ಬೆಂಗಳೂರು [ಜೂ.18] :  ಭಾನುವಾರ ರಾತ್ರೋರಾತ್ರಿ ನಡೆದ ಐಪಿಎಸ್ ಅಧಿಕಾರಿಗಳ ವರ್ಗಾವಣೆಯು ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಿ ರುವ ಕಾಂಗ್ರೆಸ್ ಪಾಳೆಯದಲ್ಲಿ ಅಸಮಾಧಾನ ಮೂಡಿಸಿದೆ.

ರಾಜಧಾನಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸುನೀಲ್ ಕುಮಾರ್ ಅವರನ್ನು ವರ್ಗಾಯಿಸಿರುವುದಕ್ಕೆ ಕಾಂಗ್ರೆಸ್ಸಿನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರ ಬೇಸರಗೊಂಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಅಲ್ಲದೆ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ಐಸ್‌ಐಟಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿ.ಕೆ.ಸಿಂಗ್ ಹಾಗೂ ಅನುಚೇತ್ 
ಅವರನ್ನು ಅಷ್ಟೊಂದು ಮಹತ್ವವಲ್ಲದ ಹುದ್ದೆಗಳಿಗೆ ವರ್ಗಾವಣೆ ಮಾಡಿರುವುದಕ್ಕೆ ಖುದ್ದು ಗೃಹ ಸಚಿವ ಎಂ.ಬಿ.ಪಾಟೀಲ್ ಅವರೂ ಅಸಮಾಧಾನಗೊಂಡಿದ್ದಾರೆ. 

ಜೊತೆಗೆ  ಗೃಹ ಸಚಿವರ ಜಿಲ್ಲೆಯನ್ನೂ ಒಳಗೊಂಡಿರುವ ಉತ್ತರ ವಲಯದ ಐಜಿಪಿಯನ್ನು ಎತ್ತಂಗಡಿ ಮಾಡಿರುವ ಬಗ್ಗೆ ಅವರಿಗೆ ಮಾಹಿತಿ ನೀಡಿರಲಿಲ್ಲ ಎಂದು ಗೊತ್ತಾಗಿದೆ. ಇದು ಕೂಡ ಅವರ ಅತೃಪ್ತಿಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. 

ಸಾಮಾನ್ಯವಾಗಿ ಸರ್ಕಾರಿ ರಜಾದಿನಗಳಂದು ಪ್ರಮುಖ ಸ್ಥಾನಗಳ ಅಧಿಕಾರಿಗಳ ವರ್ಗಾವಣೆ ಆದೇಶ ಹೊರಬೀಳುವುದಿಲ್ಲ. ಆದರೆ, ಭಾನುವಾರ ದೆಹಲಿಯಿಂದ ವಾಪಸಾದ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರು ತಮ್ಮ ಆಪ್ತರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಅಂತಿಮಗೊಳಿಸಿದರು.