ಬೆಂಗಳೂರು: ಕಾಂಗ್ರೆಸ್ ಶಾಸಕರೂ ಆಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಅಧ್ಯಕ್ಷ ಎಸ್.ಟಿ.ಸೋಮಶೇಖರ್ ಅವರ ಅಸಮಾಧಾನದ ಮಾತುಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಿಡಿಎ ಆಯುಕ್ತರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಕೃಷ್ಣಾ ನದಿ ನೀರಿಗೆ ಸಂಬಂಧಿಸಿದಂತೆ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಅವರು ಭಾನುವಾರ ಬೆಳಗ್ಗೆ ಜೆ.ಪಿ.ನಗರದಲ್ಲಿರುವ ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡಿದ್ದರು. 

ಕೃಷ್ಣಾ ನದಿಯ ವಿಚಾರ ಮುಗಿದ ನಂತರ ಪ್ರಾಧಿಕಾರದ ಅಧ್ಯಕ್ಷ ಸೋಮಶೇಖರ್ ಅವರ ವಿಷಯವೂ ಪ್ರಸ್ತಾಪವಾಯಿತು ಎನ್ನಲಾಗಿದೆ. ಬಿಡಿಎ ಯಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ. ಆಯುಕ್ತರು ಸೇರಿದಂತೆ ಅಧಿಕಾರಿಗಳು ನನ್ನ ಮಾತು ಕೇಳುತ್ತಿಲ್ಲ. ನಾನು ಇಲ್ಲಿ ಡಮ್ಮಿಯಾಗಿದ್ದೇನೆ ಎಂದು ಸೋಮಶೇಖರ್ ಅವರು ಕೆಲ ದಿನಗಳ ಹಿಂದೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. 

ಈ ಕುರಿತಂತೆ ಮಾತುಕತೆ ವೇಳೆ ರಾಕೇಶ್ ಸಿಂಗ್ ಅವರು ಮುಖ್ಯಮಂತ್ರಿಗಳಿಗೆ ವಿವರಣೆ ನೀಡಿದ್ದಾರೆ. ಅಲ್ಲದೆ, ಬಿಡಿಎಯಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿ ಸಿದಂತೆಯೂ ಮುಖ್ಯಮಂತ್ರಿಗಳು ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಪ್ರಾಧಿಕಾರದ ಅಧ್ಯಕ್ಷ ಸೋಮಶೇಖರ್ ಅವರ ಇತ್ತೀಚಿನ ಆರೋಪಗಳ ಕುರಿತು ಚರ್ಚೆ ನಡೆದಿರುವುದನ್ನು ನಿರಾಕರಿಸಿರುವ ಆಯುಕ್ತ ರಾಕೇಶ್ ಸಿಂಗ್ ಅವರು, ಬಿಡಿಎ ಅಭಿವೃದ್ಧಿ ಕಾರ್ಯಗಳ ಬಗ್ಗೆ ಔಪಚಾರಿಕವಾಗಿ ಚರ್ಚೆ ನಡೆಯಿತು ಎಂದು ಮಾಹಿತಿ ನೀಡಿದ್ದಾರೆ.