಮೆ ಕೋರುವೆ| ಸಮ್ಮಿಶ್ರ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯವಾಗಲಿಲ್ಲ| ಜನರ ನಿರೀಕ್ಷೆ ತಲುಪಲಾಗದ್ದಕ್ಕೆ ರಾಜೀನಾಮೆ: ಸುಧಾಕರ್
ಬೆಂಗಳೂರು[ಜು.11]: ಕ್ಷೇತ್ರದ ಜನತೆಗೆ ನೀಡಿದ ಭರವಸೆ ಈಡೇರಿಸಲು ಸಾಧ್ಯವಾಗಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡುವಲ್ಲಿ ವಿಫಲನಾಗಿದ್ದೆ. ಈ ಹಿನ್ನೆಲೆಯಲ್ಲಿ ಸ್ವ ಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಜತೆಗೆ, ವಿಧಾನಸೌಧದಲ್ಲಿ ತಮ್ಮನ್ನು ಎಳೆದಾಡಿದ ಪ್ರಸಂಗದ ಬಗ್ಗೆಯೂ ತೀವ್ರ ಬೇಸರ ವ್ಯಕ್ತಪಡಿಸಿದ್ದು, ವಿಧಾನಸೌಧದಲ್ಲಿ ಸ್ಪೀಕರ್‌ಗೆ ರಾಜೀನಾಮೆ ಕೊಟ್ಟು ಬರುವಾಗ ನಡೆದ ಘರ್ಷಣೆಗೆ ಜನರ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ.
ರಾಜೀನಾಮೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದ ಘಟನೆಯಲ್ಲಿ ಎರಡ್ಮೂರು ಬಾರಿ ಎಂಎಲ್ಸಿ ಆಗಿದ್ದವರು, ಮಂತ್ರಿಗಳಾಗಿದ್ದವರು ನಡೆದುಕೊಂಡ ರೀತಿಯನ್ನು ಇಡೀ ದೇಶ ನೋಡಿದೆ. ಇದು ಅತ್ಯಂತ ಅಮಾನವೀಯ ಮತ್ತು ಪ್ರಜಾಪ್ರಭುತ್ವ ವಿರೋಧಿ ಧೋರಣೆ. ನಾನೇನು ಶಾಲೆಗೆ ಹೋಗುವ ಮಗುವಲ್ಲ. ಮಾತುಕತೆಗೆ ಬನ್ನಿ ಎಂದು ಕರೆದಿದ್ದರೆ ಹೋಗುತ್ತಿದ್ದೆ. ಈ ಘಟನೆಯಿಂದ ನನ್ನ ಪತ್ನಿ ಮತ್ತು ಮಗ ಆತಂಕಗೊಂಡಿದ್ದರು ಎಂದು ಸುಧಾಕರ್ ಹೇಳಿದರು.
ಆತ್ಮಸಾಕ್ಷಿಯಂತೆ ರಾಜೀನಾಮೆ:
ಮೈತ್ರಿ ಸರ್ಕಾರದಲ್ಲಿ ಕ್ಷೇತ್ರದ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಆತ್ಮಸಾಕ್ಷಿ ನುಡಿದಂತೆ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ಅವರಿಗೆ ಮನವಿ ಮಾಡಿದ್ದೇನೆ. ಜುಲೈ 17ರಂದು ಮಧ್ಯಾಹ್ನ ಭೇಟಿಯಾಗಲು ಸ್ಪೀಕರ್ ಅವಕಾಶ ಕೊಟ್ಟಿದ್ದಾರೆ. ಯಾವುದೇ ಬಲವಂತದಿಂದ ರಾಜೀನಾಮೆ ನೀಡಿಲ್ಲ. ಜನರ ಭಾವನೆಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗದ ಕಾರಣ ಶಾಸಕನಾಗಿ ಮುಂದುವರೆಯಲು ಮನಸ್ಸಿಲ್ಲದೆ ರಾಜೀನಾಮೆ ಕೊಟ್ಟಿದ್ದೇನೆ ಎಂದರು.
ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸಮ್ಮಿಶ್ರ ಸರ್ಕಾರದಿಂದ ರಾಜ್ಯದಲ್ಲಿ ಅಸ್ಥಿರತೆ ಇದೆ. ಜನರು ಇಂತಹ ಪರಿಸ್ಥಿತಿಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ರಾಜಕೀಯ ಅನಿಶ್ಚತೆಯಿಂದ ಜನರು ನಮ್ಮನ್ನು ಶಪಿಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಜನರು ತಿರಸ್ಕರಿಸಿದ್ದಾರೆ. ಪ್ರಸ್ತುತ ವಸ್ತುಸ್ಥಿತಿ ಅರ್ಥ ಮಾಡಿಕೊಂಡಾಗ ಮಾತ್ರ ಜನಪ್ರತಿನಿಧಿಯಾಗಲು ಸಾಧ್ಯ. ಜನರ ಮೇಲಿನ ಬದ್ಧತೆಯಿಂದಲೇ ಸಮ್ಮಿಶ್ರ ಸರ್ಕಾರದಲ್ಲಿ ಇರಬಾರದು ಎಂದು ‘ಆತ್ಮಾಹುತಿ’ ಮಾಡಿಕೊಂಡು ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದರು.
ಸಿದ್ದರಾಮಯ್ಯ ನನ್ನ ಆದರ್ಶ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಆದರ್ಶ ವ್ಯಕ್ತಿ. ಅವರಿಂದ ನಾನು ಸಾಕಷ್ಟುಕಲಿತಿದ್ದೇನೆ. ಸಿದ್ದರಾಮಯ್ಯ ನಮ್ಮ ನಾಯಕರಾಗಿದ್ದು, ವಿಶ್ವಾಸದಿಂದ ನೋಡಿಕೊಂಡಿದ್ದಾರೆ. ರಾಜೀನಾಮೆ ನೀಡಿದ ಬಳಿಕ ಅವರು ನನ್ನ ಮನಸ್ಸು ಪರಿವರ್ತಿಸಲು ಯತ್ನಿಸಿದ್ದರು. ಹಲವು ವಿಷಯಗಳ ಕುರಿತು ಚರ್ಚಿಸಿದರು. ನಾನು ಕೂಡ ರಾಜೀನಾಮೆ ಏಕೆ ನೀಡಿದ್ದೇನೆ ಎಂಬ ಕಾರಣವನ್ನು ತಿಳಿಸಿದ್ದೇನೆ. ಅನಿವಾರ್ಯವಾಗಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷದ ಬಗ್ಗೆ ಎಂಟಿಬಿ ನಾಗರಾಜ್ ಮತ್ತು ನನಗೆ ಎಂದೂ ನೋವಾಗಿಲ್ಲ. ನಾವು ಅತ್ಯಂತ ಪ್ರಾಮಾಣಿಕವಾಗಿ ಪಕ್ಷಕ್ಕೆ ನಡೆದುಕೊಂಡಿದ್ದೇವೆ. ಅತ್ಯಂತ ಗೌರವಯುತವಾಗಿ ಕಾಂಗ್ರೆಸ್ ನಮ್ಮನ್ನು ನೋಡಿಕೊಂಡಿದೆ. ಈಗಾಗಲೇ ರಾಜೀನಾಮೆಗೆ ಕಾರಣ ತಿಳಿಸಿದ್ದೇನೆ. ಮುಂಬೈಗಾಗಲಿ ಅಥವಾ ದೆಹಲಿಗಾಗಲಿ ನಾವು ಹೋಗುವುದಿಲ್ಲ ಎಂದು ಹೇಳಿದರು.
ಮೈತ್ರಿಯಿಂದ ಬೇಸರವಾಗಿತ್ತು: ಎಂಟಿಬಿ
ಸಚಿವ ಎಂ.ಟಿ.ಬಿ. ನಾಗರಾಜ್ ಮಾತನಾಡಿ, ಸಮಯ ಸಂದರ್ಭಕ್ಕೆ ಅನುಗುಣವಾಗಿ ರಾಜೀನಾಮೆ ಕೊಡಬೇಕಾಯಿತು. ಮೈತ್ರಿ ಸರ್ಕಾರದ ಆಡಳಿತದಿಂದ ಬಹಳ ಬೇಸರವಾಗಿತ್ತು. ಕಾಂಗ್ರೆಸ್ ಕಾರ್ಯಕರ್ತನಾಗಿ ಕಳೆದ 40 ವರ್ಷದಿಂದ ಕೆಲಸ ಮಾಡಿದ್ದೇನೆ. ಹುಟ್ಟಿದ್ದು-ಬೆಳೆದಿದ್ದು ಕಾಂಗ್ರೆಸ್, ಮನೆಯೂ ಕಾಂಗ್ರೆಸ್ ಆಗಿದೆ. ಈ ಮೈತ್ರಿ ಸರ್ಕಾರದ ದೆಸೆಯಿಂದ ರಾಜೀನಾಮೆ ಕೊಟ್ಟಿದ್ದು, ಮನಸ್ಸಿಗೆ ನೋವಾಗಿದೆ. ಪ್ರಸ್ತುತ ಉಸಿರುಗಟ್ಟಿದ ವಾತಾವರಣದಲ್ಲಿ ಕೆಲಸ ಮಾಡಲಾಗದೆ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಮುಂದಿನ ರಾಜಕೀಯ ನಡೆಯ ಬಗ್ಗೆ ಎರಡ್ಮೂರು ದಿನಗಳಲ್ಲಿ ತೀರ್ಮಾನಿಸುವುದಾಗಿ ತಿಳಿಸಿದರು.