ಬೆಂಗಳೂರು [ಜೂ.21] :  ದಿಢೀರ್ ಬೆಳವಣಿಗೆಯೊಂದರಲ್ಲಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸಿ. ಜಯರಾಂ ಅವರು ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಾದ ಬೆನ್ನಲ್ಲೇ ಆ ಸ್ಥಾನಕ್ಕೆ ಕಾಂಗ್ರೆಸ್ ಶಾಸಕ ಡಾ. ಕೆ. ಸುಧಾಕರ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಆದೇಶ ಹೊರ ಬಿದ್ದ ಕೆಲವೇ ಗಂಟೆಗಳಲ್ಲಿ ಡಾ. ಸುಧಾಕರ್ ಅವರು ಮಾಲಿನ್ಯ ನಿಯಂತ್ರಣ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಕಾರ್ಯ ನಿರ್ವಹಣೆ ಆರಂಭಿಸಿದ್ದಾರೆ. ತನ್ಮೂಲಕ ಮೈತ್ರಿ ಸರ್ಕಾರದ ಪ್ರಮುಖ ಕೊಂಡಿಗಳಾದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಪರೋಕ್ಷ ತಿಕ್ಕಾಟಕ್ಕೆ ಕಾರಣವಾಗಿದ್ದ ಈ ಪ್ರಮುಖ ಮಂಡಳಿಯ ನೇಮಕಾತಿ ವಿಚಾರವೂ ಸಿದ್ದರಾಮಯ್ಯ ಬಯಕೆಯಂತೆಯೇ ಕಡೆಗೂ ಇತ್ಯರ್ಥಗೊಂಡಿದೆ. 

ವಿಳಂಬವಾದರೂ ತಮ್ಮ ಆಪ್ತ ಸುಧಾಕರ್‌ಗೆ ಮಹತ್ವದ ಹುದ್ದೆಯನ್ನು ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾದಂತೆ ಆಗಿದೆ. ಗುರುವಾರ ಬೆಳಗ್ಗೆ ಮಂಡಳಿಯ ಅಧ್ಯಕ್ಷರಾಗಿದ್ದ ಸಿ. ಜಯರಾಂ ಅವರು ಹುದ್ದೆಗೆ ರಾಜೀನಾಮೆ ನೀಡಿದರು. 

ರಾಜ್ಯ ಸರ್ಕಾರವು ಡಾ. ಕೆ. ಸುಧಾಕರ್ ಅವರನ್ನುಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿತು. ರಾಷ್ಟ್ರೀಯ ಜಲ ಕಾಯ್ದೆ 1974ರ ಸೆಕ್ಷನ್ 4(2)ರ ಅಡಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಲಿ ಅಧ್ಯಕ್ಷರ ಅವಧಿ ಮೂರು ವರ್ಷ. ಸಿ. ಜಯರಾಂ ಅವರ ರಾಜೀನಾಮೆ ಅಂಗೀಕರಿಸಿದ ನಂತರ ಬಾಕಿ ಉಳಿದಿರುವ ಅವಧಿಗೆ ಸುಧಾಕರ್ ಅವರನ್ನು ನೇಮಕ ಮಾಡಲಾಗಿದೆ. 

ಅಂದರೆ, ಗರಿಷ್ಠ 2022 ರ ಮಾರ್ಚ್ ೪ರವರೆಗೆ ಸುಧಾಕರ್ ಅವರ ಅಧಿಕಾರವಿರಲಿದ್ದು, ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ.