ಬೆಂಗಳೂರು, [ಮೇ.21]: ಲೋಕಸಭೆ ಚುನಾವಣೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ –ಜೆಡಿಎಸ್ ಮೈತ್ರಿಕೂಟಕ್ಕೆ ಕಡಿಮೆ ಸ್ಥಾನ ಬರಲಿವೆ ಎಂದು ಹೇಳಲಾಗಿದ್ದು, ಕಾಂಗ್ರೆಸ್ ನಾಯಕರಲ್ಲಿ ಟೆನ್ಷನ್ ಶುರುವಾಗಿದೆ.

ಇದರ ನಡುವೆ ರೋಷನ್ ಬೇಗ್ ಸಿಡಿಸಿದ ಬಾಂಬ್ ಕೈ ಪಾಳಯವನ್ನು ತಳಮಳ ಸೃಷ್ಠಿಸಿದೆ.  ಸಿದ್ದರಾಮಯ್ಯ ದುರಹಂಕಾರಿ, ದಿನೇಶ್ ಫ್ಲಾಪ್​ ಶೋ ಎಂದು ಸ್ವಪಕ್ಷದ ನಾಯಕರ ವಿರುದ್ಧ ಶಿವಜಿನಗರ ಕಾಂಗ್ರೆಸ್ ಶಾಸಕ ಬಹಿರಂಗವಾಗಿ ಗುಡುಗಿದ್ದು,  ಕೈ ಪಾಳಯವನ್ನು ಇನ್ನಿಲ್ಲದಂತೆ ಕಂಗಾಲಾಗಿಸಿದೆ.  

ಕಾಂಗ್ರೆಸ್ ನಾಯಕರ ವಿರುದ್ಧ ಬೇಗ್ ರೊಚ್ಚಿಗೆದ್ದಿದ್ದೇಕೆ?: ಕಾರಣ ಬಿಚ್ಚಿಟ್ಟ ಬಿಜೆಪಿ ಶಾಸಕ

ಶೋಕಾಸ್ ನೋಟಿಸ್ ನೀಡಿದ್ರೂ ಡೋಂಟ್ ಕೇರ್ 


ಹೌದು....ಕಾಂಗ್ರೆಸ್ ನಾಯಕರ ವಿರುದ್ಧ ಹೇಳಿಕೆ ನೀಡಿರುವ ರೋಷನ್ ಬೇಗ್ ಗೆ ಕಾರಣ ಕೇಳಿ ಕೆಪಿಸಿಸಿಯಿಂದ ಶೋಕಾಸ್ ನೋಟಿಸ್ ನೀಡಲಾಗಿದೆ. ಆದ್ರೆ, ಇದ್ಯಾವುದಕ್ಕೂ ಕೇರ್ ಮಾಡದ ಬೇಗ್, ನನಗೆ ನೋಟಿಸ್ ಬಂದಿದೆ. ನಾನು ಅದನ್ನು ಓದಕ್ಕೆ ಹೋಗಲ್ಲ. ಯಾಕೆಂದ್ರೆ, ಯಾವ ನಾಯಕರ ಅಸಮರ್ಥತೆ ಬಗ್ಗೆ ಮಾತನಾಡಿದ್ನೋ ಅವರ ಮಾರ್ಗದರ್ಶನದಲ್ಲಿ ಈ ನೋಟಿಸ್​ ನೀಡಲಾಗಿದೆ ಎಂದು ಮತ್ತೆ ಕಾಂಗ್ರೆಸ್ ನಾಯಕರ ವಿರುದ್ಧ ಜರಿದಿದ್ದಾರೆ.

ನಮ್ಮ ರಾಜ್ಯದ ಕೈ ಮುಖಂಡರಿಗೆ ಸೊಕ್ಕು ಜಾಸ್ತಿನೇ ಇದೆ. ವಿರೋಧ ಪಕ್ಷದವರು ಕುದುರೆ ವ್ಯಾಪಾರಕ್ಕೆ ಇಳಿದಿದ್ದಾರೆ ಎಂದು ಆರೋಪಿಸೋ ನಮ್ಮ ನಾಯಕರು, ಸಚಿವ ಸ್ಥಾನಗಳನ್ನು ಅತೀ ಹೆಚ್ಚು ಬೆಲೆಗೆ ಮಾರಿಕೊಂಡಿದ್ದರ ಬಗ್ಗೆ ಮಾತನಾಡ್ತಿಲ್ಲ ಎಂದು ಟ್ವೀಟ್ ಮೂಲಕವೇ ಕಾಂಗ್ರೆಸ್ ನಾಯಕರನ್ನು ಜಾಡಿಸಿದ್ದಾರೆ.

ಡಿಕೆ ಶಿವಕುಮಾರ್, ಎಂ.ಬಿ ಪಾಟೀಲ್, ಕೆ.ಜೆ ಜಾರ್ಜ್ ಕಾಂಗ್ರೆಸ್​ನ ATM


ಇಷ್ಟಕ್ಕೆ ಸುಮ್ಮನಾಗದ ರೋಷನ್ ಬೇಗ್,  ಡಿಕೆ ಶಿವಕುಮಾರ್, ಎಂ.ಬಿ ಪಾಟೀಲ್ ಹಾಗೂ ಕೆ.ಜೆ ಜಾರ್ಜ್ ಅಭಿನಂದನೆಗೆ ಅರ್ಹರು. ಇವರು ಬಹು ಕಾಲದಿಂದ ತಮ್ಮ ಸ್ವಂತ ಶಕ್ತಿ ಮೇಲೆ ಇನ್ನೂ ಪಕ್ಷಕ್ಕಾಗಿ ಕೆಲಸ ಮಾಡ್ತಿದ್ದಾರೆ. ಆದ್ರೆ ನಾನು ಮಾತಾಡಿದ್ದು ಪಕ್ಷವನ್ನ ದುರಾಡಳಿತದಿಂದ ಹಾಳುಗೆಡವುತ್ತಿರೋ ನಾಯಕರ ಕುರಿತು. ಈ ದುರಾಡಳಿತದ ನಡೆಸುತ್ತಿರೋ ನಾಯಕರು ಪಕ್ಷದ ಮುಖಂಡರನ್ನ ಎಟಿಎಂ ಹಾಗೇ ಬಳಸಿಕೊಳ್ತಿದ್ದಾರೆ ಅಂತಾ ರೋಷನ್​ ಬೇಗ್​ ಟ್ವೀಟ್​ ಮಾಡಿದ್ದಾರೆ.

ಪುತ್ರನಿಂದಲೂ ಕಾಂಗ್ರೆಸ್ ವಿರುದ್ಧ ಅಸಮಾಧಾನ

ರೋಷನ್ ಬೇಗ್ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಅವರ ಪುತ್ರ ರುಮಾನ್ ಬೇಗ್ ಕೂಡಾ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ ನಾಯಕತ್ವದಲ್ಲಿ ಅಲ್ಪಸಂಖ್ಯಾತರು ಕೇವಲ ವೋಟ್ ಬ್ಯಾಂಕ್ ಆಗಿದ್ದಾರೆ. ಅಲ್ಪಸಂಖ್ಯಾತರ ನಡುವೆ ಕಾಂಗ್ರೆಸ್ ಭಯದ ಮನೋವಿಕಾರವನ್ನು ಸೃಷ್ಟಿಸಿದೆ ಎಂದು ಟ್ವೀಟ್​ ಮಾಡುವ ಮೂಲಕ ಕಾಂಗ್ರೆಸ್​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಪಕ್ಷದಿಂದ ಹೊರ ಹೋಗಲು ಹೀಗೆ ಮಾಡಿದ್ರಾ..?
ಮೊದಲೇ ಸಚಿವ ಸ್ಥಾನ ಹಾಗೂ ಪುತ್ರನಿಗೆ ಎಂಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ರೋಷನ್ ಬೇಗ್ ಅಸಮಾಧಾನಗೊಂಡಿದ್ದರು. ಈ ಅಸಮಾಧಾನವನ್ನೇ ಬಂಡವಾಳವಾಗಿಸಿಕೊಂಡ ಬಿಜೆಪಿ ರೋಷನ್ ಬೇಗ್ ಅವರನ್ನ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿತ್ತು. ಬಿಜೆಪಿ ಜೊತೆಗಿನ ಮಾತುಕತೆ ಅಂತ್ಯವಾಗಿದ್ದು, ಕಮಲ ಹಿಡಿಯಲು ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ರೋಷನ್ ಬೇಗ್ ಕಾಂಗ್ರೆಸ್ ವಿರುದ್ಧ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗುತ್ತಿದೆ.

ಎಲ್ಲದಕ್ಕೂ ಸಿದ್ಧರಾದ್ರಾ ಬೇಗ್..?
ಹೌದು... ಇವೆಲ್ಲವೂಗಳನ್ನು ಗಮನಿಸಿದ್ರೆ ಕಾಂಗ್ರೆಸ್ ಏನೇ ಕ್ರಮಕೈಗೊಂಡರೂ ಅದಕ್ಕೆ ನಾನು ಸಿದ್ಧ ಎನ್ನುವಂತಿದೆ. ನೋಟಿಸ್ ನೀಡಿದ ಮೇಲೂ ಸ್ವಪಕ್ಷದ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಾರೆ ಅಂದ್ರೆ ಏನು ಅರ್ಥ?. ಪಕ್ಷದಿಂದ ಉಚ್ಚಾಟನೆ ಮಾಡಿದ್ರೂ ಪರವಾಗಿಲ್ಲ  ಎಲ್ಲದಕ್ಕೂ ಸರ್ವಸಿದ್ಧ ಎನ್ನುವಂತಿದೆ. 

ರೋಷನ್ ಬೇಗ್ ಗೇಮ್ ಪ್ಲಾನ್ ಏನು..?
ಸ್ಚಪಕ್ಷದ ನಾಯಕರ ವಿರುದ್ಧ ಮಾತನಾಡುವ ಹಿಂದೆ  ಮಾಸ್ಟರ್ ಪ್ಲಾನ್ ಇದೆ ಎನ್ನುವ ಗುಮಾನಿಗಳು ಇವೆ. ಅದೇನೆಂದರೆ ತಾವಾಗಿಯೇ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿಗೆ ಹೋಗುವುದು ಬೇಡ. ಒಂದು ವೇಳೆ ಹಾಗೇ ಹೋದ್ರೆ ಮುಂದಿನ ಎಲೆಕ್ಷನ್ ನಲ್ಲಿ ಮುಸ್ಲಿಂಮರು ಬಿಜೆಪಿಗೆ ಮತ ಹಾಕುವುದಿಲ್ಲ ಜತೆಗೆ ಜನರು ಬೆಲೆ ಕೊಡಲ್ಲ. ಅದೇ ಪಕ್ಷ ಉಚ್ಚಾಟಿಸಿದ್ರೆ ಕ್ಷೇತ್ರದ ಜನರ ಮುಂದೆ ಹೋಗಿ, ನನ್ನ ಕಾಂಗ್ರೆಸ್ ಹೊರ ಹಾಕಿದೆ. ಹೀಗಾಗಿ ನಾನು ಅನಿರ್ವಾವಾಗಿ ಬಿಜೆಪಿಯಿಂದ ನಿಮ್ಮ ಸೇವೆ ಮಾಡಲು ಬಂದಿದ್ದೇನೆ ಎಂದು ಜನರ ಬಳಿ ಹೇಳುವುದು ರೋಷನ್ ಬೇಗ್ ಗೇಮ್ ಪ್ಲಾನ್ ಆಗಿರಬಹುದು.